ದತ್ತಮಾಲಾ ಅಭಿಯಾನಕ್ಕೆ ಸಿಎಂಗೆ ಆಮಂತ್ರಣ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಸೆ.11-ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಆಮಂತ್ರಣ ನೀಡಲಾಗುವುದು ಎಂದು ಶ್ರೀರಾಮ ಸೇನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದತ್ತಮಾಲೆ ಧರಿಸಿ ಅಭಿಯಾನದಲ್ಲಿ ಭಾಗವಹಿಸುವುದಾಗಿ ಯಡಿಯೂರಪ್ಪ ಹೇಳಿದ್ದರು. ಅದರಂತೆ ಇದೇ 16 ರಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ದತ್ತಮಾಲೆ ಧರಿಸಿ ಭಾಗವಹಿಸುವಂತೆ ಆಮಂತ್ರಣ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಅ.6 ರಿಂದ 13ರವರೆಗೆ ಶ್ರೀರಾಮ ಸೇನೆ ವತಿಯಿಂದ 13ನೇ ವರ್ಷದ ದತ್ತಮಾಲಾ ಅಭಿಯಾನ ನಡೆಯಲಿದೆ ಎಂದ ಅವರು, ಅ.6 ರಂದು ಚಿಕ್ಕಮಗಳೂರು ನಗರದ ಶಂಕರಮಠದಲ್ಲಿ ದತ್ತ ಭಕ್ತರಿಗೆ ದತ್ತಮಾಲಾಧಾರಣೆ ನಡೆಯಲಿದೆ ಎಂದು ತಿಳಿಸಿದರು.

ಮಾಲಾಧಾರಿಗಳು 7 ದಿನಗಳ ವ್ರತಾಚರಣೆ ಮಾಡಿ ಅ.13 ರಂದು ಬೆಳಗ್ಗೆ 9 ಗಂಟೆಗೆ ಬಸವನಹಳ್ಳಿಯ ಶಂಕರ ಮಠದ ಬಳಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಶೋಭಾಯಾತ್ರೆಯು ಎಂ.ಜಿ.ರಸ್ತೆ ಮೂಲಕ ಆಜಾದ್ ಪಾರ್ಕ್ ತಲುಪಲಿದ್ದು, ಶ್ರೀರಾಮಸೇನೆಯ ಹಾಗೂ ರಾಜ್ಯದ ವಿವಿಧೆಡೆಯಿಂದ 5 ಸಾವಿರ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಶೋಭಾಯಾತ್ರೆ ನಂತರ ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳ ದರ್ಶನ ಮಾಡಿ ಧಾರ್ಮಿಕ ಸಭೆ, ಪೂಜೆ, ಹೋಮ ಕೈಂಕರ್ಯಗಳು ಜರುಗಲಿದೆ.  ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಪುನನ್ ಕಾಶ್ಮೀರ, ಸಂಘಟನೆಯ ರಾಷ್ಟ್ರೀಯ ಸಂಚಾಲಕ ರಾಹುಲ್‍ಕೌಲ್ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಶ್ರೀರಾಮಸೇನೆಯ 13 ವರ್ಷಗಳಿಂದ ದತ್ತಮಾಲಾ ಅಭಿಯಾನ ನಡೆಯುತ್ತಿದ್ದು, ದತ್ತಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸುವುದು, ದತ್ತಾತ್ರೇಯ ವಿಗ್ರಹ ಪ್ರತಿಷ್ಠಾಪನೆ, ಪೀಠದಲ್ಲಿ ಅಮೂಲ್ಯ ವಿಗ್ರಹಗಳು ಮತ್ತು ಕಾಣಿಕೆಗಳು ನಾಪತ್ತೆಯಾಗಿರುವ ಬಗ್ಗೆ ತನಿಖೆ ನಡೆಸಬೇಕೆದು ಒತ್ತಾಯಿಸಿದರು.

ಈ ಎಲ್ಲಾ ವಿವಾದಕ್ಕೆ ಅಂತ್ಯ ಹಾಡಲು ಈಗ ಕಾಲ ಕೂಡಿ ಬಂದಿದೆ. ದತ್ತಪೀಠದ ಹೋರಾಟದಲ್ಲಿ ಬಿಜೆಪಿಯು ಮುಂಚೂಣಿಯಲ್ಲಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರು ವುದರಿಂದ ಹಿಂದೂಗಳಿಗೆ ನ್ಯಾಯ ಒದಗಿಸಬೇಖೆಂದು ಆಗ್ರಹಿಸಿದರು.  ಶ್ರೀರಾಮಸೇನೆಯ ರಾಜ್ಯ ಪ್ರಧಾನಕಾರ್ಯದರ್ಶಿ ಆನಂದ್‍ಶೆಟ್ಟಿ, ದುರ್ಗಸೇನೆಯ ಜಿಲ್ಲಾಧ್ಯಕ್ಷೆ ಶಾರದಮ್ಮ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ರಂಜಿತ್‍ಶೆಟ್ಟಿ, ಮಹೇಶ್‍ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments