“6ನೇ ವೇತನ ಆಯೋಗ ಜಾರಿ ಸಾಧ್ಯವೇ ಇಲ್ಲ”: ಪುನರುಚ್ಚರಿದ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.9- ಯಾವುದೇ ಕಾರಣಕ್ಕೂ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗವನ್ನು ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಕ್ಷಣವೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು. ಈಗಿನ ಸಂಕಷ್ಟದ ಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿಗೆ 6ನೇ ವೇತನ ಆಯೋಗ ಜಾರಿ ಮಾಡಲು ಆಗುವುದಿಲ್ಲ. ಯಾರದ್ದೋ ಮಾತು ಕೇಳಿ ಹಠಕ್ಕೆ ಬಿದ್ದು ಪ್ರತಿಭಟನೆ ನಡೆಸಬೇಡಿ. ನಿಮ್ಮ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ದವಿದೆ. ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕೋರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರದ್ದೋ ಮಾತು ಕೇಳಿಕೊಂಡು ಪ್ರತಿಭಟನೆ ನಡೆಸಿದರೆ ಬಲಿಪಶುಗಳಾಗುವುದು ನೀವೆ. ಸಾರ್ವಜನಿಕರಿಗೆ ತೊಂದರೆಕೊಟ್ಟು ಮುಷ್ಕರ ನಡೆಸುವುದರಲ್ಲಿ ಅರ್ಥವೇ ಇಲ್ಲ. ಈಗಾಗಲೇ ಲಕ್ಷಾಂತರ ಜನರು ಬಸ್‍ಗಳಿಲ್ಲದೆ ತೊಂದರೆಗೊಳಗಾಗಿದ್ದಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಿ. ತಕ್ಷಣವೇ ಮುಷ್ಕರ ಕೈಬಿಟ್ಟು ಬಸ್‍ಗಳ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಹೇಳಿದರು.

ಕೋವಿಡ್ ಕಾರಣದಿಂದ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಆದರೂ ನಾವು ಸರ್ಕಾರದ ಬೊಕ್ಕಸದಿಂದಲೇ ಸಾರಿಗೆ ನೌಕರರಿಗೆ 2300 ಕೋಟಿ ರೂ. ಸಂಬಳವನ್ನು ನೀಡಿದ್ದೇವೆ. ಇದು ನಿಮಗೆ ಅರ್ಥವಾಗುವುದಿಲ್ಲವೆಂದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಸರ್ಕಾರಕ್ಕೆ ಬರುವ ಆದಾಯದಲ್ಲಿ ಶೇ.85ರಷ್ಟು ಹಣ ಸರ್ಕಾರಿ ನೌಕರರ ಸಂಬಳ, ಪಿಂಚಣಿ ಮತ್ತಿತರ ಕಾರ್ಯಗಳಿಗೆ ನೀಡುತ್ತಿದ್ದೇವೆ. ಶೇ.15ರಷ್ಟು ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಿದ್ದೇವೆ. ನಿಮ್ಮ ಇಲಾಖೆ ನಷ್ಟದಲ್ಲಿದ್ದರೂ ಒಂದು ತಿಂಗಳ ವೇತನವನ್ನೂ ವಿಳಂಬ ಮಾಡದೆ ನೀಡುತ್ತಿದ್ದೇವೆ. ಯಾವ ಕಾರಣಕ್ಕಾಗಿ ನೀವು ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಯಾರದೋ ಮಾತು ಕೇಳಿ ಪ್ರತಿಭಟನೆ ನಡೆಸಬೇಡಿ. ನೀವು ಮುಂದಿಟ್ಟಿದ್ದ 9 ಬೇಡಿಕೆಗಳಲ್ಲಿ 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ನಿಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಹಾಗೂ 6ನೇ ವೇತನ ಆಯೋಗ ನೀಡಲು ಸಾಧ್ಯವಿಲ್ಲ.

ಈಗಾಗಲೇ ಈಡೇರಿಸಿರುವ ಬೇಡಿಕೆಗಳಲ್ಲಿ ಯಾವುದಾದರೂ ವ್ಯತ್ಯಾಸಗಳಿದ್ದರೆ ತಕ್ಷಣವೇ ಸರಿಪಡಿಸುತ್ತೇವೆ. ನಮ್ಮ ಮಾತಿನಲ್ಲಿ ನಂಬಿಕೆ ಇಡಬೇಕೆಂದು ಮನವಿ ಮಾಡಿದರು. ಏನೇ ಸಮಸ್ಯೆಗಳಿದ್ದರೂ ಮಾತುಕತೆಗೆ ಬನ್ನಿ ಎಂದರೂ ನೀವು ಬರುತ್ತಿಲ್ಲ. ನಿಮ್ಮ ಹಠಮಾರಿ ಧೋರಣೆಯಿಂದಾಗಿ ಲಕ್ಷಾಂತರ ಜನರು ಬಸ್‍ಗಳಿಲ್ಲದೆ ಪರದಾಡುತ್ತಿದ್ದಾರೆ. ಇದು ನಿಮಗೆ ಶೋಭೆ ತರುವುದಿಲ್ಲ. ಈ ರೀತಿ ನೌಕರರು ನಡೆದುಕೊಳ್ಳುವುದು ಸರಿಯಲ್ಲ ಎಂದು ಸಿಎಂ ಆಕ್ಷೇಪಿಸಿದರು.

ಬೇರೆ ರಾಜ್ಯಗಳಲ್ಲಿ ಸರ್ಕಾರಿ ಸಿಬ್ಬಂದಿಗಳಿಗೆ ಸರಿಯಾಗಿ ಸಂಬಳವನ್ನೇ ನೀಡುತ್ತಿಲ್ಲ. ಆದರೂ ನಮ್ಮ ಸರ್ಕಾರ ನೌಕರರಿಗೆ ಎಲ್ಲಿಯೂ ತೊಂದರೆಯಾಗದಂತೆ ಕ್ರಮ ಕೈಗೊಂಡಿದೆ. ಬೇಡಿಕೆ ಈಡೇರಿಸದಿದ್ದರೆ ನಾವು ಕರ್ತವ್ಯಕ್ಕೆ ಹಾಜರಾಗುವುದೇ ಇಲ್ಲ. ಬಸ್‍ಗಳ ಓಡಾಟವನ್ನು ಸ್ಥಗಿತ ಮಾಡುತ್ತೇವೆ ಎಂದು ಹೇಳುವುದು ಸರಿಯಲ್ಲ. ಪರೀಕ್ಷಾ ಸಮಯ. ಮಕ್ಕಳಿಗೂ ತೊಂದರೆಯಾಗಬಾರದು ಎಂದು ಹೇಳಿದರು.

ನೌಕರರ ಸಂಘಟನೆಗಳ ಜೊತೆ ಮಾತುಕತೆ ನಡೆಸುತ್ತೀರ ಎಂಬ ಪ್ರಶ್ನೆಗೆ ಯಾರ ಜೊತೆ ಮಾತನಾಡಬೇಕು, ಮಾತುಕತೆಗೆ ಬನ್ನಿ ಎಂದರೂ ಬರುವುದಿಲ್ಲ. ಇಷ್ಟಾದ ನಂತರ ಅವರ ಜೊತೆ ಏನಿದೆ ಚರ್ಚಿಸಲು? ಏನೇ ಸಮಸ್ಯೆಗಳಿದ್ದರೂ ಇತ್ಯರ್ಥ ಮಾಡಿಕೊಳ್ಳೋಣ. ಮೊದಲು ಕರ್ತವ್ಯಕ್ಕೆ ಹಾಜರಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ತಿಳಿಸಿದರು.

Facebook Comments