ಸಿದ್ದರಾಮಯ್ಯ-ಕುಮಾರಸ್ವಾಮಿ ಅವಧಿಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರ..! ತನಿಖೆಗೆ ಮುಂದಾದ ಬಿಎಸ್ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.10- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮ್ಮಿಶ್ರ ಸರ್ಕಾರದ ನೇತೃತ್ವದ ವಹಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ನೀಡಲಾಗಿದ್ದ ಭೂಮಿಯಲ್ಲಿ ಭಾರೀ ಪ್ರಮಾಣದ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ.

ಸುಮಾರು ಒಂದು ಲಕ್ಷ ಕೋಟಿಗೂ ಅಧಿಕ ಮೌಲ್ಯದ ಭೂಮಿ ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿದ್ದು, ರಾಜ್ಯ ಸರ್ಕಾರ ಇದನ್ನೂ ಕೂಡ ತನಿಖೆಗೆ ಆದೇಶ ನೀಡಲು ಮುಂದಾಗಿದೆ.
ಕೈಗಾರಿಕೆಗಳ ಸ್ಥಾಪನೆಗೆ ಕರ್ನಾಟಕ ಪ್ರದೇಶ ಕೈಗಾರಿಕಾ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ಮೂಲಕ ರಾಜಧಾನಿ ಬೆಂಗಳೂರು, ಪ್ರಮುಖ ವಾಣಿಜ್ಯ ಕೇಂದ್ರಗಳಾದ ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಮೈಸೂರು, ಮಹಾನಗರ ಪಾಲಿಕೆ ಪ್ರದೇಶಗಳಾದ ಶಿವಮೊಗ್ಗ, ತುಮಕೂರು, ಬಿಜಾಪುರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಭೂಮಿ ನೀಡಲಾಗಿತ್ತು.

ಕೆಐಎಡಿಬಿ ಮೂಲಕ ಕೈಗಾರಿಕಾ ಸ್ಥಾಪನೆಗಾಗಿ ಭೂಮಿ ಖರೀದಿಸಿದ್ದ ಉದ್ಯಮಿಗಳು ಇದರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಕೆಐಎಡಿಬಿ ಉದ್ಯಮಿಗಳಿಗೆ ಜಮೀನನ್ನು ನೀಡುತ್ತದೆ.

ಹೀಗೆ ಜಮೀನು ಖರೀದಿ ಮಾಡಿದವರು ಹಣದ ಆಸೆಗಾಗಿ ಒಂದಕ್ಕಿಂತ 5 ಪಟ್ಟು ದರದಲ್ಲಿ ರಿಯಲ್ ಎಸ್ಟೇಟ್‍ನವರಿಗೆ ಮಾರಾಟ ಮಾಡಿರುವುದು ಕಂಡುಬಂದಿದೆ. ಈಗಾಗಲೇ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‍ಗೆ ಇಲಾಖೆ ಅಧಿಕಾರಿಗಳು ಕೈಗಾರಿಕಾ ಉದ್ದೇಶಕ್ಕೆ ಪಡೆದಿರುವ ಜಮೀನು ದುರ್ಬಳಕೆಯಾಗಿರುವುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಸರ್ಕಾರದ ಮಾರ್ಗಸೂಚಿ ಪ್ರಕಾರ ಜಮೀನು ಪಡೆದಿದ್ದ ಉದ್ಯಮಿಗಳು ಒಂದು ಎಕರೆ ಜಮೀನನ್ನು ಕೋಟ್ಯಂತರ ರೂ. ಬೆಲೆಗೆ ಮಾರಾಟ ಮಾಡಿದ್ದಾರೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಒಂದು ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಶೆಟ್ಟರ್, ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ತನಿಖೆಗೆ ವಹಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

# ನಾಳೆಯಿಂದ ಪ್ರವಾಸ:
ಭೂಮಿ ಮಾರಾಟವಾಗಿರುವುದು ಬೆಳಕಿಗೆ ಬರುವಂತೆ ಜಗದೀಶ್ ಶೆಟ್ಟರ್ ನಾಳೆಯಿಂದ ಜಿಲ್ಲಾವಾರು ಪ್ರವಾಸ ನಡೆಸಿ ಯಾವ ಯಾವ ಭಾಗದಲ್ಲಿ ಎಷ್ಟು ಪ್ರಮಾಣದಲ್ಲಿ ಭೂಮಿಯನ್ನು ಕೆಐಎಡಿಬಿ ಮೂಲಕ ಖರೀದಿ ಮಾಡಲಾಗಿತ್ತು? ಇದರಲ್ಲಿ ಯಾರ್ಯಾರು ಕೈಗಾರಿಕೆಗಳನ್ನು ಸ್ಥಾಪನೆ ಮಾಡದ್ದಾರೆ? ಭೂಮಿ ಖರೀದಿಸಿದವರು ಯಾರಿಗೆ ಮಾರಾಟ ಮಾಡಿದ್ದಾರೆ? ಇದಕ್ಕೆ ಕಾರಣವೇನು? ಎಂಬ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆಯುವರು.

ಭೂಮಿ ಪಡೆಯಲೆಂದೇ ಕೆಲವು ಕಡೆ ಕಂಪನಿಗಳನ್ನು ಸ್ಥಾಪಿಸಿ ಬಳಿಕ ಸರ್ಕಾರದಿಂದ ಜಮೀನು ಪಡೆದು ನಂತರ ಮೂರನೇ ವ್ಯಕ್ತಿಗೆ ಮಾರಾಟ ಮಾಡಿರುವ ಪ್ರಕರಣಗಳು ಕೂಡ ಜರುಗಿವೆ.
ನಾಳೆ ಬೆಳಗಾವಿಯಿಂದ ಪ್ರವಾಸ ಆರಂಭವಾಗಲಿದೆ. ಜಿಲ್ಲಾಧಿಕಾರಿಗಳು ಕೆಐಎಡಿಬಿ ಅಧಿಕಾರಿಗಳು, ಬೃಹತ್ , ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯಾಪ್ತಿಗೆ ಒಳಪಡುವ ಅಧಿಕಾರಿಗಳು ಖುದ್ದು ಹಾಜರಿದ್ದು, ಮಾಹಿತಿ ನೀಡಬೇಕೆಂದು ಸರಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬೆಳಗಾವಿ, ಮೈಸೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮೊದಲ ಹಂತದಲ್ಲಿ ವಿಭಾಗವಾರು ಚರ್ಚೆ ನಡೆಸಿ ನಂತರ ಜಿಲ್ಲಾ ಕೇಂದ್ರಗಳಲ್ಲೂ ಈ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇದು ಹಿಂದಿನ ಕಾಂಗ್ರೆಸ್ ಮತ್ತು ಜೆಡಿಎಸ್‍ನ ದೋಸ್ತಿ ಅವಧಿಯಲ್ಲಿ ನಡೆದಿರುವ ಬಹುದೊಡ್ಡ ಹಗರಣವಾಗಿದ್ದು, ಉನ್ನತ ಮಟ್ಟದ ತನಿಖೆ ನಡೆಸಲು ಸಿಎಂ ಯಡಿಯೂರಪ್ಪ ಕೂಡ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Facebook Comments

Sri Raghav

Admin