ಬಿಜೆಪಿ ಪಾಳೆಯದಲ್ಲಿ ಆತಂಕ ಮೂಡಿಸಿದೆ ಯಡಿಯೂರಪ್ಪ ಮೌನ..?!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.18- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೌನ ಬಿಜೆಪಿ ಪಾಳೆಯದಲ್ಲಿ ಆತಂಕ ಹುಟ್ಟಿಸಿದೆಯಾ?! ಇಂಥದ್ದೊಂದು ಚರ್ಚೆ ಇದೀಗ ಶುರುವಾಗಿದೆ. ಅಧಿಕಾರ ತ್ಯಾಗದ ಬಳಿಕ ನಡೆದಿದ್ದ ಅಧಿವೇಶನದಲ್ಲಿಯೂ ಯಡಿಯೂರಪ್ಪ ಮುಗುಮ್ಮಾಗಿದ್ದರು.

ಆ ಬಳಿಕ ಸಿಂಧಗಿ ಹಾಗೂ ಹಾನಗಲ್ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಬಳಿಕ ಇಂಥದ್ದೆ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂದು ಅಭ್ಯರ್ಥಿ ಆಯ್ಕೆಗಾಗಿ ನಡೆದಿದ್ದ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿಯೂ ಯಡಿಯೂರಪ್ಪ ಪ್ರಸ್ತಾಪಿಸಿರಲಿಲ್ಲ ಎನ್ನಲಾಗಿದೆ.
ಬಿ.ಎಸ್. ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡು ಮೂರು ತಿಂಗಳುಗಳಾಗುತ್ತ ಬಂದಿವೆ. ಈ ಮೂರು ತಿಂಗಳುಗಳಲ್ಲಿ ಅವರ ನಡೆ ರಾಜ್ಯ ಬಿಜೆಪಿ ನಾಯಕರಿಗೆ ಕುತೂಹಲ ಮೂಡಿಸಿದೆ.

ದಕ್ಕೆ ಕಾರಣವೂ ಇದೆ. ಜೊತೆಗೆ ಇತ್ತೀಚೆಗೆ ಅವರ ಪಿಎ ಮೇಲೆ ನಡೆದಿದ್ದ ಐಟಿ ದಾಳಿ ಕೂಡ ಯಡಿಯೂರಪ್ಪ ಅವರಿಗೆ ಇರುಸು ಮುರುಸನ್ನುಂಟು ಮಾಡಿದೆ. ಆದರೂ ಯಡಿಯೂರಪ್ಪ ಅವರು ಮೌನ ತಾಳಿರುವುದು ಅದೊಂದು ಕಾರಣಕ್ಕಾಗಿ ಎಂಬ ಮಾತುಗಳು ಕೇಳಿ ಬಂದಿವೆ.

ರಾಜ್ಯ ಬಿಜೆಪಿಯನ್ನು ಸಂಪೂರ್ಣವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ಹಿಡಿತದಿಂದ ಹೊರಗೆ ತರಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದಂತಿದೆ. ಹೀಗಾಗಿಯೇ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ ಬಳಿಕ ದಾವಣಗೆರೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಿನ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದಾಳತ್ವದಲ್ಲಿ ಎದುರಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಆ ಮೂಲಕ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರದ್ದು ಮುಗಿದ ಅಧ್ಯಾಯ ಎಂಬ ಸಂದೇಶವನ್ನು ಬಿಜೆಪಿ ಕಾರ್ಯಕರ್ತರಿಗೆ ಕೊಟ್ಟಿದ್ದರು ಎನ್ನಲಾಗುತ್ತಿದೆ. ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ಯಡಿಯೂರಪ್ಪ ಮೌನವಾಗಿಯೇ ಇದ್ದಾರೆ.

ಪುತ್ರ ವಿಜಯೇಂದ್ರ ರಾಜಕೀಯ ಭವಿಷ್ಯ ಭದ್ರಗೊಳಿಸಲು ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ವಿಜಯೇಂದ್ರ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುದರ ಮೇಲೆ ರಾಜ್ಯ ಬಿಜೆಪಿ ಸರ್ಕಾರದ ಭವಿಷ್ಯ ನಿಂತಿದೆ ಎಂಬ ಮಾತುಗಳು ಬಿಜೆಪಿ ವಲಯದಿಂದಲೇ ಕೇಳಿ ಬಂದಿವೆ.
ರಾಜ್ಯದಲ್ಲಿ ಎರಡೆರಡು ಬಾರಿ ಬಿಜೆಪಿಯನ್ನು ಪೂರ್ಣ ಕಾಲಾವಗೆ ಅಧಿಕಾರಕ್ಕೆ ತಂದಿರುವುದು ಯಡಿಯೂರಪ್ಪ ಅವರೇ ಎಂಬುದರಲ್ಲಿ ಎರಡು ಮಾತಿಲ್ಲ ಎಂಬುದನ್ನು ಅವರ ಪಕ್ಷದ ರಾಜ್ಯದ ನಾಯಕರೇ ಹೇಳುತ್ತಾರೆ.

ಹೀಗಾಗಿ ವಿಜಯೇಂದ್ರ ಅವರನ್ನು ಬಿಜೆಪಿಯಲ್ಲಿ ಹೇಗೆ ನಡೆಸಿ ಕೊಳ್ಳಲಾಗುತ್ತದೆ? ಎಂಬುದರ ಮೇಲೆ ಸಿಎಂ ಬೊಮ್ಮಾಯಿ ಸರ್ಕಾರದ ಭವಿಷ್ಯ ನಿಂತಿದೆ. ಇದೇ ಕಾರಣದಿಂದಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆಯೂ ಆಗುತ್ತಿಲ್ಲ ಎನ್ನಲಾಗಿದೆ. ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಖಾಲಿಯಿರುವ ನಾಲ್ಕು ಸಚಿವ ಸ್ಥಾನಗಳನ್ನು ಇದೇ ಕಾರಣದಿಂದ ಭರ್ತಿ ಮಾಡುತ್ತಿಲ್ಲ. ಮುಂದಿನ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನು ಹೆಚ್ಚೇನೂ ಅವಧಿ ಉಳಿದಿಲ್ಲ.

ಕೊನೆಯ ಒಂದು ವರ್ಷ ಚುನಾವಣಾ ವರ್ಷವಾಗುವುದರಿಂದ ಈಗಲೇ ಪೂರ್ಣ ಪ್ರಮಾಣದ ಸಂಪುಟ ರಚನೆ ಮಾಡಿದರೆ ಅಭಿವೃದ್ಧಿ ಮಾಡುವುದು ಸುಲಭವಾಗುತ್ತದೆ. ಇದೆಲ್ಲವೂ ಬಿಜೆಪಿ ಹೈಕಮಾಂಡ್‍ಗೆ ಗೊತ್ತಿದೆ. ಆದರೂ ಉಳಿದಿರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುತ್ತಿಲ್ಲ. ಅದಕ್ಕೆ ಕಾರಣ ವಿಜಯೇಂದ್ರ ಎನ್ನಲಾಗುತ್ತಿದೆ.

ತಮ್ಮ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನದ ಬೇಡಿಕೆಯನ್ನು ಮಾಜಿ ಸಿಎಂ ಯಡಿಯೂರಪ್ಪ ಇಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ವಿಜಯೇಂದ್ರ ಅವರಿಗೆ ಸಚಿವ ಸ್ಥಾನ ಕೊಡಲೇ ಬೇಕು. ಆದರೆ ಆ ಬಗ್ಗೆ ಬಿಜೆಪಿ ಹೈಕಮಾಂಡ್ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಎನ್ನಲಾಗಿದೆ.

ವಿಜಯೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಬೊಮ್ಮಾಯಿ ಸರ್ಕಾರದ ಭವಿಷ್ಯವೇ ಮಂಕಾಗುವುದರಲ್ಲಿ ಅನುಮಾನವಿಲ್ಲ ಎನ್ನಲಾಗುತ್ತಿದೆ. ಈ ಎಲ್ಲ ಕಾರಣಗಳಿಂದ ಮಾಜಿ ಸಿಎಂ ಯಡಿಯೂರಪ್ಪ ಮೌನವಾಗಿದ್ದಾರೆ. ಈ ಹಿಂದೆ 2013ರಲ್ಲಿ ಅವರ ಮೌನ ಸೋಟವಾಗಿದ್ದರಿಂದ ಆಗ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 40 ಸ್ಥಾನಗಳನ್ನು ಮಾತ್ರ ಪಡೆಯುವುದು ಬಿಜೆಪಿಗೆ ಸಾಧ್ಯವಾಗಿತ್ತು.

ಹೀಗಾಗಿ ಮುಂದೆ 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಮೌನ ಸೋಟವಾಗದಂತೆ ತಡೆಯುವ ಜವಾಬ್ದಾರಿ ಬಿಜೆಪಿ ಹೈಕಮಾಂಡ್ ಮೇಲಿದೆ ಎನ್ನುತ್ತಾರೆ ಬಿಜೆಪಿ ಕಾರ್ಯಕರ್ತರು.  ಆದರಿಂದ ಬಿ.ವೈ. ವಿಜಯೇಂದ್ರ ರಾಜಕೀಯ ಭವಿಷ್ಯದ ಮೇಲೆ ಬಸವರಾಜ ಬೊಮ್ಮಾಯಿ ಸರ್ಕಾರದ ಭವಿಷ್ಯ ನಿಂತಿದೆ ಎಂಬ ಮಾತುಗಳು ಕೇಳಿ ಬಂದಿವೆ.

Facebook Comments