ಉದ್ಯಮಿಗೆ ಬುಲೆಟ್ ಇದ್ದ ಲಕೋಟೆ ರವಾನಿಸಿ 50 ಲಕ್ಷ ಹಫ್ತಾಗೆ ಡಿಮ್ಯಾಂಡ್..!

ಈ ಸುದ್ದಿಯನ್ನು ಶೇರ್ ಮಾಡಿ

Bullet--01
ಬೆಂಗಳೂರು, ಜೂ.18-ಉದ್ಯಾನನಗರಿ ಬೆಂಗಳೂರು ಇನ್ನೊಂದು ಮುಂಬೈ ಆಗುತ್ತಿದೆಯೆ..? ಇತ್ತೀಚೆಗೆ ವಾಣಿಜ್ಯೋದ್ಯಮಿ ಗಳನ್ನು ಗುರಿಯಾಗಿಟ್ಟುಕೊಂಡು ರೌಡಿಗಳಿಂದ ಪ್ರಾಣ ಬೆದರಿಕೆ, ಹಣಕ್ಕಾಗಿ ಒತ್ತಾಯ ಹಾಗೂ ದಾಳಿ ಪ್ರಕರಣಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.
ಕೋರಮಂಗಲದ ರಹೇಜಾ ಆರ್ಕೇಡ್‍ನ ಕಚೇರಿಯೊಂದರಲ್ಲಿ ಜೋಳದ ವ್ಯಾಪಾರಿ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ನೆನಪಿನಲ್ಲಿರುವಾಗಲೇ ಮತ್ತೊಬ್ಬ ಉದ್ಯಮಿಗೆ ಪ್ರಾಣ ಬೆದರಿಕೆ ಕರೆಯೊಂದು ಬಂದಿದೆ.

ಯಲಹಂಕ ನ್ಯೂಟೌನ್‍ನ ಪುಟ್ಟೇನಹಳ್ಳಿ ಯಲ್ಲಿರುವ ಅಪಾರ್ಟ್‍ಮೆಂಟ್ ಒಂದರಲ್ಲಿ ವಾಸವಾಗಿರುವ ರಮಣ್ ಸೂದ್ (49) ಎಂಬುವರಿಗೆ ಅಪರಿಚಿತರು ಬುಲೆಟ್ ಇರುವ ಲಕೋಟೆ(ಎನ್ವಲಪ್) ರವಾನಿಸಿ 50 ಲಕ್ಷ ರೂ.ಗಳ ಹಫ್ತಾ ವಸೂಲಿಗೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಬೆದರಿದ ಸೂದ್ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಲಕೋಟೆಯಲ್ಲಿದ್ದ ಬುಲೆಟ್‍ನನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿ ತಜ್ಞರ ವರದಿಯ ನಿರೀಕ್ಷೆಯಲ್ಲಿದ್ದಾರೆ.
ತಮ್ಮ ವ್ಯಾಪಾರ-ವಹಿವಾಟು ಹಾಗೂ ಆರ್ಥಿಕ ಸ್ಥಿತಿಗತಿ ಹಿನ್ನೆಲೆಗಳ ಬಗ್ಗೆ ಮಾಹಿತಿ ಕಲೆ ಹಾಕಿ 50 ಲಕ್ಷ ರೂ.ಗಳ ಹಫ್ತಾ ವಸೂಲಿಗೆ ಬೆದರಿಕೆ ಹಾಕಿದ್ದಾರೆ ಎಂದು ಸೂದ್ ದೂರಿನಲ್ಲಿ ತಿಳಿಸಿದ್ದಾರೆ. ಈ ಅಪಾರ್ಟ್‍ಮೆಂಟ್‍ನಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇಲ್ಲ. ಹೀಗಾಗಿ ಈ ಲಕೋಟೆಯನ್ನು ಯಾರು, ಯಾವಾಗ ತಲುಪಿಸಿದ್ಧಾರೆ ಎಂಬ ನಿಖರ ಮಾಹಿತಿ ಲಭಿಸಿಲ್ಲ. ಮುಂಬೈ ಮಾದರಿಯಲ್ಲಿ ಬಂದಿರುವ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ.

Facebook Comments

Sri Raghav

Admin