ಯಡಿಯೂರಪ್ಪ-ಸಂತೋಷ್ ಬಣದ ನಡುವೆ ಸ್ಪೋಟಗೊಳ್ಳುವುದೇ ‘ಮುನಿ’ಸು..!?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.23- ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ಮುನಿರತ್ನಗೆ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬಣ ಪರಸ್ಪರ ಪೈಪೋಟಿಗಿಳಿದಿದ್ದು, ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ಡಿ.5ರಂದು ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದ ಟಿಕೆಟ್‍ಗಾಗಿ ಬಿಜೆಪಿಯಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ಅನರ್ಹ ಶಾಸಕ ಮುನಿರತ್ನ ಬೆನ್ನಿಗೆ ಸಿಎಂ ಬಿಎಸ್‍ವೈ ನಿಂತಿದ್ದರೆ, ತುಳಸಿ ಮುನಿರಾಜು ಬೆನ್ನಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನಿಂತಿದ್ದು, ಮೂಲ ಬಿಜೆಪಿಗರಿಗೆ ಟಿಕೆಟ್ ಎಂಬ ಮಂತ್ರ ಜಪಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ತುಳಸಿ ಮುನಿರಾಜು ಬಂಡಾಯ ಎದ್ದಿರುವ ಹಿನ್ನೆಲೆ ತಮ್ಮ ನಿವಾಸಕ್ಕೆ ಅವರನ್ನು ಕರೆಸಿಕೊಂಡಿದ್ದ ಸಿಎಂ, ನಿಗಮ ಮಂಡಳಿಯಲ್ಲಿ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಆದರೆ ಸಿಎಂ ಮಾತನ್ನು ಕೇಳದ ತುಳಸಿ ಮುನಿರಾಜುಗೌಡ ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದಾರೆ.  ಹೀಗಾಗಿ ಮುನಿರತ್ನ ಪ್ರಕರಣದಲ್ಲಿ ಬಿ.ಎಲ್. ಸಂತೋಷ್ ಮತ್ತು ಸಿಎಂ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ ಎಂಬ ಮೂಲಗಳು ತಿಳಿಸಿವೆ.

ಅನರ್ಹರಿಗೆ ಟಿಕೆಟ್ ಭರವಸೆ ನೀಡಿದ್ದರಿಂದ ಅವರು ರಾಜೀನಾಮೆ ನೀಡಿದ್ದರು. ಅವರು ರಾಜೀನಾಮೆ ನೀಡಿದ್ದರಿಂದಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಆದರೆ ಈಗ ಅವರಿಗೆ ಟಿಕೆಟ್ ನೀಡಲ್ಲ ಎನ್ನುವುದು ಸರಿಯಲ್ಲ ಎಂಬ ವಾದ ಸಿಎಂ ಆಪ್ತ ಬಳಗದ್ದಾಗಿದೆ. ಈ ಎಲ್ಲಾ ಬೆಳವಣಿಗೆ ಮಧ್ಯೆಯೂ ಮುನಿರತ್ನ ಪರ ನಿಂತಿರುವ ಸಿಎಂ ಮತ್ತು ಸಿಎಂ ಆಪ್ತ ಬಳಗ ತುಳಸಿ ಮುನಿರಾಜು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಅಭಯ ನೀಡಿದೆ ಎಂದು ತಿಳಿದುಬಂದಿದೆ.

ಮುನಿರತ್ನಗೆ ಟಿಕೆಟ್ ಕೊಡಲೇಬೇಕಾದ ಅನಿವಾರ್ಯತೆ ಮುಖ್ಯಮಂತ್ರಿಯಾದ್ದರೆ, ಸ್ಪರ್ಧೆ ಮಾಡಲೇಬೇಕು ಎಂಬ ಹಟ ತುಳಸಿ ಮುನಿರಾಜುಗೌಡರದ್ದಾಗಿದೆ. ಒಂದು ವೇಳೆ ಟಿಕೆಟ್ ಸಿಗದೇ ಇದ್ದರೆ ಬಂಡಾಯವಾಗಿ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದು, ಮುನಿರತ್ನ ವಿಷಯ ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಮುನಿರತ್ನ ಕೇವಲ ಓರ್ವ ಶಾಸಕನಾಗಿದ್ದರೆ ಬಿಜೆಪಿ ಕೂಡ ಸಂಘ ಪರಿವಾರದ ವ್ಯಕ್ತಿಯನ್ನೂ ಸುಮ್ಮನೆ ಇರುವಂತೆ ಮಾಡುತ್ತಿತ್ತು. ಆದರೆ ರಾಜರಾಜೇಶ್ವರಿ ನಗರದ ಚುನಾವಣೆ ಬೆನ್ನಲ್ಲೆ ದೊಡ್ಡ ವೋಟರ್ ಐಡಿ ಜಾಲವೇ ಬಯಲಾಗಿತ್ತು. ಸ್ವತಃ ಕೇಂದ್ರ ಬಿಜೆಪಿ ನಾಯಕರೇ ರಾತ್ರೋರಾತ್ರಿ ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದರು.

ಜೊತೆಗೆ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿರುವ ಮುನಿರಾಜುಗೌಡ, ಮುನಿರತ್ನ ಆಯ್ಕೆಯನ್ನು ಅನೂರ್ಜಿತಗೊಳಿಸಿ ನನ್ನನ್ನೇ ಶಾಸಕನೆಂದು ಆಯ್ಕೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ. ಅರ್ಜಿ ವಿಚಾರಣೆ ಬಾಕಿ ಇರುವ ಕಾರಣಕ್ಕೆ ಉಪಚುನಾವಣೆ ದಿನಾಂಕ ರಾಜರಾಜೇಶ್ವರಿ ನಗರಕ್ಕೆ ಅನ್ವಯವಾಗಿಲ್ಲ. ಆ ಕೇಸ್ ಮುಗಿದ ಬಳಿಕ ಚುನಾವಣೆ ನಡೆಯಲಿದ್ದು, ಅಷ್ಟೊರೊಳಗಾಗಿ ಸಮಸ್ಯೆ ಪರಿಹರಿಸಿಕೊಳ್ಳಲು ಮುನಿರತ್ನ ಸರ್ಕಸ್ ಮಾಡ್ತಿದ್ದಾರೆ.

ಆದರೆ ಮುನಿರಾಜುಗೌಡ ಈ ಹಿಂದೆ ಚುನಾವಣೆಯಲ್ಲೇ ಪ್ರಬಲ ಪೈಪೋಟಿ ಕೊಟ್ಟಿದ್ದು, ಇದೀಗ ಸಂಧಾನಕ್ಕೂ ಬಗ್ಗದೆ ನಾನು ಅಖಾಡದಲ್ಲೇ ಉತ್ತರ ಕೊಡ್ತೇನೆ. ನನ್ನ ಕ್ಷೇತ್ರದಲ್ಲಿ ಮುನಿರತ್ನ ವಿರುದ್ಧ ಆಕ್ರೋಶವಿದೆ ಎಂದಿದ್ದಾರಂತೆ. ಕಮಲ ಹಿಡಿದು ರಾಜಕೀಯ ಅಸ್ತಿತ್ವ ವೃದ್ಧಿಸಿಕೊಳ್ಳುವ ಉದ್ದೇಶದಿಂದ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುನಿರತ್ನ ಇದೀಗ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎನ್ನುವಂತಾಗಿದ್ದಾರೆ.

ಇದೇ ಕಾರಣಕ್ಕಾಗಿ ಮುನಿರತ್ನ ಕೂಡ ಕೋರ್ಟ್ ತೀರ್ಪಿನ ಬಳಿಕ ಮುಂದಿನ ನಿರ್ಧಾರ ಎಂದಿದ್ದಾರೆ. ಜೊತೆಗೆ ಸಿಎಂ ಯಡಿಯೂರಪ್ಪ ಅವರಿಗೂ ಇದು ಅಂತಿಮ ಪ್ರಯತ್ನ ಆಗಿದ್ದು, ಒಂದು ವೇಳೆ ಪಕ್ಷದಲ್ಲಿ ತನ್ನ ಮಾತಿಗೆ ಬೆಲೆಯೇ ಇಲ್ಲವಾದರೆ ಮುಂದಿನ ನಿರ್ಧಾರ ಬೇರೆಯೇ ಆಗಲಿದೆ ಎನ್ನಲಾಗಿದೆ.

Facebook Comments

Sri Raghav

Admin