ಲೇಕ್ ಸಿಟಿಯಾಯ್ತು ಸಿಲಿಕಾನ್ ಸಿಟಿ, ಬೆಂಗಳೂರಲ್ಲಿ ಇಂದೂ ಸುರಿಯಲಿದೆಯಂತೆ ಭಾರಿ ಮಳೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.21- ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಲೇಕ್ ಸಿಟಿಯಾಗಿ ಪರಿವರ್ತನೆಯಾಗಿತ್ತು. ನಗರದ ಬಹುತೇಕ ಅಂಡರ್‍ ಪಾಸ್‍ಗಳು ಜಲಾವೃತಗೊಂಡಿದ್ದವು. 25ಕ್ಕೂ ಹೆಚ್ಚು ಮರಗಳು ಧರೆಗುರುಳಿ ಬಿದ್ದವು. ವಿದ್ಯುತ್ ಕಂಬವೊಂದು ಮಳೆಯ ರಭಸಕ್ಕೆ ಉರುಳಿ ಬಿದ್ದರೂ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.  ನಗರದ ಗುರುದತ್ತ ಬಡಾವಣೆಯಲ್ಲಿ ರಾಜಕಾಲುವೆಯ ತಡೆಗೋಡೆ ನೀರಿನಲ್ಲಿ ಕೊಚ್ಚಿಹೋಗಿದೆ. ರಾಜಕಾಲುವೆಗೆ ಹೊಂದಿಕೊಂಡಂತೆ ಮನೆ ಇರುವುದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಸಿಬ್ಬಂದಿ ಬೆಳಗ್ಗೆಯಿಂದಲೇ ತಡೆಗೋಡೆ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ.

ಕೆಂಗೇರಿ, ಆರ್‍ಆರ್ ನಗರ, ಜೆಪಿ ನಗರ, ಜಯನಗರ, ಹೊಸಕೆರೆಹಳ್ಳಿ, ವಿಜಯನಗರ, ಕೋರಮಂಗಲ, ಹೆಬ್ಬಾಳ, ಆರ್‍ಟಿ ನಗರ, ಮಲ್ಲೇಶ್ವರಂ, ಕೆಆರ್ ಮಾರುಕಟ್ಟೆ, ಶಾಂತಿನಗರ, ಮೈಸೂರು ರಸ್ತೆ ಮತ್ತಿತರ ಪ್ರದೇಶಗಳಲ್ಲಿ ಹಲವಾರು ಮರಗಳು ಉರುಳಿ ಬಿದ್ದವು.  ಶಾಂತಿನಗರದ ಕರ್ಲಿ ಸ್ಟ್ರೀಟ್‍ನಲ್ಲಿ ವಿದ್ಯುತ್ ಕಂಬವೊಂದು ಉರುಳಿ ಬಿದ್ದರೂ ಯಾವುದೇ ಅಪಾಯ ಸಂಭವಿಸಿಲ್ಲ.  ಅದೇ ರೀತಿ ಹೊಸಕೆರೆಹಳ್ಳಿ ಮುಖ್ಯರಸ್ತೆಯಲ್ಲಿ ಮರವೊಂದು ಬುಡ ಸಮೇತ ಬೈಕ್ ಸವಾರನ ಮೇಲೆ ಉರುಳಿ ಬಿತ್ತು. ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದು, ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

$ಕೆರೆಯಾದ ಕೋರಮಂಗಲ:
ಪ್ರತಿ ಬಾರಿ ಮಳೆಯಾದಾಗಲೂ ಸಾಕಷ್ಟು ಅನಾಹುತಕ್ಕೀಡಾಗುವುದು ಕೋರಮಂಗಲ. ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಇಡೀ ಕೋರಮಂಗಲ ಕೆರೆಯಾಗಿ ಪರಿವರ್ತನೆಯಾಗಿತ್ತು.  ಕೋರಮಂಗಲದ 80 ಅಡಿ ರಸ್ತೆ ಸಂಪೂರ್ಣ ಜಲಾವೃತಗೊಂಡಿತ್ತು. ರಸ್ತೆಗಳಲ್ಲೇ ಐದು ಅಡಿಗೂ ಹೆಚ್ಚು ನೀರು ನಿಂತ ಹಿನ್ನೆಲೆಯಲ್ಲಿ ವಾಹನ ಸವಾರರು ಮುಂದೆ ಸಾಗಲು ಪರದಾಡುವಂತಾಯಿತು.  ಕೆಲ ವಾಹನ ಸವಾರರು ರಸ್ತೆಯಲ್ಲೇ ತಮ್ಮ ವಾಹನಗಳನ್ನು ಬಿಟ್ಟು ಆಳುದ್ದ ನಿಂತಿದ್ದ ನೀರಿನಲ್ಲಿ ನಡೆದುಕೊಂಡು ಮನೆ ಸೇರಿದರು.

ಕೆರೆಯಂತಾದ ರಸ್ತೆಗಳಲ್ಲಿ ನಿಂತಿದ್ದ ವಾಹನಗಳನ್ನು ಇಂದು ಮುಂಜಾನೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ನೀರಿನಿಂದ ಹೊರತೆಗೆದರು.  ಕೋರಮಂಗಲ ಸಿ ಬ್ಲಾಕ್‍ನಲ್ಲಿ ರಾಜಕಾಲುವೆಯಿಂದ ಹೊರ ಹರಿದ ಕೊಳಚೆ ನೀರು 300ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಪರಿಣಾಮ ಅಲ್ಲಿನ ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.
ಅಪಾರ್ಟ್‍ಮೆಂಟ್‍ನ ನೆಲಮಹಡಿ ಕೆರೆಗಳಾಗಿ ಪರಿವರ್ತನೆಗೊಂಡಿದ್ದವು.

ರಾತ್ರಿ ನಿದ್ದೆ ಮಾಡಿ ಬೆಳಗ್ಗೆ ಎದ್ದು ನೋಡಿದಾಗಲೇ ಅಪಾರ್ಟ್‍ಮೆಂಟ್ ನಿವಾಸಿಗಳಿಗೆ ನೆಲಮಹಡಿಯಲ್ಲಿ ನೀರು ನಿಂತಿರುವುದು ಅರಿವಿಗೆ ಬಂದಿದ್ದು. ಅನಿವಾರ್ಯವಾಗಿ ಕೆಲಸ-ಕಾರ್ಯಗಳಿಗೆ ತೆರಳುವುದನ್ನು ಬಿಟ್ಟು ಮುಂಜಾನೆಯಿಂದಲೇ ಮನೆಗಳಿಗೆ ನುಗ್ಗಿದ ನೀರು ಹೊರಹಾಕುವ ಕಾಯಕದಲ್ಲಿ ತೊಡಗಿಸಿಕೊಳ್ಳುವಂತಾಯಿತು. ಇಡೀ ಕೋರಮಂಗಲ ಕೆರೆಯಂತಾದ ಹಿನ್ನೆಲೆಯಲ್ಲಿ ರಸ್ತೆಗಳ ಅಕ್ಕಪಕ್ಕದಲ್ಲಿರುವ ಹೊಟೇಲ್‍ಗಳು, ವಾಣಿಜ್ಯ ಮಳಿಗೆಗಳಿಗೂ ನೀರು ನುಗ್ಗಿತು. ಇಂದು ಬೆಳಗ್ಗೆ ವಾಣಿಜ್ಯ ಮಳಿಗೆಗಳನ್ನು ತೆರೆಯಲು ಮುಂದಾದಾಗ ಮಳಿಗೆಗಳಲ್ಲಿ ಆಳುದ್ದ ನೀರು ನಿಂತಿರುವುದು ಕಂಡುಬಂತು.

#ರಿಸಪ್ಷನ್ ಕ್ಯಾನ್ಸಲ್:
ರಾಜರಾಜೇಶ್ವರಿನಗರದ ಮೀನಾಕ್ಷಿ ಕಲ್ಯಾಣ ಮಂಟಪದಲ್ಲಿ ನಿನ್ನೆ ನಡೆಯಬೇಕಿದ್ದ ರಿಸಪ್ಷನ್ ಮಳೆಯಿಂದಾಗಿ ರದ್ದುಗೊಂಡಿತು.  ನಿನ್ನೆ ಸಂಜೆ 7 ಗಂಟೆಗೆ ಮೀನಾಕ್ಷಿ ಕಲ್ಯಾಣ ಮಂಟಪದಲ್ಲಿ ರಿಸಪ್ಷನ್‍ಗೆ ರೆಡಿ ಮಾಡಿಕೊಳ್ಳಲಾಗಿತ್ತು. ಇನ್ನೇನು ರಿಸಪ್ಷನ್ ಆರಂಭವಾಗಬೇಕು ಎನ್ನುವಷ್ಟರಲ್ಲೇ ಧೋ ಎಂದು ಸುರಿದ ಧಾರಾಕಾರ ಮಳೆಗೆ ಚೌಲ್ಟ್ರಿಯ ನೆಲಮಹಡಿಗೆ ನೀರು ಹರಿದುಬಂತು.

ನೆಲಮಹಡಿಯಲ್ಲಿ ಆರು ಅಡಿಗೂ ಹೆಚ್ಚು ನೀರು ನಿಂತು ಔತಣಕ್ಕೆ ವ್ಯವಸ್ಥೆ ಮಾಡಲಾಗಿದ್ದ ಎಲ್ಲ ವಸ್ತುಗಳೂ ನೀರಿಗೆ ಆಹುತಿಯಾದವು. ಮಳೆ ನಿಂತ ಮೇಲೆ ರಿಸಪ್ಷನ್ ಆರಂಭಿಸಲು ಎಲ್ಲರೂ ಕಾಯುತ್ತಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಾರ್ಯಕ್ರಮ ರದ್ದುಗೊಳಿಸಲಾಯಿತು.  ಇಂದು ಬೆಳಗ್ಗೆ ಸಿಬ್ಬಂದಿಗಳು ಕಲ್ಯಾಣ ಮಂಟಪಕ್ಕೆ ನುಗ್ಗಿದ ನೀರನ್ನು ಹೊರಹಾಕಿ ಮದುವೆಗೆ ಅಣಿ ಮಾಡಿಕೊಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಹೆಬ್ಬಾಳ ಸಮೀಪದ ಭದ್ರಪ್ಪ ಲೇಔಟ್, ಬಲರಾಮ ಲೇಔಟ್‍ಗಳ ಹಲವಾರು ಮನೆಗಳಿಗೂ ಕೊಳಚೆ ನೀರು ನುಗ್ಗಿ ಭಾರೀ ಅನಾಹುತ ಸಂಭವಿಸಿತು. ಅಕ್ಕಪಕ್ಕದ ರಾಜಕಾಲುವೆಗಳು ತುಂಬಿ ಹರಿದ ಪರಿಣಾಮ ಕೊಳಚೆ ನೀರೆಲ್ಲ ಈ ಎರಡೂ ಬಡಾವಣೆಗಳಿಗೆ ನುಗ್ಗಿದ ಪರಿಣಾಮ ಅಲ್ಲಿನ ಜನತೆ ನಿದ್ರೆಯಿಲ್ಲದೆ ಮೂಗು ಮುಚ್ಚಿಕೊಂಡೇ ರಾತ್ರಿಯಿಡೀ ನೀರು ಹೊರಹಾಕುವ ಕಾಯಕದಲ್ಲಿ ನಿರತರಾಗಿದ್ದರು. ಶಿವಾನಂದ ಸರ್ಕಲ್, ನಾಯಂಡಹಳ್ಳಿ ವೃತ್ತ ಸೇರಿದಂತೆ ನಗರದಲ್ಲಿರುವ ಬಹುತೇಕ ಅಂಡರ್‍ಪಾಸ್‍ಗಳು ಸಂಪೂರ್ಣ ಜಲಾವೃತಗೊಂಡಿದ್ದವು.

ಇದರ ಜತೆಗೆ ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ ಪ್ರದೇಶಗಳ ಗುಂಡಿಗಳು ನೀರಿನಿಂದ ಆವೃತಗೊಂಡಿದ್ದು, ರಸ್ತೆ ಯಾವುದು, ಗುಂಡಿ ಯಾವುದು ಎಂಬುದು ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಒಟ್ಟಾರೆ ನಿನ್ನೆ ರಾತ್ರಿ ಸುರಿದ ಮಳೆಗೆ ಇಡೀ ಸಿಲಿಕಾನ್ ಸಿಟಿ ಲೇಕ್ ಸಿಟಿಯಾಗಿ ಪರಿವರ್ತನೆಗೊಂಡಿತ್ತು.

#ಇಂದೂ ಸಹ ಮಳೆ:
ನಿನ್ನೆ ಮೊನ್ನೆ ಸುರಿದ ಮಳೆಗಿಂತ ಇಂದು ಮತ್ತೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಇಂದು ಮಧ್ಯಾಹ್ನದ ನಂತರ ನಗರದಲ್ಲಿ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.

#ಕಣ್ಮುಚ್ಚಿ ಕುಳಿತ ಬಿಬಿಎಂಪಿ:
ಪ್ರತಿ ಬಾರಿ ಮಳೆಯಾದಾಗಲೂ ಭವಿಷ್ಯದಲ್ಲಿ ಅನಾಹುತ ಸಂಭವಿಸಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಬೊಗಳೆ ಬಿಡುತ್ತಲೇ ಇರುವ ಬಿಬಿಎಂಪಿ ಇದುವರೆಗೂ ಮಳೆ ಅನಾಹುತ ತಪ್ಪಿಸುವಲ್ಲಿ ಯಾವುದೇ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳದಿರುವುದು ವಿಪರ್ಯಾಸವೇ ಸರಿ. ರಾಜಕಾಲುವೆಗಳು ತುಂಬಿ ಹರಿಯಲು ಒತ್ತುವರಿಯೇ ಕಾರಣ. ಎಂತಹ ಪ್ರತಿಷ್ಠಿತ ವ್ಯಕ್ತಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದರೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ ಸರಾಗ ನೀರು ಹರಿವಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಕಳೆದ ಏಳೆಂಟು ವರ್ಷಗಳಿಂದ ಹೇಳುತ್ತಲೇ ಇರುವ ಬಿಬಿಎಂಪಿ ಅಧಿಕಾರಿಗಳು ಮಾತ್ರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರವಾಹ ಸಂಭವಿಸುವ ಪ್ರದೇಶಗಳನ್ನು ಗುರುತಿಸಿ ಅವ್ಯವಸ್ಥೆಯನ್ನು ದುರಸ್ತಿ ಮಾಡುವ ಕಾರ್ಯವನ್ನು ಕೈಗೊಂಡಿದ್ದರೂ ಇದುವರೆಗೂ ಮಳೆ ಅನಾಹುತ ತಪ್ಪಿಸುವಲ್ಲಿ ಬಿಬಿಎಂಪಿ ಯಶಸ್ವಿಯಾಗಿಲ್ಲ.

#ದಾಖಲೆ ಮಳೆ:
ನಿನ್ನೆ ರಾತ್ರಿ 8.30ರಿಂದ ಇಂದು ಮುಂಜಾನೆ 6.30ರವರೆಗೆ ನಗರದಲ್ಲಿ ದಾಖಲೆ ಮಳೆಯಾಗಿದೆ. ಕೆಂಗೇರಿಯಲ್ಲಿ 124.5 ಮಿ.ಮೀ. ಮತುತಿ ರಾಜರಾಜೇಶ್ವರಿ ನಗರದಲ್ಲಿ 123.5 ಮಿ.ಮೀನಷ್ಟು ಮಳೆಯಾಗಿದೆ. ಲಕ್ಕಸಂದ್ರದಲ್ಲಿ 115 , ವಿ.ವಿ.ಪುರಂನಲ್ಲಿ 108.5, ಗೊಟ್ಟಿಗೆರೆಯಲ್ಲಿ 101, ನಾಗರಭಾವಿಯಲ್ಲಿ 98 ಮಿ.ಮೀನಷ್ಟು ಮಳೆಯಾಗಿದ್ದು , ಬಹುತೇಕ ಪ್ರದೇಶಗಳಲ್ಲಿ 75 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಗಿರುವುದು ದಾಖಲೆಯಾಗಿದೆ.

 

Facebook Comments