ಸೋಮವಾರ ಸಂಪುಟ ರಚನೆ, 15ಕ್ಕೂ ಹೆಚ್ಚು ಶಾಸಕರಿಗೆ ಮಂತ್ರಿಯೋಗ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.17- ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಸೋಮವಾರ ನಡೆಯಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರ ಸಂಪುಟಕ್ಕೆ 15ಕ್ಕೂ ಹೆಚ್ಚು ಸಚಿವರು ಮೊದಲ ಹಂತದಲ್ಲೇ ಸೇರ್ಪಡೆಯಾಗಲಿದ್ದಾರೆ.

ಸೋಮವಾರ 12 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅಧಿಕಾರ ಗೌಪ್ಯತೆಯನ್ನು ಬೋಧಿಸಲಿದ್ದಾರೆ.

ದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಷಾ ಜೊತೆ ಮಾತುಕತೆ ನಡೆಸಲಿದ್ದಾರೆ.  ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ.ನಡ್ಡಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಚಿವ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ದಪಡಿಸಿ ಅಮಿತ್ ಷಾ ಅವರ ಅನುಮತಿಗೆ ಕಾಯುತ್ತಿದ್ದಾರೆ.

ಸಂಜೆ ಔಪಚಾರಿಕವಾಗಿ ಅಮಿತ್ ಷಾ ಜೊತೆ ಯಡಿಯೂರಪ್ಪ ಹಾಗೂ ದೆಹಲಿಗೆ ತೆರಳಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮುಖಂಡರಾದ ಆರ್.ಅಶೋಕ್, ಗೋವಿಂದ ಕಾರಜೋಳ ಮತ್ತಿತರರು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆಯುವರು.

ನಿನ್ನೆ ತಡರಾತ್ರಿಯೇ ಯಡಿಯೂರಪ್ಪ ಮತ್ತು ಸಂತೋಷ್ ಮಾತುಕತೆ ನಡೆಸಿ ಮೊದಲ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವವರ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ಣ ಮಟ್ಟದಲ್ಲಿ ಸಂಪುಟ ವಿಸ್ತರಣೆ ಮಾಡದೆ ಅನರ್ಹಗೊಂಡಿರುವ 17 ಶಾಸಕರ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೂ ಸಂಪುಟದಲ್ಲಿ ಕೆಲವು ಸ್ಥಾನಗಳನ್ನು ಖಾಲಿ ಬಿಡುವಂತೆ ಬಿಎಸ್‍ವೈಗೆ ವರಿಷ್ಠರು ಸೂಚಿಸಿದ್ದಾರೆ. ಹೀಗಾಗಿ ಮೊದಲು 12ರಿಂದ 16 ಸಚಿವರು ಅಧಿಕಾರ ಸ್ವೀಕರಿಸುವರು.

ಇನ್ನೊಂದು ಮೂಲಗಳ ಪ್ರಕಾರ ತಡರಾತ್ರಿ ಅಮಿತ್ ಷಾ, ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ಜೊತೆ ಮಾತುಕತೆ ನಡೆಸಿದ್ದು, ಸಂಪುಟ ವಿಸ್ತರಣೆಗೆ ಅಸ್ತು ಎಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಜೆ.ಪಿ.ನಡ್ಡಾ ಅವರು ಬಿಎಸ್‍ವೈ ಗಮನಕ್ಕೆ ತಂದಿದ್ದು, ಸೋಮವಾರ ಸಂಪುಟ ವಿಸ್ತರಣೆಗೆ ರಾಜ್ಯಪಾಲರ ಅನುಮತಿ ಪಡೆಯಲು ಸಲಹೆ ಕೊಟ್ಟಿದ್ದಾರೆ. ಸಂಜೆ ನವದೆಹಲಿಯಿಂದ ಆಗಮಿಸಲಿರುವ ಯಡಿಯೂರಪ್ಪ ನಾಳೆ ರಾಜ್ಯಪಾಲರನ್ನು ಭೇಟಿಯಾಗಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯಲಿದ್ದಾರೆ.

ಮೊದಲ ಹಂತದ ವಿಸ್ತರಣೆಯಲ್ಲಿ ಜಾತಿ, ಪ್ರದೇಶವಾರು, ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಕ್ಷೇತ್ರದಲ್ಲಿ ಮತದಾರರ ಜೊತೆ ಇಟ್ಟುಕೊಂಡಿರುವ ಸಂಪರ್ಕ, ಸದನದಲ್ಲಿ ಪ್ರತಿಪಕ್ಷಗಳನ್ನು ಎದುರಿಸುವ ಸಾಮಥ್ರ್ಯ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ಸಚಿವ ಸ್ಥಾನ ನೀಡಲಾಗುತ್ತಿದೆ.

ಹಿಂದಿನಂತೆ ಲಾಬಿ, ಜಾತಿಯನ್ನು ಮಾನದಂಡವಾಗಿಟ್ಟುಕೊಳ್ಳದೆ ಪಕ್ಷದ ಸಂಘಟನೆ ಮತ್ತು ಸರ್ಕಾರಕ್ಕೆ ಒಂದಿಷ್ಟು ಹೆಸರು ತಂದುಕೊಡುವ ಮುಖಗಳನ್ನೇ ಸಂಪುಟಕ್ಕೆ ತೆಗೆದುಕೊಳ್ಳುವಂತೆ ಯಡಿಯೂರಪ್ಪನವರಿಗೆ ಬಿಜೆಪಿ ವರಿಷ್ಠರು ಸೂಚನೆ ಕೊಟ್ಟಿದ್ದಾರೆ.

# ಯಾರ್ಯಾರಿಗೆ ಮಣೆ:
ಮೂಲಗಳ ಪ್ರಕಾರ ಸೋಮವಾರ ವಿಸ್ತರಣೆಯಾಗಲಿರುವ ಸಂಪುಟಕ್ಕೆ 16 ಸಚಿವರ ಸೇರ್ಪಡೆಯಾಗುವರು. ಉಳಿದ 17 ಸ್ಥಾನಗಳನ್ನು ಪರಿಸ್ಥಿತಿಗನುಗುಣವಾಗಿ ವಿಸ್ತರಣೆ ಮಾಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವವಿದೆ. ಲಿಂಗಾಯಿತ, ಒಕ್ಕಲಿಗ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಸಮುದಾಯಗಳಿಗೂ ಆದ್ಯತೆ ಸಿಗಲಿದೆ.

ಮಹಿಳಾ ಕೋಟಾದಲ್ಲಿ ಬೆಳಗಾವಿ ಜಿಲ್ಲೆ ನಿಪ್ಪಾಣಿ ಶಾಸಕರಾದ ಶಶಿಕಲಾ ಜೊಲ್ಲೆ , ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಡುವೆ ಸ್ಪರ್ಧೆಯಿದೆ. ಪರಿಶಿಷ್ಟ ಪಂಗಡದಿಂದ ಶ್ರೀರಾಮುಲು, ಬಾಲಚಂದ್ರ ಜಾರಕಿಹೊಳಿ ಸಚಿವರಾಗುವುದು ಖಚಿತವಾಗಿದ್ದರೆ, ಶಾಸಕರಾದ ಶಿವನಗೌಡ ನಾಯಕ್ ಹಾಗೂ ರಾಜುಗೌಡ ನಾಯಕ್ ಅವರ ನಡುವೆಯೂ ಸ್ಪರ್ಧೆ ಏರ್ಪಟ್ಟಿದೆ.

ಬೆಳಗಾವಿಯಿಂದ ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ಧಾರವಾಡದಿಂದ ಜಗದೀಶ್ ಶೆಟ್ಟರ್, ಹಾವೇರಿಯಿಂದ ಬಸವರಾಜ್‍ಬೊಮ್ಮಾಯಿ, ನೆಹರು ಓಲೇಕಾರ್, ದಾವಣಗೆರೆಯಿಂದ ಎಂ.ಪಿ.ರೇಣುಕಾಚಾರ್ಯ, ಬಳ್ಳಾರಿಯಿಂದ ಕರುಣಾಕರ ರೆಡ್ಡಿ, ಚಿತ್ರದುರ್ಗದಿಂದ ಶ್ರೀರಾಮುಲು, ಕೊಪ್ಪಳದಿಂದ ಹಾಲಪ್ಪ ಆಚಾರ್ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಬಾಗಲಕೋಟೆಯಲ್ಲಿ ಗೋವಿಂದಕಾರಜೋಳ, ಬೀದರ್‍ನಿಂದ ಪ್ರಭು ಚವ್ಹಾಣ್, ಬಿಜಾಪುರದಿಂದ ಬಸನಗೌಡ ಪಾಟೀಲ್ ಯತ್ನಾಳ್, ಎನ್.ಎಸ್.ನಡಹಳ್ಳಿ, ಉಡುಪಿಯಿಂದ ವಿ.ಸುನಿಲ್‍ಕುಮಾರ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಮೇಲ್ಮನೆ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರುಗಳ ನಡುವೆ ಸ್ಪರ್ಧೆ ಇದೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದಿಂದ ಸತತ 6 ಬಾರಿ ಗೆದ್ದಿರುವ ಎಸ್.ಅಂಗಾರ, ಮಡಿಕೇರಿಯಿಂದ ಅಪ್ಪಚ್ಚು ರಂಜನ್, ಭೋಪಯ್ಯ ನಡುವೆ ಬಿರುಸಿನ ಸ್ಪರ್ಧೆ ಇದೆ. ರಾಜಧಾನಿ ಬೆಂಗಳೂರಿನಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಯಕ್ಷ ಪ್ರಶ್ನೆಯಾಗಿದೆ.

ಸದ್ಯಕ್ಕೆ ಹಿರಿಯರಾದ ಆರ್.ಅಶೋಕ್ ಮತ್ತು ವಿ.ಸೋಮಣ್ಣ ಸಂಪುಟಕ್ಕೆ ಸೇರ್ಪಡೆಯಾಗಲಿದ್ದು, ಉಳಿದಂತೆ ಎಸ್.ಸುರೇಶ್‍ಕುಮಾರ್, ಅರವಿಂದ ಲಿಂಬಾವಳಿ, ಡಾ.ಅಶ್ವಥ್ ನಾರಾಯಣ, ರವಿ ಸುಬ್ರಹ್ಮಣ್ಯ ಹೆಸರುಗಳು ಕೇಳಿಬಂದಿವೆ. ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕರೆ ಭಾನುವಾರ ಅಥವಾ ಸೋಮವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ನಿರೀಕ್ಷೆ ಇದೆ.

Facebook Comments

Sri Raghav

Admin