ತಿಪ್ಪಾರೆಡ್ಡಿಗೆ ತಪ್ಪಿದ ಸಚಿವ ಸ್ಥಾನ, ಚಿತ್ರದುರ್ಗದಲ್ಲಿ ರೊಚ್ಚಿಗೆದ್ದ ಬೆಂಬಲಿಗರ ಪ್ರತಿಭಟನೆ, ಲಘು ಲಾಠಿ ಪ್ರಹಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.20-ಚಿತ್ರದುರ್ಗದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹಿರಿಯ ಶಾಸಕ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿ ಬೈಕ್‍ಗಳಿಗೆ ಬೆಂಕಿ ಹಚ್ಚಿ ದಾಂಧಲೆನಡೆಸಿದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಿದರು.

ಸಚಿವಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹಿರಿಯ ಶಾಸಕ ತಿ ತಿಪ್ಪಾರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಇಂದು 11 ಗಂಟೆ ಸುಮಾರಿಗೆ ಬೆಂಗಳೂರು-ಚಿತ್ರದುರ್ಗ ನಗರ ಹಲವೆಡೆ ಧರಣಿ, ಪ್ರತಿಭಟನೆ, ದಾಂಧಲೆ ನಡೆಸಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ 10 ಜನ ಧರಣಿ ನಿರತರನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಎಸ್‍ಪಿ ಡಾ.ಕೆ.ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ಸಚಿವ ಸ್ಥಾನ ನೀಡದಿರುವುದಕ್ಕೆ ನನಗೆ ತೀವ್ರ ಅಸಮಾಧಾನವಾಗಿದೆ. ಚಿತ್ರದುರ್ಗ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ.

ಪಕ್ಷದ ಸೇವೆ ಹಿರಿತನವನ್ನು ಆಧರಿಸಿ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಯಾವ ಕಾರಣಕ್ಕೆ ಕೈತಪ್ಪಿದೆ ಎಂದು ಗೊತ್ತಿಲ್ಲ. ಈ ಸಂಬಂಧ ಯಡಿಯೂರಪ್ಪ ಮತ್ತು ಹೈಕಮಾಂಡ್ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಅತ್ತ ಹೈದರಾಬಾದ್-ಕರ್ನಾಟಕ ಭಾಗದಲ್ಲೂ ಪ್ರತಿಭಟನೆಗಳು ನಡೆದಿವೆ. ಹೈದರಾಬಾದ್-ಕರ್ನಾಟಕ ಜಿಲ್ಲೆಗಳಿಗೆ ಅನ್ಯಾಯವಾಗಿದೆ. ಸಚಿವ ಸಂಪುಟದಲ್ಲಿ ಈ ಭಾಗದ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ.

ಆರೂ ಜಿಲ್ಲೆಗಳಲ್ಲಿ ಹೆಚ್ಚು ಜನ ಶಾಸಕರಿದ್ದರೂ ಒಬ್ಬರನ್ನು ಮಾತ್ರ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೈದರಾಬಾದ್-ಕರ್ನಾಟಕ ಕಲ್ಯಾಣ ಸಮಿತಿಯವರು ಪ್ರತಿಭಟನೆ ನಡೆಸಿ ಪ್ರತ್ಯೇಕ ಕರ್ನಾಟಕಕ್ಕಾಗಿ ಒತ್ತಾಯಿಸಿದ್ದಾರೆ.

ಯಾವುದೇ ಸರ್ಕಾರ ಬಂದರೂ ನಮ್ಮ ಭಾಗಕ್ಕೆ ಅನ್ಯಾಯ ನಿರಂತರವಾಗಿರುತ್ತದೆ. ನಾವು ಪ್ರತ್ಯೇಕವಾಗಿರುವುದು ಸೂಕ್ತ ಎಂದು ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin