ಸಾಲುಸಾಲುಗಳ ಸವಾಲುಗಳನ್ನೆದುರಿಸಿ 1 ವರ್ಷ ಪೂರೈಸಿದ ಯಡಿಯೂರಪ್ಪ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.25- ದಕ್ಷಿಣ ಭಾರತದಲ್ಲಿ 2ನೇ ಬಾರಿಗೆ ಅಧಿಕಾರ ಹಿಡಿದಿರುವ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಳೆ ಒಂದು ವರ್ಷ ಪೂರ್ಣಗೊಳ್ಳಲಿದೆ.

ಹಲವು ನಿರೀಕ್ಷೆಗಳೊಂದಿಗೆ ಅಧಿಕಾರಕ್ಕೆ ಬಂದಿದ್ದ ಸಿಎಂ ಯಡಿಯೂರಪ್ಪ ನವರಿಗೆ ಪ್ರಾರಂಭದಿಂದ ಹಿಡಿದು ಈವರೆಗೂ ಸಾಲುಸಾಲುಗಳ ಸವಾಲುಗಳೇ ಎದುರಾಗಿವೆ.

ರಾಜ್ಯದಲ್ಲಿ ಉಂಟಾದ ಭೀಕರ ಪ್ರವಾಹ, ಸಚಿವ ಸಂಪುಟ ವಿಸ್ತರಣೆ, ಉಪಚುನಾವಣೆ, ಇದೀಗ ಎದುರಾಗಿರುವ ಕೋವಿಡ್ ಹೀಗೆ ಸಾಲು ಸಾಲು ಸವಾಲುಗಳನ್ನೇ ಎದುರಿಸಿ ಸರ್ಕಾರವನ್ನು ಮುನ್ನೆಡೆಸಬೇಕಾದ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.

ಒಂದು ಕಡೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಮತ್ತೊಂದೆಡೆ ಸ್ವಪಕ್ಷೀಯರಿಂದಲೇ ಅಸಹಕಾರ, ಇನ್ನೊಂದೆಡೆ ಭಿನ್ನಮತೀಯರ ಕಿರುಕುಳ ಹೀಗೆ ಕಳೆದ 12 ತಿಂಗಳ ಅವಧಿಯಲ್ಲಿ ಬಿಎಸ್‍ವೈ ಅವರ ಮುಖ್ಯಮಂತ್ರಿ ಕುರ್ಚಿ ಮುಳ್ಳಿನ ಗದ್ದುಗೆ ಆಯಿತೇ ಹೊರತು ಒಂದೇ ಒಂದು ದಿನವು ಸಂತೋಷದಿಂದ ಅಧಿಕಾರ ಅನುಭವಿಸುವ ಸ್ಥಿತಿ ಒದಗಲಿಲ್ಲ.

ಅಪ್ಪಿತಪ್ಪಿಯೂ ಒಂದೇ ಒಂದು ಚೂರು ಆಡಳಿತದ ಹಳಿ ಕೈ ತಪ್ಪಿದರೆ ತಮ್ಮ ಕುರ್ಚಿ ಗೆ ಸಂಕಷ್ಟ ಬರಲಿದೆ ಎಂಬುದನ್ನು ಮನಗಂಡಿರುವ ಯಡಿಯೂರಪ್ಪ ಎಷ್ಟೇ ಏಳುಬೀಳುಗಳಿದ್ದರೂ ಹೊರಜಗತ್ತಿಗೆ ಎಲ್ಲವೂ ಸರಿಯಾಗಿದೆ ಎಂಬ ತೇಪೆ ಹಚ್ಚುವ ರಾಜಕೀಯ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಪ್ರಾರಂಭದಲ್ಲಿ ರಾಜ್ಯ ಹಿಂದೆಂದೂ ಕಾಣದಷ್ಟು ಭೀಕರ ಪ್ರವಾಹಕ್ಕೆ ತುತ್ತಾಯಿತು.

ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆಳೆದು ನಿಂತ ಬೆಳೆ, ಜನಜಾನುವಾರು, ಮನೆ ಸೇರಿದಂತೆ ಎಲ್ಲವೂ ಕೊಚ್ಚಿಕೊಂಡು ಹೋದವು. ಈ ವೇಳೆ ರಾಜ್ಯಕ್ಕೆ ಹೆಬ್ಬಂಡೆಯಂತೆ ನಿಂತರು. ಕೇಂದ್ರ ನೆರೆ ಪರಿಹಾರದಲ್ಲೂ ಸಾಕಷ್ಟು ಎಳೆದಾಡಿ ಕೊನೆಗೆ 1200 ಕೋಟಿ ಬಿಡುಗಡೆ ಮಾಡಿತು.

ಆ ವೇಳೆ ಕೇಂದ್ರದ ವಿರುದ್ಧ ರಾಜ್ಯದ ಜನ ಆಕ್ರೋಶ ಹೊಂದಿದ್ದರು. ಕೊನೆಗೆ ತುಮಕೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಯಡಿಯೂರಪ್ಪ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ರಾಜ್ಯಕ್ಕೆ 50 ಸಾವಿರ ಕೋಟಿ ವಿಶೇಷ ಪ್ಯಾಕೇಜ್ ಕೊಡಬೇಕೆಂದು ನೇರವಾಗಿ ಹೇಳಿ ಕೇಂದ್ರಕ್ಕೆ ಬಿಸಿ ಮುಟ್ಟಿಸಿದರು.

ಬಿಎಸ್‍ವೈ ಅವರ ಈ ಹೇಳಿಕೆ ಪಕ್ಷದ ವಲಯದಲ್ಲಿ ಭಾರಿ ಅಲ್ಲೋಲಕಲ್ಲೋಲವನ್ನೇ ಸೃಷ್ಟಿಸಿತು. ಆದರೆ ಹಠಮಾರಿ ಸ್ವಭಾದ ಬಿಎಸ್‍ವೈ ಯಾವುದಕ್ಕೂ ಜಗ್ಗದೆ ಯಾರಿಗೆ ಸಂದೇಶ ರವಾನಿಸಬೇಕಿತ್ತೊ ಅವರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.

ಪ್ರಕೃತಿ ವಿಕೋಪ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದ್ದ ಕೇಂದ್ರ ಸರ್ಕಾರ ರಾಜ್ಯದ ತೆರಿಗೆ ಪಾಲಿನ ಜಿಎಸ್‍ಟಿ ಹಣವನ್ನೂ ಕೊಡಲು ಮೀನಾಮೇಷ ಎಣಿಸಿತು. ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಬಿಎಸ್‍ವೈ ಸರ್ಕಾರವನ್ನು ಮುನ್ನೆಡೆಸುತ್ತಿದ್ದಾರೆ.

ಈ ಬೆಳವಣಿಗೆಗಳ ನಡುವೆಯೇ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದ 15 ಮಂದಿ ಮಾಜಿ ಶಾಸಕರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಅಲ್ಪ ಮತದಲ್ಲಿದ್ದ ಸರ್ಕಾರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇತ್ತು.

ಕೊನೆಗೆ 15 ಕ್ಷೇತ್ರಗಳಲ್ಲಿ ಮಿಂಚಿನ ಸಂಚಾರ ನಡೆಸಿದ ಬಿಎಸ್‍ವೈ 12 ಕ್ಷೇತ್ರಗಳನ್ನು ಗೆದ್ದು ಸರ್ಕಾರವನ್ನು ಭದ್ರ ಮಾಡಿಕೊಂಡಿದ್ದಲ್ಲದೆ, ಪ್ರತಿ ಪಕ್ಷಗಳಿಗೆ ಮರ್ಮಾಘಾತವನ್ನು ಕೊಟ್ಟರು.

ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಂಪುಟ ವಿಸ್ತರಣೆಗೂ ಮೀನಾಮೇಷ ಎಣಿಸಿದ್ದ ವರಿಷ್ಠರು ಎರಡು ಕಂತುಗಳಲ್ಲಿ ಸಂಪುಟ ವಿಸ್ತರಣೆಗೆ ಅನುಮತಿ ಕೊಟ್ಟರು. ಸದ್ಯ 6 ಸ್ಥಾನಗಳು ಖಾಲಿಯಾಗಿದ್ದು, ಅದನ್ನು ಹೇಗೆ ಭರ್ತಿ ಮಾಡುತ್ತಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಉಪಚುನಾವಣೆಯಲ್ಲಿ ಪರಾಭವಗೊಂಡಿದ್ದ ಎಚ್.ವಿಶ್ವನಾಥ್, ಎಂ.ಟಿ.ಬಿ.ನಾಗರಾಜ್ ಹಾಗೂ ಮಂತ್ರಿ ಸ್ಥಾನವನ್ನು ತ್ಯಾಗ ಮಾಡಿದ್ದ ಆರ್.ಶಂಕರ್‍ಗೆ ಪಕ್ಷದಲ್ಲಿ ಅಸಮಾಧಾನವಿದ್ದರೂ ಅವರನ್ನು ಮೇಲ್ಮನೆಗೆ ಸೇರಿಸುವಲ್ಲಿ ಬಿಎಸ್‍ವೈ ಯಶಸ್ವಿಯಾಗಿದ್ದಾರೆ.

ಇದೀಗ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ಇಂತಹ ಸವಾಲುಗಳ ನಡುವೆಯೇ ರಾಜ್ಯದಲ್ಲಿ ಮಹಾಮಾರಿ ಕೊರೊನಾ ಒಕ್ಕರಿಸಿದ್ದು, ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಪ್ರಾರಂಭದಲ್ಲಿ ಕರ್ನಾಟಕ ಸರ್ಕಾರ ತೆಗೆದುಕೊಂಡ ಕೆಲವು ಬಿಗಿಯಾದ ಕಾನೂನು ಕ್ರಮ ಹಾಗೂ ನಿಯಂತ್ರಣಕ್ಕಾಗಿ ಅಳವಡಿಸಿಕೊಂಡ ತಂತ್ರಜ್ಞಾನ ದೇಶಕ್ಕೆ ಮಾದರಿಯಾಗಿತ್ತು.

ಸ್ವತಃ ಕೇಂದ್ರ ಸರ್ಕಾರವೇ ಕರ್ನಾಟಕದ ಮಾದರಿಯನ್ನು ಇತರೆ ರಾಜ್ಯಗಳು ಅಳವಡಿಸಿಕೊಳ್ಳುವಂತೆ ಸಲಹೆ ಮಾಡಿದ್ದರು. ಯಾವಾಗ ರಾಜ್ಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲಾಯಿತೋ ಸರ್ಕಾರದ ಲೆಕ್ಕಾಚಾರಗಳೆಲ್ಲವೂ ಬುಡಮೇಲಾದವು.

ಇದೀಗ ಕರ್ನಾಟಕ ದೇಶದಲ್ಲೇ ಅತಿಹೆಚ್ಚು ಸೋಂಕು ಪೀಡಿತ ರಾಜ್ಯಗಳ ಪೈಕಿ 4ರಿಂದ 5ನೇ ಸ್ಥಾನಕ್ಕೆ ಬಂದಿದೆ. ಇದರ ನಡುವೆ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಖರೀದಿ ಮಾಡಿರುವ ಉಪಕರಣಗಳಲ್ಲಿ 2000 ಕೋಟಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿವೆ.

ಒಂದೇ ಒಂದೂ ನಯಾಪೈಸೆಯೂ ಅವ್ಯವಹಾರ ನಡೆದಿಲ್ಲ ಎಂದು ಸರ್ಕಾರ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡುತ್ತಿದೆ. ಹಗರಣ ನಡೆದಿಲ್ಲ ಎಂದು ಗೊತ್ತಾದ ಮೇಲೆ ಇದನ್ನು ನ್ಯಾಯಾಂಗ ತನಿಖೆಗೆ ವಹಿಸಲು ಹಿಂದೇಟು ಹಾಕುತ್ತಿದ್ದೀರಿ ಎಂದು ಪ್ರತಿ ಪಕ್ಷಗಳು ಒಡ್ಡುತ್ತಿರುವ ಸವಾಲುಗಳು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದೆ.

ಒಂದೆಡೆ ಲಾಕ್‍ಡೌನ್‍ನಿಂದಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ಸರ್ಕಾರದ ಬೊಕ್ಕಸ ತುಂಬಿಸುತ್ತಿದ್ದ ಅಬಕಾರಿ, ಸಾರಿಗೆ, ಮುದ್ರಣ ಮತ್ತು ನೋಂದಣಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಲಾಭ ಬರುತ್ತಿಲ್ಲ.

ಕೊರೊನಾ ರಾಜ್ಯದಲ್ಲಿ ಆವರಿಸಿರುವ ಕಾರಣ ಭಿನ್ನಮತ ಸಾರಿದ್ದ ಅಸಮಾಧಾನಿತರು ಸದ್ಯಕ್ಕೆ ಮೌನಕ್ಕೆ ಶರಣಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪರಭಾವಗೊಂಡಿದ್ದ ಲಕ್ಷ್ಮಣ್ ಸವದಿ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಸಚಿವ ಆಕಾಂಕ್ಷಿಗಳ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಈ ನಡುವೆ ಸಿ.ಪಿ.ಯೋಗೇಶ್ವರ್ ಅವರನ್ನು ಮೇಲ್ಮನೆಗೆ ನಾಮಕರಣ ಮಾಡಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕೊರೊನಾ ಇರುವ ಕಾರಣ ಬಹುತೇಕರು ಬಾಯಿ ಬಿಡಲು ಹಿಂದೇಟು ಹಾಕುತ್ತಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ನಡೆಯುವ ವಿದ್ಯಮಾನಗಳನ್ನು ಬಿಎಸ್‍ವೈ ಅವರು ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಂಪುಟ ವಿಸ್ತರಣೆ, ನಿಗಮ ಮಂಡಳಿಗೆ ನೇಮಕ, ಆರ್ಥಿಕ ಪರಿಸ್ಥಿತಿ ಸುಧಾರಿಸುವುದು ಸೇರಿದಂತೆ ಹೀಗೆ ಬೆಟ್ಟದಷ್ಟು ಸವಾಲುಗಳು ಇರುವುದರಿಂದ ಯಡಿಯೂರಪ್ಪನವರ ಮುಂದಿನ ದಾರಿ ಕೂಡಾ ಸುಗಮವಾಗಿಲ್ಲ.

Facebook Comments

Sri Raghav

Admin