ಸಿಎಂಗೆ ಪತ್ರ ಬರೆದ ಎಚ್‌ಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.26- ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಜಲಾಶಯದ ನೀರು ಸಂಗ್ರಹಣ ಸಾಮಥ್ರ್ಯವನ್ನು 5.78 ಟಿಎಂಸಿಯಿಂದ ಎರಡು ಟಿಎಂಸಿ ಅಡಿಗೆ ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೂಡಲೇ ಕೈ ಬಿಡುವಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, ಬೈರಗೊಂಡ್ಲು ಜಲಾಶಯದ ಸಾಮಥ್ರ್ಯವನ್ನು ಕಡಿಮೆಗೊಳಿಸುವ ಪ್ರಸ್ತಾವ ಕೈ ಬಿಟ್ಟು ಜಲಾಶಯಕ್ಕೆ ಅಗತ್ಯವಾದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಕೊರಟಗೆರೆ ಭೂ ಮಾಲೀಕರ ಬೇಡಿಕೆಯಂತೆ ಸಕಾರಾತ್ಮಕವಾಗಿ ಪರಿಗಣಿಸಬೇಕೆಂದು ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆಯ ಅನುಮೋದಿತ ಪರಿಷ್ಕøತ ಯೋಜನಾ ವರದಿಯಂತೆ ನಿರ್ಮಾಣ ಕಾರ್ಯವನ್ನು ಮುಂದುವರೆಸಬೇಕೆಂದು ಅವರು ಕೋರಿದ್ದಾರೆ. ಪದೇ ಪದೇ ಎತ್ತಿನಹೊಳೆ ಯೋಜನೆಯ ವಿನ್ಯಾಸದಲ್ಲಿ ಬದಲಾವಣೆ ಮಾಡಿ ಬೈರಗೊಂಡ್ಲು ಜಲಾಶಯದ ಸಂಗ್ರಹಣಾ ಸಾಮಥ್ರ್ಯ ಕಡಿಮೆಗೊಳಿಸುವ ತೀರ್ಮಾನದಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನರಿಗೆ ಯೋಜನೆ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ. ಇದರಿಂದ ಯಾವುದೇ ಸಂದರ್ಭದಲ್ಲಿ ಜನರು ಉಗ್ರ ಸ್ವರೂಪದ ಚಳವಳಿ ನಡೆಸುವ ಸಾಧ್ಯತೆ ಇರುವುದರಿಂದ ಪರ್ಯಾಯ ಪ್ರಸ್ತಾವನೆಯಿಂದ ಯೋಜನೆಯ ಮೂಲ ಉದ್ದೇಶಕ್ಕೆ ದುಷ್ಪರಿಣಾಮ ಉಂಟಾಗಲಿದೆ ಎಂದು ಹೇಳಿದ್ದಾರೆ.

ಬೈರಗೊಂಡ್ಲು ಜಲಾಶಯವನ್ನು ತುಂಬಿಸಿ ನಂತರ ನೀರನ್ನು ಮೇಲಕ್ಕೆತ್ತುವ ಬದಲು ಗುರುತ್ವಾಕರ್ಷಣೆಯ ತೆರೆದ ಕಾಲುವೆಯಿಂದಲೇ ನೇರವಾಗಿ ಪಂಪ್‍ಗಳ ಮೂಲಕ ನೀರನ್ನು ಮೇಲಕ್ಕೆತ್ತಿ ಈ ಜಿಲ್ಲೆಗಳಿಗೆ ನೀರು ಹರಿಸಲು ತೀರ್ಮಾನಿಸಿರುವುದು ಗಮನಕ್ಕೆ ಬಂದಿದೆ. ವಿಶ್ವೇಶ್ವರಯ್ಯ ಜಲ ನಿಗಮವು ಈ ರೀತಿಯ ಪರ್ಯಾಯ ಪ್ರಸ್ತಾವನೆಯಲ್ಲಿ 23,251 ಕೋಟಿ ರೂ. ಮೊತ್ತದ ಅಂದಾಜಿಗೆ ಸರ್ಕಾರದ ಅನುಮೋದನೆ ಪಡೆಯುವ ಅಂತಿಮ ಘಟ್ಟದಲ್ಲಿದೆ ಎಂದು ತಿಳಿದು ಬಂದಿದೆ ಎಂದಿದ್ದಾರೆ.

ಬೈರಗೊಂಡ್ಲು ಬಳಿ ಜಲಾಶಯ ನಿರ್ಮಿಸಲು 2014ರಲ್ಲೇ ಅನುಮೋದನೆ ಪಡೆದಿದ್ದರೂ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿ ಕಾಮಗಾರಿ ಪ್ರಾರಂಭವಾಗಿಲ್ಲ. ಭೂ ಮಾಲೀಕರ ಬೇಡಿಕೆ ಈಡೇರಿಸಿದರೆ ಸರ್ಕಾರಕ್ಕೆ 319 ಕೋಟಿ ರೂ. ಅಧಿಕ ವೆಚ್ಚವಾಗಲಿದೆ ಎಂಬ ವಾದವಿದೆ ಎಂದು ಹೇಳಿದ್ದಾರೆ.

Facebook Comments