ಯಡಿಯೂರಪ್ಪರಿಂದ ದೂರ ಸರಿಯುತ್ತಿದ್ದಾರಾ ‘ಆಪ್ತ ಅತೃಪ್ತರು’..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸದಾ ಬಹುಪಾರಕ್ ಹಾಕುತ್ತಲೇ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡಿದ್ದ ಆಪ್ತರು ಒಬ್ಬೊಬ್ಬರಾಗಿಯೇ ನಿಧಾನವಾಗಿ ಕೈ ಕೊಡುತ್ತಿದ್ದಾರೆ. ನಾಯಕತ್ವ ಬದಲಾವಣೆಯಾಗಲಿದೆ ಎಂಬ ಪುಕಾರು ಒಂದು ಕಾರಣವಾದರೆ, ಇತ್ತೀಚಿಗೆ ಸಿಎಂ ಅವರ ಕಾರ್ಯವೈಖರಿಯೂ ಕೂಡ ಆಪ್ತಕೂಟ ದೂರ ಸರಿಯಲು ಮತ್ತೊಂದು ಪ್ರಮುಖ ಕಾರಣವಾಗಿದೆ.

ಯಡಿಯೂರಪ್ಪ ಅಂದರೆ ಬಿಜೆಪಿ, ಬಿಜೆಪಿ ಅಂದರೆ ಯಡಿಯೂರಪ್ಪ ಎನ್ನುತ್ತಲೇ ಅವರ ನಾಮಬಲದಿಂದ ಗೆದ್ದು ಬಂದಿದ್ದ ಬಹುತೇಕ ಶಾಸಕರು ಇತ್ತೀಚೆಗೆ ಕೃಷ್ಣ ಹಾಗೂ ಕಾವೇರಿ ಅಂಗಳದತ್ತ ಮುಖ ಮಾಡದೆ ಇರುವುದು ಇದಕ್ಕೆ ಪುಷ್ಟಿ ನೀಡುವಂತಿದೆ. ಎಂಥದ್ದೇ ಸಂದರ್ಭ ಬಂದರೂ ಕೊಟ್ಟ ಮಾತು ಉಳಿಸಿಕೊಳ್ಳುವ ಏಕೈಕ ರಾಜಕಾರಣಿ ಎಂದು ವಿರೋಧಿಗಳಿಂದಲೂ ಹೊಗಳಿಸಿಕೊಳ್ಳುತ್ತಿದ್ದ ಯಡಿಯೂರಪ್ಪ ಅವರನ್ನು ಈಗ ಆಪ್ತರೇ ನಂಬುತ್ತಿಲ್ಲ.

2008ರಲ್ಲಿ ಸಿಎಂ ಆಗಿದ್ದ ವೇಳೆ ಅಂದಿನ ಯಡಿಯೂರಪ್ಪನವರಿಗೂ ಈಗಿನ ನಡಾವಳಿಕೆಗೂ ಸಾಕಷ್ಟು ಬದಲಾವಣೆಯಾಗಿರುವುದರಿಂದಲೇ ಅವರ ಮಾನಸ ಪುತ್ರರತ್ನರಂತಿದ್ದ ಹಿಂಬಾಲಕರು ಕೂಡ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಿಎಸ್‍ವೈ ಅವರ ಮಾನಸಪುತ್ರರಂತಿದ್ದ ಮಾಜಿ ಸಚಿವ ಮುರುಗೇಶ್ ನಿರಾಣಿ, ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಎಂ.ಪಿ.ರೇಣುಕಾಚಾರ್ಯ, ರಾಜುಗೌಡನಾಯಕ್, ಮಾಡಾಳ್ ವಿರೂಪಾಕ್ಷಪ್ಪ, ಅರಗ ಜ್ಞಾನೇಂದ್ರ, ನೆಹರು ಓಲೇಕಾರ್, ಶಿವನಗೌಡ ನಾಯಕ್, ಉಮೇಶ್ ಕತ್ತಿ ಸೇರಿದಂತೆ ಅನೇಕ ಶಾಸಕರು ದೂರ ಉಳಿದಿದ್ದಾರೆ.

ಪಕ್ಷದ ಮುಖಂಡರನ್ನು ಸೌಜನ್ಯಕ್ಕಾದರೂ ಕೇಳದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆಂಬ ಅಸಮಾಧಾನದ ಮಾತುಗಳು ಸರ್ವೆ ಸಾಮಾನ್ಯವಾಗಿ ಪಕ್ಷದ ಕಚೇರಿಯಲ್ಲಿ ಕೇಳಿ ಬರುತ್ತಿವೆ. ಬಿಜೆಪಿ ಸರ್ಕಾರಕ್ಕೆ ವರ್ಷವಾದರೂ ಪಕ್ಷದ ಕಾರ್ಯಕರ್ತರಲ್ಲಿ ಬಿಜೆಪಿ ಅಧಿಕಾರದಲ್ಲಿದೆ ಎಂಬ ಭಾವನೆ ಬಂದಿಲ್ಲ ಎಂಬುದು ಬಹುತೇಕರ ನೋವಾಗಿದೆ.

ಕಷ್ಟಕಾಲದಲ್ಲಿ ತಮ್ಮ ಜತೆಗಿದ್ದವರನ್ನು ಕಡೆಗಣಿಸಿ ಸಂಪುಟ ಸೇರಿದಂತೆ ಈಗಲೂ ಆಯಕಟ್ಟಿನ ಜಾಗದಲ್ಲಿ ಬೇರೆಯವರಿಗೆ ಮಣೆ ಹಾಕಿರುವುದು ಅಸಮಾಧಾನಕ್ಕೆ ಮತ್ತೊಂದು ಕಾರಣ. ಆಪರೇಷನ್ ಕಮಲದ ಪ್ರಯತ್ನದಲ್ಲಿ ಹೆಚ್ಚಾಗಿ ಕೈಜೋಡಿಸಿದ್ದು ಬೆಂಗಳೂರಿನ ಕೆಲ ಶಾಸಕರೇ. ಆರ್.ಅಶೋಕ್, ವಿ. ಸೋಮಣ್ಣ, ಡಾ.ಅಶ್ವಥ್ ನಾರಾಯಣ, ಎಸ್.ಆರ್.ವಿಶ್ವನಾಥ್ ಬಗ್ಗೆ ಯಡಿಯೂರಪ್ಪಗೆ ಇದ್ದ ಪ್ರೀತಿ ಹೆಚ್ಚಾಗಿದೆ. ಇವರಿಂದಲೇ ತಾನು ಸಿಎಂ ಆಗಲು ಸಾಧ್ಯವಾಯಿತು ಎಂದು ಕೆಲ ಕಡೆ ಯಡಿಯೂರಪ್ಪ ಹೇಳಿಕೊಂಡಿದ್ದುಂಟು. ಇವರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿರುವುದು ಆಪ್ತರ ಕಣ್ಣು ಕೆಂಪಾಗುವಂತೆ ಮಾಡಿದೆ.

# ಸತತ ಹಿನ್ನಡೆ:

ಇನ್ನು ಯಡಿಯೂರಪ್ಪನವರಿಂದ ಆಪ್ತರು ದೂರ ಸರಿಯಲು ಇತ್ತೀಚೆಗೆ ಪ್ರಮುಖ ತೀರ್ಮಾನಗಳಲ್ಲಿ ಕೇಂದ್ರ ವರಿಷ್ಠರು ಅವರಿಗೆ ಸತತವಾಗಿ ಹಿನ್ನಡೆ ಉಂಟುಮಾಡುತ್ತಿರುವುದು. ರಾಜ್ಯಸಭೆ ಚುನಾವಣೆ, ವಿಧಾನ ಪರಿಷತ್‍ಗೆ ಆಯ್ಕೆ, ನಾಮಕರಣ, ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕಾತಿ ಸೇರಿದಂತೆ ಪ್ರಮುಖ ತೀರ್ಮಾನಗಳಲ್ಲಿ ಸಂಘ ಪರಿವಾರದ ನಿಷ್ಠೆಯುಳ್ಳವರಿಗೆ ಪ್ರಾಶಸ್ತ್ಯ ಸಿಗುತ್ತಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಕೋರ್ ಕಮಿಟಿ ಕಳುಹಿಸಿದ ಶಿಫಾರಸನ್ನು ದೆಹಲಿ ನಾಯಕರು ಸಾರಾಸಗಟಾಗಿ ತಿರಸ್ಕರಿಸಿದರು.  ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯಲ್ಲೂ ಪಕ್ಷ ಸೂಚಿಸಿದವರನ್ನೇ ಕಣಕ್ಕಿಳಿಸಲಾಯಿತು. ನಾಮಕರಣ, ನಾಮ ನಿರ್ದೇಶನದ ವಿಷಯದಲ್ಲೂ ಬಿಎಸ್‍ವೈಗೆ ಮುಕ್ತ ಸ್ವಾತಂತ್ರ್ಯ ಸಿಗಲಿಲ್ಲ.

ಇತ್ತೀಚೆಗೆ ನಿಗಮ-ಮಂಡಳಿ ನೆಮಕಾತಿಯಲ್ಲೂ ಯಡಿಯೂರಪ್ಪ ಒಂದಿಷ್ಟು ಆಪ್ತರನ್ನು ನೇಮಕ ಮಾಡಿದರೂ ಅಲ್ಲಿಯೂ ಕೂಡ ಪಕ್ಷದವರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ. ಹೀಗೆ ಎಲ್ಲ ಹಂತದಲ್ಲೂ ದೆಹಲಿ ವರಿಷ್ಠರು ಬಿಎಸ್‍ವೈ ಅವರ ರೆಕ್ಕೆಪುಕ್ಕ ಕತ್ತರಿಸಿರುವುದರಿಂದ ಆಪ್ತರು ದೂರ ಉಳಿದಿದ್ದಾರೆ.  ಹೆಸರು ಹೇಳಲಿಚ್ಛಿಸದ ಪ್ರಮುಖರೊಬ್ಬರು ಹೇಳುವಂತೆ ಯಡಿಯೂರಪ್ಪ ಇತ್ತೀಚೆಗೆ ಯಾರ ಮಾತನ್ನೂ ಕೂಡ ಕೇಳುತ್ತಿಲ್ಲ. ಬೇರೆಯವರಂತೆ ರಾಜಕೀಯ ಚಾಣಾಕ್ಷತನವನ್ನೂ ತೋರುತ್ತಿಲ್ಲ. ಎಲ್ಲವೂ ಏಕಪಕ್ಷೀಯವಾಗಿ ನಡೆಯುವುದರಿಂದ ನಮ್ಮ ಮಾತಿಗೆ ಬೆಲೆಯೇ ಸಿಗುತ್ತಿಲ್ಲ ಎಂದು ನೋವು ಹೊರಹಾಕಿದ್ದಾರೆ.

ಆದರೆ, ಬಿಎಸ್‍ವೈ ಅವರ ಮತ್ತೊಬ್ಬ ಆಪ್ತರು ಹೇಳುವಂತೆ ಮೈತ್ರಿ ಸರ್ಕಾರ ಬೀಳಿಸಲು ನಡೆಸಲಾದ ಆಪರೇಷನ್ ಕಮಲಕ್ಕೆ ಯಡಿಯೂರಪ್ಪ ನಿರೀಕ್ಷಿಸಿದಷ್ಟು ಬೆಂಬಲ ಸಿಕ್ಕಿರಲಿಲ್ಲವಂತೆ. ತಮ್ಮ ಆಪ್ತರೇ ಆಗಿದ್ದ ಹಲವು ಮುಖಂಡರು ಕೈಹಿಡಿಯಲಿಲ್ಲ ಎಂಬುದು ಅವರ ಬೇಸರ. ಹಣಬಲ ಇರುವ ತಮ್ಮ ಆಪ್ತರು, ಸ್ವಜಾತಿಯವರಾದ ಆಪ್ತರೂ ಕೂಡ ಬಿಎಸ್‍ವೈ ಪ್ರಯತ್ನಕ್ಕೆ ಸಹಕರಿಸಲಿಲ್ಲ ಎನ್ನುವ ಆರೋಪವಿದೆ.

ಆಪರೇಷನ್ ಕಮಲಕ್ಕೆ ಸಹಾಯ ಕೇಳಿದಾಗ ಶಾಸಕ ಉಮೇಶ್ ಕತ್ತಿ ತಮ್ಮ ಫೋನ್ ಸ್ವಿಚ್‍ಆಫ್ ಮಾಡಿಕೊಂಡು ಕೈತೊಳೆದುಕೊಂಡರಂತೆ. ಉದ್ಯಮಿಯೂ ಆಗಿರುವ ಮುರುಗೇಶ್ ನಿರಾಣಿ ಕೂಡ ಕೈಚೆಲ್ಲಿದರಂತೆ. ಸದನದಲ್ಲಿ ಆಗಾಗ್ಗೆ ಧ್ವನಿ ಎತ್ತುತ್ತಿದ್ದ ಬಸವರಾಜ್ ಬೊಮ್ಮಾಯಿ ಅವರು ನಾಮಕಾವಸ್ತೆಗೆ ಮಾತ್ರ ಬಿಎಸ್‍ವೈ ಹಿಂದಿಂದೆಯೇ ಸುತ್ತುತ್ತಿದ್ದರೇ ಹೊರತು ವಾಸ್ತವವಾಗಿ ಸಹಾಯಕ್ಕೆ ಬರಲಿಲ್ಲ ಎಂಬ ಅಸಮಾಧಾನವೂ ಇದೆ.

ಮಂತ್ರಿಗಿರಿಗಾಗಿ ಯಡಿಯೂರಪ್ಪ ಬಳಿ ಲಾಬಿ ನಡೆಸುತ್ತಿರುವವರಲ್ಲಿ ಮುರುಗೇಶ್ ನಿರಾಣಿ ಕೂಡ ಒಬ್ಬರು. ಮೂಲತಃ ಕೈಗಾರಿಕೋದ್ಯಮಿಯಾಗಿರುವ ಮುರುಗೇಶ್ ನಿರಾಣಿ 2008ರ ಬಿಎಸ್‍ವೈ ಸರ್ಕಾರದಲ್ಲಿ ಕೈಗಾರಿಕಾ ಮಂತ್ರಿಯಾಗಿಯೂ ಕೆಲಸ ಮಾಡಿದ್ದರು.  ಯಡಿಯೂರಪ್ಪ ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿದಾಗ ಅವರ ಪರ ನಿಲ್ಲಲಿಲ್ಲ. ಆಪರೇಷನ್ ಕಮಲ ಮಾಡುವಾಗಲೂ ಅವರ ಕೈ ಹಿಡಿಯಲಿಲ್ಲ. ತಮ್ಮ ಬಗ್ಗೆ ಯಡಿಯೂರಪ್ಪ ಬೇಸರ ಹೊಂದಿರುವುದನ್ನು ಅರಿತಿರುವ ನಿರಾಣಿಗೆ ಎಲ್ಲಿ ತಮಗೆ ಸಚಿವ ಸ್ಥಾನ ಕೈತಪ್ಪಿ ಬಿಡುತ್ತದೆ ಎಂಬ ಭಯ ಇದೆ.

ಹೀಗಾಗಿ, ಈಗಿನಿಂದಲೇ ಅವರು ಯಡಿಯೂರಪ್ಪ ಬಳಿ ಲಾಬಿ ನಡೆಸುತ್ತಿದ್ದಾರೆ. ತಾವಾಗೇ ಹೋದರೆ ಮುನಿಸಿಕೊಳ್ಳುತ್ತಾರೆಂದು ಪಂಚಮಸಾಲಿ ಸಮಾಜದ ಮುಖಂಡರನ್ನೇ ಮುಂದೆ ಬಿಟ್ಟಿದ್ಧಾರೆ.  ಬಿಜೆಪಿ ಅಧಿಕಾರಕ್ಕೆ ಬಂದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದ ಬಿ.ಎಸ್.ಯಡಿಯೂರಪ್ಪ ಈ ಬಾರಿ ಸಿಎಂ ಆದಾಗಿನಿಂದಲೂ ಹತ್ತು ಹಲವು ಸಮಸ್ಯೆಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

Facebook Comments