ಬೈರಗೊಂಡ್ಲು ಜಲಾಶಯ ಸಾಮಥ್ರ್ಯ ಕಡಿತ, ಬರ ಜಿಲ್ಲೆಗಳಿಗೆ ಹರಿಯದ ಎತ್ತಿನ ಹೊಳೆ

ಈ ಸುದ್ದಿಯನ್ನು ಶೇರ್ ಮಾಡಿ

#ಸುನೀಲ್ ರಾಜೇನಹಳ್ಳಿ
ಕುಡಿಯುವ ನೀರಿಗಾಗಿ ಮೂರು ದಶಕಗಳ ಹೋರಾಟದ ಫಲವಾಗಿ ಬಯಲುಸೀಮೆ ಜಿಲ್ಲೇಗಳಿಗೆ ಸಿಕ್ಕ ಯೋಜನೆಯೇ ಎತ್ತಿನಹೊಳೆ.  ಬರದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೇಗಳಿಗೆ ಶಾಶ್ವತ ಕುಡಿಯುವ ನೀರು ಕಲ್ಪಿಸುವ ಉದ್ದೇಶದಿಂದ 2012ರಲ್ಲಿ ರೂಪುಗೊಂಡು 2014ರ ಫೆಬ್ರವರಿಯಲ್ಲಿ ಸರ್ಕಾರದ ಆಡಳಿತಾತ್ಮಕ ಒಪ್ಪಿಗೆ ಪಡೆದ ಯೋಜನೆಗೆ ಹತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಇದರ ಪ್ರಗತಿ ಆರಕ್ಕೇರಲಿಲ್ಲ; ಮೂರಕ್ಕಿಳಿಯಲಿಲ್ಲ ಎಂಬ ರೀತಿಯಲ್ಲಿ ಆಮೆಗತಿಯಲ್ಲಿ ಸಾಗುತ್ತ ಮುಗ್ಗರಿಸುತ್ತಲೂ ಇದೆ. ಸದ್ಯಕ್ಕೆ ಈ ಭಾಗಗಳಿಗೆ ನೀರು ಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ.

ಈ ಯೋಜನೆಯ ಪ್ರಮುಖ ಅಂಗವೆಂದು ಹೇಳುವ ಬೈರಗೊಂಡ್ಲು ಅಣೆಕಟ್ಟು ಕಾಮಗಾರಿ ಭೂಸ್ವಾಧೀನ ಸಮಸ್ಯೆಯಿಂದ ಕಳೆದ ಮೂರೂವರೆ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ದೇವರಾಯನದುರ್ಗದ ಸಮೀಪ 10 ಟಿಎಂಸಿ ಸಾಮಥ್ರ್ಯದ ಜಲಾಶಯವನ್ನು ನಿರ್ಮಿಸಿ ಎತ್ತಿನ ಹೊಳೆಯಿಂದ ನೀರನ್ನು ಮೇಲಕ್ಕೆತ್ತಿ ಗುರುತ್ವಾಕರ್ಷಣ ಶಕ್ತಿ ಆಧರಿಸಿ ನಿರ್ಮಿಸಿರುವ ಕಾಲುವೆ ಮೂಲಕ ಜಲಾಶಯ ತುಂಬಿಸಿ ನಂತರ ಪಂಪ್ ಗಳ ಮೂಲಕ ಕೋಲಾರ-ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೇಗಳಿಗೆ ನೀರು ಹರಿಸುವ ಉದ್ದೇಶವಿತ್ತು.

ಆದರೆ ಈ ಜಲಾಶಯದಿಂದ ಅರಣ್ಯ ಭೂಮಿ ಮುಳುಗಡೆಯಾಗಲಿದೆ ಎಂಬ ಕಾರಣಕ್ಕೆ ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಸಮೀಪ 5.78 ಟಿಎಂಸಿ ಸಾಮಥ್ರ್ಯ ಜಲಾಶಯ ನಿರ್ಮಾಣಕ್ಕೆ 2014ರಲ್ಲಿ ಅನುಮೋದನೆ ದೊರೆತರೂ ಅಲ್ಲಿನ ಭೂಸ್ವಾಧೀನ ಪ್ರಕ್ರಿಯೆಗೆ ತೀವ್ರ ವಿರೋಧ ಉಂಟಾದ ಕಾರಣ ಈ ಜಲಾಶಯ ಸಾಮಥ್ರ್ಯವನ್ನು 5.78 ಟಿಎಂಸಿ ಯಿಂದ ಎರಡು ಟಿಎಂಸಿಗೆ ಇಳಿಸುವಂತೆ ವಿಶ್ವೇಶ್ವರಯ್ಯ ಜಲ ನಿಗಮ ಸರಕಾರದ ಮುಂದೆ ಪ್ರಸ್ತಾವನೆಯನ್ನು ಇಟ್ಟಿದೆ.

# ಬೈರಗೊಂಡ್ಲು ಜಲಾಶಯಕ್ಕೆ ಅಡ್ಡಿ :
ಕೊರಟಗೆರೆಯ ಬೈರಗೊಂಡ್ಲು ತಾಲ್ಲೂಕಿನಲ್ಲಿ 5.87 ಟಿಎಂಸಿ ಅಡಿ ನೀರು ಸಂಗ್ರಹಿಸುವ ಜಲಾಶಯ ನಿರ್ಮಾಣವಾಗಬೇಕಿದೆ. ಆದರೆ, ಜಲಾಶಯ ನಿರ್ಮಾಣಕ್ಕೆ ಬೇಕಿರುವ ಜಮೀನು ಹಾಗೂ ಮುಳುಗಡೆಯಾಗಲಿರುವ ಜಮೀನಿನ ಮಾಲೀಕ ರಿಗೆ ನೀಡಬೇಕಾದ ಪರಿಹಾರ ಮೊತ್ತದ ಗೊಂದಲ ಈಗ ಯೋಜನೆಯ ಪಾಲಿಗೆ ದೊಡ್ಡ ಬೆಟ್ಟದಂತೆ ಅಡ್ಡಿಯಾಗಿ ಬಿಟ್ಟಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ 11 ಗ್ರಾಮ ಹಾಗೂ ಕೊರಟಗೆರೆ ತಾಲ್ಲೂಕಿನ 17 ಗ್ರಾಮಗಳ ಒಟ್ಟು 5078 ಎಕರೆ ಭೂಮಿ ಇದಕ್ಕಾಗಿ ಬೇಕಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿ ರುವ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಭೂಮಿಯ ಬೆಲೆ ಹೆಚ್ಚಿದೆ. ಆಯಾ ಪ್ರದೇಶದ ಮಾರ್ಗಸೂಚಿ ದರದ ನಾಲ್ಕು ಪಟ್ಟು ಪರಿಹಾರ ನೀಡಲು ಕಾನೂನಿನಲ್ಲಿ ಅವಕಾಶ ಇದ್ದು, ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಏಕ ರೂಪ ದರದಲ್ಲಿ ಪರಿಹಾರ ನೀಡಲು ಅವಕಾಶ ಇರುವುದಿಲ್ಲ ಎಂಬುದು ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳ ಅಭಿಪ್ರಾಯ.

ಭೂ ಪರಿಹಾರ ಕಾಯ್ದೆ ಅನ್ವಯ ಏಕರೂಪದ ಪರಿಹಾರ ನೀಡಿಲು ಅವಕಾಶ ಇಲ್ಲ. ಈ ಯೋಜನೆಯಲ್ಲಿ ಏಕರೂಪದ ಪರಿಹಾರ ಕೊಡಲು ಸರ್ಕಾರ ತೀರ್ಮಾ ನಿಸಿದರೆ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಲ್ಲಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೂ ಇದು ಅನ್ವಯವಾಗಲಿದೆ. ಈ ಯೋಜನೆಯಲ್ಲಿ 20 ಲಕ್ಷದಿಂದ 32 ಲಕ್ಷಕ್ಕೆ ಪರಿಹಾರ ಮೊತ್ತ ಏರಿಸಿದರೆ 320 ಕೋಟಿ ಹೆಚ್ಚುವರಿ ಹೊರಬೀಳಲಿದೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ 50 ಸಾವಿರ ಕೋಟಿ ನೀಡಬೇಕಾದ ಪರಿಹಾರ ಮೊತ್ತ 70 ಸಾವಿರ ಕೋಟಿಗೆ ಏರುತ್ತದೆ.

ಇದು ಇತ್ಯರ್ಥವಾಗದೇ ಇರು ವುದರಿಂದಾಗಿ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿದೆ. ರೈತರು ಕಡಿಮೆ ಪರಿಹಾರಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಭೂ ಸ್ವಾಧೀನ ವಿಳಂಬವಾದರೆ ಜಲಾಶಯ ನಿರ್ಮಾಣ, ನಾಲೆ, ಫೀಡರ್ ನಿರ್ಮಾಣ ಕಾಮಗಾರಿಗಳ ವೆಚ್ಚವೂ ವರ್ಷದಿಂದ ವರ್ಷಕ್ಕೆ ಶೇ 5ರಿಂದ ಶೇ 10ರವರೆಗೆ ಹೆಚ್ಚಳವಾಗುತ್ತಲೇ ಹೋಗುತ್ತದೆ. ಯೋಜನೆ ಅನುಷ್ಠಾನವೂ ವಿಳಂಬವಾಗುತ್ತದೆ ಎಂಬುದು ಅಧಿಕಾರಿಗಳ ಆತಂಕ.

# ಪರಮಶಿವಯ್ಯ ವರದಿ:
ನೀರಾವರಿ ತಜ್ಞ ಡಾ. ಜಿ.ಎಸ್. ಪರಮಶಿವಯ್ಯ 1973ರಲ್ಲೇ ಶಾಶ್ವತ ನೀರಾವರಿ ಯೋಜನೆ ವರದಿ ಸಲ್ಲಿಸಿದ ನಂತರದ ಅದು ಸುಮಾರು 40 ವರ್ಷಗಳ ಕಾಲ ಮೂಲೆ ಸೇರಿತ್ತು. ಅವರ 7 ಹಂತದ ಯೋಜನೆಗಳಲ್ಲಿ ಕೊನೆಯಲ್ಲಿದ್ದದ್ದು ಎತ್ತಿನಹೊಳೆ. ಇಡೀ ಯೋಜನೆ ವಿಭಜಿಸುವುದಕ್ಕೆ ಅವರ ವಿರೋಧವಿತ್ತು. ಸರಕಾರ ಐಐಎಸ್ಸಿ ತಜ್ಞರ ವರದಿ ಆಧರಿಸಿ ಪರಿಷ್ಕøತ ಎತ್ತಿನಹೊಳೆ ಯೋಜನೆಗೆ ಅಸ್ತು ಎಂದಿತು. ಯಡಿಯೂರಪ್ಪ ಸರಕಾರ ಮೊದಲ ಬಾರಿ ಇದರ ಅನುಷ್ಠಾನವನ್ನು ಬಜೆಟ್‍ನಲ್ಲಿ ಪ್ರಕಟಿಸಿತ್ತು.

# ಯೋಜನೆಯ ವಿವರ:
ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲುನಾಡಿನ ಕಡೆಗೆ ಹರಿಸುವ ಯೋಜನೆ ಇದು. ಹಾಗಂತ ನೇತ್ರಾವತಿ, ಕುಮಾರಧಾರಾ ತಿರುವು ಯೋಜನೆ ಇದಲ್ಲ.  ಏಕೆಂದರೆ ವಾರ್ಷಿಕ ಸರಾಸರಿ ನೇತ್ರಾವತಿಯಲ್ಲಿ 548 ಟಿಎಂಸಿ ಅಡಿ ಹಾಗೂ ಕುಮಾರಧಾರಾದಲ್ಲಿ 220 ಟಿಎಂಸಿ ಅಡಿ ನೀರಿನ ಹರಿವು ಇದೆ. ಈ ಪೈಕಿ ಎತ್ತಿನ ಹೊಳೆಗೆ ಬಳಕೆಯಾಗುತ್ತಿರುವುದು 24.01 ಟಿಎಂಸಿ ಅಡಿ ಮಾತ್ರ. ಅಂದರೆ 768 ಟಿಎಂಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಪೂರ್ವದ ಕಡೆಗೆ ಹರಿಸಲಾಗುತ್ತದೆ.

ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ, ಹೊಂಗದ ಹಳ್ಳ, ಕೇರಿಹೊಳೆ, ಕಾಡುಮನೆ ಹೊಳೆ ಹಾಗೂ ಎತ್ತಿನ ಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ. ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ 34.26 ಟಿಎಂಸಿ ಅಡಿ ನೀರಿನ ಪೈಕಿ 24.01 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ. ಹೊಳೆಗಳ ಹರಿವಿನ ಮಧ್ಯೆ ಕಿರು ಕಟ್ಟೆ ಕಟ್ಟಿ ಸುಮಾರು 940 ಅಡಿ ಎತ್ತರಕ್ಕೆ ಪಂಪ್ ಮಾಡಿ ನೀರು ಹರಿಸಲಾಗುತ್ತದೆ. ಸಕಲೇಶಪುರ ತಾಲ್ಲೂಕಿನಿಂದ ಕೋಲಾರದ ಶ್ರೀನಿವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನುಷ್ಠಾನ ವಾಗಬೇಕಿದೆ. 260 ಕಿ.ಮೀ ಉದ್ದ ತೆರೆದ ಕಾಲುವೆ ಹಾಗೂ ಪೈಪ್ಲೈನ್ ಮೂಲಕ ನೀರು ಹರಿಯುತ್ತದೆ. ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲ್ಲೂಕುಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆ.

ಒಮ್ಮೆ ಏತನೀರಾವರಿ ಮೂಲಕ ನೀರೆತ್ತಿ ನಾಲೆಗೆ ಹರಿಸಿದರೆ ತುಮಕೂರು ಜಿಲ್ಲೇ ಕೊರಟಗೆರೆ ತಾಲ್ಲೂಕಿನ ಬೈರಗೊಂಡ್ಲು ಜಲಾಶಯದವರೆಗೆ ನೀರು ಗುರುತ್ವಾಕರ್ಷಣೆ ಬಲದ ಮೇಲೆ ಹರಿಯಲಿದೆ. ಕುಂದಣ ಎಂಬಲ್ಲಿ 70-80 ಮೀಟರ್ ನೀರನ್ನು ಮತ್ತೆ ಪಂಪ್ ಮೂಲಕ ಮೇಲೆತ್ತಿ ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೇಗೆ ನೀರು ಹರಿಸುವ ಉದ್ದೇಶವಿದೆ.

ಅಂದು,(2012)ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಈ ಯೋಜನೆಗೆ ರೂಪ ನೀಡಿದ್ದರು. ಈಗ ಅವರೇ ಮುಖ್ಯಮಂತ್ರಿ ಆಗಿರುವಾದರಿಂದ ಯೋಜನೆ ಗೆ ಮತ್ತಷ್ಟು ವೇಗ ಸಿಗುತ್ತದೆ ಎಂಬ ನಿರೀಕ್ಷಿಯಲ್ಲಿದ್ದ ಜಿಲ್ಲೇಯ ಜನತೆಗೆ ಸರ್ಕಾರದ ಮುಂದೆ ನಿಗಮವು ಇಟ್ಟಿರುವ ಪ್ರಸ್ತಾವನೆ ವಿಷಯ ಕೇಳಿ ದಿಗ್ಭ್ರಮೆಯಾಗಿದೆ.

ಇದರಿಂದ ಬರದ ಜಿಲ್ಲೇಗಳ ಜನರ ಬದುಕಿಗೆ ಹೊಸ ಆಶಾಕಿರಣ ಮೂಡಿಸಿದ್ದ, ಬಹು ನಿರೀಕ್ಷಿತ ಯೋಜನೆಯು ಜನರ ವಿಶ್ವಾಸ ಕಳೆದುಕೊಂಡು ಭರವಸೆ ಹುಸಿ ಗೊಳಿಸಿದ್ದು ಶಾಶ್ವತ ನೀರಾವರಿಗಾಗಿ ಮೂರು ದಶಕಗಳ ಕಾಲ ಹೋರಾಡಿದ ರೈತರಲ್ಲಿ ಮತ್ತಷ್ಟು ಆತಂಕ ಸೃಷ್ಠಿಯಾಗಿ ಮತ್ತೆ ಹೋರಾಟದ ಕಿಚ್ಚು ಎಬ್ಬಿಸುವಂತೆ ಮಾಡಿದೆ.

Facebook Comments