ತಾಳಮೇಳ ತಪ್ಪಿದ ಯಡಿಯೂರಪ್ಪ ಸರ್ಕಾರದಲ್ಲಿ ಏನೂ ಸರಿ ಇಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಕೊರೊನಾ ನಿಯಂತ್ರಣ ಹಾಗೂ ಇತ್ತೀಚಿನ ಕೆಲವು ಬೆಳವಣಿಗೆಗಳಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ನಡುವೆ ತಾಳಮೇಳ ಎರಡೂ ತಪ್ಪಿದ್ದು, ನಾನೊಂದು ತೀರ ನೀನೊಂದು ತೀರ ಎನ್ನುವಂತಾಗಿದೆ.

ಕೆಲವೇ ದಿನಗಳ ಹಿಂದೆಯಷ್ಟೇ ಯಡಿಯೂರಪ್ಪ ಕೊರೊನಾ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸಿದ್ದು, ಇದರಿಂದ ಅವರ ವರ್ಚಸ್ಸು ಹೆಚ್ಚಿಸಿತ್ತು. ಆದರೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ಶಿವಮೊಗ್ಗ ಜಿಲ್ಲೆ ಸಾಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಎಫ್‍ಐಆರ್ ಕೈ ಬಿಡುವುದಾಗಿ ನೀಡಿದ ಹೇಳಿಕೆಗೆ ಪಕ್ಷದೊಳಗೆ ಅಸಮಾಧಾನ ಮೂಡಿಸಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ನಿಯೋಗ ಸೋನಿಯಾ ವಿರುದ್ಧ ಎಫ್‍ಐಆರ್ ಕೈ ಬಿಡುವಂತೆ ಮನವಿ ಸಲ್ಲಿಸಿತ್ತು. ಸಿಎಂ ಕೂಡ ಕೈಬಿಡುವ ಭರವಸೆ ನೀಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಎಫ್‍ಐಆರ್ ವಾಪಸ್ ಪಡೆಯುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದು ಸರ್ಕಾರ ಹಾಗೂ ಪಕ್ಷದ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ಜಗಜ್ಜಾಹೀರು ಮಾಡಿದೆ.

ನಂತರ ಬೇರೆ ರಾಜ್ಯಗಳಿಂದ ಬರುತ್ತಿರುವವರಿಂದ ಕೊರೊನಾ ಸೋಂಕು ಹೆಚ್ಚುತ್ತಿದೆ ಎಂದು ತಿಳಿಯುತ್ತಲೇ ಕೇರಳ ಮತ್ತಿತರ ಕೆಲವು ರಾಜ್ಯಗಳ ಗಡಿಯನ್ನು ಮುಚ್ಚಿಸಿದ್ದು ವಿವಾದಕ್ಕೀಡಾಯಿತು. ಇದರಿಂದಾಗಿ ಗಡಿ ಭಾಗದಲ್ಲಿ ಇರುವ ಕರ್ನಾಟಕದ ವಾಸಿಗಳಿಂದ ಅವರು ಪ್ರತಿರೋಧ ಎದುರಿಸಬೇಕಾಯಿತು.

ತಬ್ಲಿಘೀಗಳ ವಿರುದ್ಧ ಬಿಜೆಪಿ ನಾಯಕರು ಆರೋಪಗಳ ಸುರಿಮಳೆ ಮಾಡುತ್ತಿದ್ದಾಗ ಕೊರೊನಾವನ್ನು ಕೋಮುವಾದೀಕರಣ ಗೊಳಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪ ಆದೇಶಿಸಿದ್ದರು. ಇದು ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.ಇದರ ಜತೆಗೆ ಸೋನಿಯಾ ವಿರುದ್ಧದ ಎಫ್‍ಐಆರ್ ಕೈ ಬಿಡುವ ಹೇಳಿಕೆ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ತಬ್ಲಿಘೀಗಳು ಕೊರೊನಾ ಸೋಂಕು ಹರಡುವುದು ಹೆಚ್ಚುತ್ತಿದ್ದಂತೆಯೇ ಮುಸ್ಲಿಂ ಸಮುದಾಯದವರ ವಿರುದ್ಧ ಆಕ್ರೋಶ ಹೆಚ್ಚಾದಾಗ ಮುಖ್ಯಮಂತ್ರಿ ಮಧ್ಯಪ್ರವೇಶಿಸಿದರು. ಕೆಲವರ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬೇಡಿ¿ ಎಂದು ತಾಕೀತು ಮಾಡಿದರು.

ಇದರಿಂದಾಗಿ ಅವರು ತಮ್ಮದೇ ಪಕ್ಷದ ಕೆಲವು ನಾಯಕರು ಮತ್ತು ಕಾರ್ಯಕರ್ತರ ವಿರೋಧ ಎದುರಿಸಬೇಕಾಯಿತು. ಆದರೂ ಎದೆಗುಂದದ ಬಿಎಸ್‍ವೈ ತಮ್ಮ ಮಾತನ್ನು ಹಿಂದಕ್ಕೆ ಪಡೆಯಲಿಲ್ಲ.ಇದರಿಂದಾಗಿ ಪಕ್ಷದ ಕೆಲವು ಮುಖಂಡರ ಕಣ್ಣು ಕೆಂಪಾಗುವಂತೆ ಮಾಡಿದೆ ಎಂದು ತಿಳಿದು ಬಂದಿದೆ.

ಇವೆಲ್ಲದರ ನಡುವೆಯೇ ಕೊರೊನಾ ಬಿಕ್ಕಟ್ಟನ್ನು ಅವರು ನಿಭಾಯಿಸುತ್ತಿರುವ ರೀತಿ, ಅದಕ್ಕಾಗಿ ಅವರು ತೆಗೆದುಕೊಳ್ಳುತ್ತಿರುವ ಕ್ರಮ ಖುದ್ದು ಅವರ ಪಕ್ಷದವರನ್ನೇ ದಂಗಾಗಿಸಿದೆ. ಈ ಮೂಲಕ ಅವರು ಅಭಿಪ್ರಾಯಭೇದದ ಹೆಸರಿನಲ್ಲಿ ಪಕ್ಷದ ಒಳಗಿರುವವರೇ ಸೃಷ್ಟಿಸುವ ಭಿನ್ನಮತವನ್ನೂ ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ಇಳಿ ವಯಸ್ಸನ್ನೂ ಮರೆತು ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅವರ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿತ್ತು. ಪಕ್ಷದ ಮುಖಂಡರನ್ನು ಸೌಜನ್ಯಕ್ಕಾದರೂ ಕೇಳದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಳ್ಳುತ್ತಿದ್ದಾರೆಬ ಅಸಮಾಧಾನದ ಮಾತುಗಳು ಕೇಸರಿ ಕಚೇರಿಯಲ್ಲಿ ಕೇಳಿ ಬರುತ್ತಿವೆ. ಬಿಜೆಪಿ ಸರ್ಕಾರಕ್ಕೆ ತಿಂಗಳುಗಳು ಕಳೆದರೂ, ಪಕ್ಷದ ಕಾರ್ಯಕರ್ತರು ಬಿಜೆಪಿ ಅಧಿಕಾರದಲ್ಲಿದೆ ಎಂಬ ಭಾವನೆ ಬಂದಿಲ್ಲ.

ಹೈಕಮಾಂಡ್ ಅವರಿಗೆ ಎಷ್ಟೇ ಅಂಕುಶ ಹಾಕಿದರೂ ನಂಬಿದವರನ್ನು ಎಂದಿಗೂ ಕೈ ಬಿಡದ ಯಡಿಯೂರಪ್ಪ ಸಂಪುಟ ಸೇರಿದಂತೆ ಈಗಲೂ ಆಯಕಟ್ಟಿನ ಜಾಗದಲ್ಲಿ ತಮ್ಮ ಆಪ್ತರಿಗೆ ಮಣೆಹಾಕಿರುವುದು ಅಸಮಾಧಾನಕ್ಕೆ ಮತ್ತೊಂದು ಕಾರಣ.

ಸಿಎಂ ಅವರ ನಿಕಟ ವಲಯದಲ್ಲಿರುವ ಯಾರೂ ಪಕ್ಷದಿಂದ ಅಥವಾ ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ ಒಬ್ಬ ವ್ಯಕ್ತಿಯೂ ಮುಖ್ಯಮಂತ್ರಿಯ ಸಾಮಾಜಿಕ ಮಾಧ್ಯಮ ತಂಡದ ಉಸ್ತುವಾರಿ ವಹಿಸಿಲ್ಲ.ವಾಸ್ತವವಾಗಿ, ಕರ್ನಾಟಕದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಖಾಸಗಿ ನಡೆಯನ್ನು ಗಮನಿಸಲು ಖಾಸಗಿ ಏಜೆನ್ಸಿಗಾಗಿ ಲಕ್ಷಗಳಲ್ಲಿ ಪಾವತಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ವಿರೋಧ ಪಕ್ಷದ ನಾಯಕ ಎಂಬುದಕ್ಕಿಂತ ಡಿ.ಕೆ.ಶಿವಕುಮಾರ್ ಯಡಿಯೂರಪ್ಪ ಅವರಿಗೆ ಹೆಚ್ಚಿನ ಆಪ್ತರಾಗಿದ್ದಾರೆ. ಕೊರೊನಾ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸಲು ಹಾಗೂ ಕಾಯಿದೆಗಳಿಗೆ ತಿದ್ದುಪಡಿ ತರಲು ವಿರೋಧ ಪಕ್ಷಗಳ ಸಹಕಾರ ಅಗತ್ಯ ಎಂಬುದನ್ನು ಮನಗಂಡಿದ್ದಾರೆ. ಎಪಿಎಂಸಿ ಕಾಯಿದೆ ತಿದ್ದುಪಡಿ, ಭೂ ಸುಧಾರಣೆ ವಿರುದ್ಧ ಈಗಾಗಲೇ ವಿರೋಧ ಪಕ್ಷಗಳು ಪ್ರತಿಭಟನೆ ಆರಂಭಿಸಿವೆ.

ಬಿಜೆಪಿ ಅಧಿಕಾರಕ್ಕೆ ಬಂದು, ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಬಾರಿ ಸಿಎಂ ಆದಾಗಿನಿಂದಲೂ ಹತ್ತು ಹಲವು ಸಮಸ್ಯೆಗಳನ್ನು ನಿಭಾಯಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು.

Facebook Comments

Sri Raghav

Admin