ಭಾನುವಾರ ಸಂಪುಟ ಸೇರಲಿದ್ದಾರೆ 12 ಮಂದಿ ಶಾಸಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.30- ಒಂದು ವೇಳೆ ದೆಹಲಿ ವರಿಷ್ಠರು ಅನುಮತಿ ನೀಡಿದರೆ ನೆನೆಗುದಿಗೆ ಬಿದ್ದಿರುವ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಭಾನುವಾರ ನಡೆಯುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾತ್ರಿ 9 ಗಂಟೆಗೆ ಪಕ್ಷದ ರಾಷ್ಟ್ರೀಯ ನೂತನ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಇಂದು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ನಾಳೆಯೊಳಗೆ ಶೇ.99ರಷ್ಟು ಸಂಪುಟ ವಿಸ್ತರಣೆ ಕ್ಲಿಯರ್(ಇತ್ಯರ್ಥ) ಆಗಲಿದೆ. ಸಮಯ ಮತ್ತು ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿರುವುದು ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಎಂದೇ ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಭಾನುವಾರ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಮಯ ನಿಗದಿಪಡಿಸಿದ್ದು ಅಂದು 12 ಮಂದಿ ಶಾಸಕರು ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ.
ನವದೆಹಲಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಅಮಿತ್ ಷಾ ಅವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿರುವ ಬಿಎಸ್‍ವೈ, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತಂತೆ ಮಾತುಕತೆ ನಡೆಸುವರು.

ಈಗಾಗಲೇ ಸಚಿವರ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದು ವರಿಷ್ಠರ ಬಳಿ ಯಾರ್ಯಾರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು, ಖಾತೆ ಹಂಚಿಕೆ ಹಾಗೂ ಸಂಪುಟದಿಂದ ಕೈಬಿಡುವವರ ಬಗ್ಗೆಯೂ ಚರ್ಚೆ ನಡೆಸುವರು. ಮೂಲಗಳ ಪ್ರಕಾರ ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಶಾಸಕರ ಪೈಕಿ 9 ಮಂದಿ ಹಾಗೂ ಮೂಲ ಬಿಜೆಪಿಯಿಂದ ಮೂವರು ಮೊದಲ ಹಂತದಲ್ಲಿ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವವಿದೆ.

ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್, ಆನಂದ್ ಸಿಂಗ್, ಕೆ.ಸಿ.ನಾರಾಯಣ ಗೌಡ, ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಉಮೇಶ್ ಕತ್ತಿ, ಅರವಿಂದ ಲಿಂಬಾವಳಿ ಹಾಗೂ ಹಾಲಪ್ಪ ಆಚಾರ್ ಅವರಿಗೆ ಮಂತ್ರಿಯಾಗುವ ಸೌಭಾಗ್ಯ ಒದಗಿಬರಲಿದೆ ಎಂದು ಹೇಳಲಾಗುತ್ತಿದೆ.

ಈ ನಡುವೆ ಸುರಪುರದ ರಾಜುಗೌಡ ನಾಯಕ್, ಕುಂದಾಪುರದ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಸುಳ್ಯದ ಎಸ್.ಅಂಗಾರ, ವಿರಾಜಪೇಟೆ ಕೆ.ಜಿ.ಬೋಪಯ್ಯ, ಕೃಷ್ಣರಾಜ ಕ್ಷೇತ್ರದ ಎಸ್.ಎ.ರಾಮದಾಸ್, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಮತ್ತಿತರರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಇರುವ 16 ಸ್ಥಾನಗಳಲ್ಲಿ ಯಾರಿಗೆ ಮಂತ್ರಿ ಸ್ಥಾನ ನೀಡಬೇಕು, ಇನ್ಯಾರನ್ನು ಸಂಪುಟದಿಂದ ಕೈ ಬಿಡಬೇಕು ಎಂಬುದೇ ಬಿಎಸ್‍ವೈಗೆ ನುಂಗಲಾರದ ತುತ್ತಾಗಿದೆ. ಮಂತ್ರಿ ಸ್ಥಾನ ಕೈ ತಪ್ಪಿದವರು ಭುಗಿಲೇಳಬಹುದೆಂಬ ಆತಂಕವೂ ಅವರನ್ನು ಕಾಡುತ್ತಿದೆ.

ದೆಹಲಿ ನಾಯಕರ ಬಳಿ ಈ ಎಲ್ಲ ಬೆಳವಣಿಗೆ ಕುರಿತಂತೆ ಸುದೀರ್ಘವಾಗಿ ಚರ್ಚೆ ನಡೆಸಲಿರುವ ಯಡಿಯೂರಪ್ಪ ನಾಳೆ ಬೆಂಗಳೂರಿಗೆ ಹಿಂತಿರುಗಲಿದ್ದು, ಭಾನುವಾರ ವಿಸ್ತರಣೆಗೆ ಸಮಯವನ್ನು ನಿಗದಿಪಡಿಸುವ ಸಾಧ್ಯತೆ ಇದೆ.

ಶನಿವಾರ ಕೇಂದ್ರ ಸರ್ಕಾರದ ಬಜೆಟ್ ಮಂಡನೆಯಾಗಲಿದ್ದು, ಅಂದು ಸಂಪುಟ ವಿಸ್ತರಣೆಗೆ ವರಿಷ್ಠರು ಅವಕಾಶ ನೀಡುವ ಸಾಧ್ಯತೆಗಳು ತೀರಾ ಕಡಿಮೆ. ಹೀಗಾಗಿ ಭಾನುವಾರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗುವ ಸಾಧ್ಯತೆಗಳು ಗೋಚರಿಸಿವೆ.

Facebook Comments

Sri Raghav

Admin