ಪೊಲೀಸರ ಮಾದರಿಯಲ್ಲೇ ಅರಣ್ಯ ಸಿಬ್ಬಂದಿಗೂ ಪರಿಹಾರ ನಿಧಿ ಅನ್ವಯ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.11-ಕರ್ತವ್ಯ ಸಮಯದಲ್ಲಿ ಪೊಲೀಸರು ಮೃತಪಟ್ಟರೆ ನೀಡಲಾಗುತ್ತಿದ್ದ 30 ಲಕ್ಷ ರೂ. ಪರಿಹಾರವನ್ನು ಇನ್ನು ಮುಂದೆ ಅರಣ್ಯ ಸಿಬ್ಬಂದಿಗಳಿಗೂ ನೀಡಲಾಗುವುದೆಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಘೋಷಿಸಿದರು. ಈವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಕರ್ತವ್ಯದ ಸಂದರ್ಭದಲ್ಲಿ ಸಾವನ್ನಪ್ಪಿದರೆ 20 ಲಕ್ಷ ರೂ. ಪರಿಹಾರ ನೀಡಲಾಗುತ್ತಿತ್ತು.  ಪೊಲೀಸರಿಗೆ ಕೊಡಲಾಗುತ್ತಿದ್ದ 30 ಲಕ್ಷ ರೂ.ಪರಿಹಾರದ ಮೊತ್ತವನ್ನು ಅರಣ್ಯ ಸಿಬ್ಬಂದಿಗೂ ಅನ್ವಯವಾಗುವಂತೆ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಅರಣ್ಯ ಇಲಾಖೆ ವತಿಯಿಂದ ಅರಣ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅರಣ್ಯ ಸಿಬ್ಬಂದಿಗೆ ಪರಿಹಾರ ಹೆಚ್ಚಳ ಮಾಡುವ ಸಂಬಂಧ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಇಂದೇ ಚರ್ಚೆ ಮಾಡಿ ಆದೇಶ ಹೊರಡಿಸುವುದಾಗಿ ತಿಳಿಸಿದರು.

ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ವೇತನ ಹೆಚ್ಚಳ ಹಾಗೂ ಕೆಲವು ಸೌಲಭ್ಯಗಳನ್ನು ಒದಗಿಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಇದೇ ರೀತಿ ಹುತಾತ್ಮ ಕುಟುಂಬದವರ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಸರ್ಕಾರದ ಸವಲತ್ತುಗಳನ್ನು ನೀಡಲು ಸರ್ಕಾರ ಕಟೀಬದ್ಧವಾಗಿದೆ ಎಂದು ಭರವಸೆ ನೀಡಿದರು.

ಅತ್ಯಮೂಲ್ಯವಾದ ಅರಣ್ಯ ಸಂಪತ್ತನ್ನು ಸಂರಕ್ಷಣೆ ಮಾಡಲು ಅರಣ್ಯ ಸಿಬ್ಬಂದಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಾರೆ. ಹುತಾತ್ಮರಾದವರನ್ನು ಸ್ಮರಿಸುವುದು ಹಾಗೂ ಅವರ ಕುಟುಂಬದವರನ್ನು ರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದರು.

ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಅರಣ್ಯ ಸಂಪತ್ತು ಹೊಂದಿರುವ ಮೂರನೇ ರಾಜ್ಯವಾಗಿದೆ. ರಾಜ್ಯದಲ್ಲಿ ಒಟ್ಟು 4,33,287 ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಒಟ್ಟು ಶೇ.27ರಷ್ಟು ಅರಣ್ಯ ಸಂಪತ್ತನ್ನು ಹೊಂದಿರುವುದು ನಮ್ಮ ಸೌಭಾಗ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅತ್ಯಮೂಲ್ಯವಾದ ಹುಲಿ, ಸಿಂಹ, ಚಿರತೆಗಳು ಯತೇಚ್ಛವಾಗಿ ಅರಣ್ಯ ಪ್ರದೇಶದಲ್ಲಿದೆ. ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಎರಡನೇ ರಾಜ್ಯ ಎಂಬ ಖ್ಯಾತಿಗೆ ಕರ್ನಾಟಕ ಪಾತ್ರವಾಗಿದೆ. ಇದಕ್ಕೆ ಅರಣ್ಯ ಸಿಬ್ಬಂದಿಯೇ ಕಾರಣ ಎಂದು ಪ್ರಶಂಸಿಸಿದರು.

ಪ್ರಾಚೀನಕಾಲದಿಂದಲೂ ಕರ್ನಾಟಕ ಅಮೂಲ್ಯವಾದ ಅರಣ್ಯ ಸಂಪತ್ತು ಹೊಂದಿತ್ತು ಎಂಬುದನ್ನು ವೇದ-ಉಪನಿಷತ್ತುಗಳಲ್ಲೇ ಋಷಿಮುನಿಗಳು ಉಲ್ಲೇಖಿಸಿದ್ದಾರ. ಮುಂದಿನ ಪೀಳಿಗೆಗೆ ಅರಣ್ಯ ಸಂಪತ್ತನ್ನು ಉಳಿಸಿ, ಬೆಳೆಸಿ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಸಿಎಂ ತಿಳಿಸುವುದು ಕಳ್ಳಕಾಕರಿಂದ ಅರಣ್ಯ ಸಂಪತ್ತು ಲೂಟಿಯಾಗುವುದನ್ನು ತಡೆಯಲು ಇಲಾಖೆಯಲ್ಲಿರುವ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಂಡಿದ್ದೇವೆ. ಅದೇ ರೀತಿ ಸಿಬ್ಬಂದಿಗೆ ಅಗತ್ಯವಿರುವ ಸಲಕರಣೆಗಳು ಸೇರಿದಂತೆ ವಿವಿಧ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ಮಾನವ ಸಂಘರ್ಷ ತಡೆಗಟ್ಟಲು ಸರ್ಕಾರ ಹಲವು ರೀತಿಯ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಆನೆಗಳ ಹಾವಳಿ ಯಿಂದ ರೈತರ ಬೆಳೆಗಳು ನಷ್ಟವಾಗುತ್ತಿತ್ತು. ಇದಕ್ಕಾಗಿ ಆನೆ ಮತ್ತು ಮಾನವ ನಡುವಿನ ಸಂಘರ್ಷಗಳನ್ನು ತಡೆಗಟ್ಟುವತ್ತ ಗಮನಹರಿಸಿದ್ದೇವೆ. ಅರಣ್ಯ ಉಳಿಸಬೇಕೆಂಬುದು ಸರ್ಕಾರದ ಪ್ರಮುಖ ಉದ್ದೇಶಗಳಲ್ಲೊಂದು. ಇದಕ್ಕಾಗಿ ಸಿಬ್ಬಂದಿ ಕೂಡ ಕೈಜೋಡಿಸಬೇಕೆಂದು ಯಡಿ ಯೂರಪ್ಪ ಮನವಿ ಮಾಡಿದರು.

ಇದೇ ವೇಳೆ ಕರ್ತವ್ಯ ಸಂದರ್ಭದಲ್ಲಿ ಹುತಾತ್ಮರಾದ ಅರಣ್ಯ ಸಿಬ್ಬಂದಿಗೆ ಮೂರು ಸುತ್ತು ಕುಶಾಲತೋಪು ಹಾರಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್‍ದವೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪುನಾಟಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Facebook Comments