ಯೋಗ ದಿನಾಚರಣೆ ಅಂಗವಾಗಿ ಗಣ್ಯರಿಂದ ಯೋಗಾಭ್ಯಾಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.21- ವಿಶ್ವ ಯೋಗ ದಿನಾಚರಣೆ ಅಂಗವಾಗಿ ಇಂದು ಗಣ್ಯಾತಿಗಣ್ಯರೆಲ್ಲ ಯೋಗಾಭ್ಯಾಸದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಒತ್ತಾಸೆಯ ಮೇರೆಗೆ ವಿಶ್ವಸಂಸ್ಥೆ ಯೋಗ ದಿನಾಚರಣೆಯನ್ನು ಘೋಷಣೆ ಮಾಡಿದೆ. ಅದರ ಅಂಗವಾಗಿ ಇಂದು ದೇಶಾದ್ಯಂತ ವಿಶೇಷ ಯೋಗಾಭ್ಯಾಸಗಳು ನಡೆದಿವೆ.

ರಾಜ್ಯದಲ್ಲೂ ಕೂಡ ರಾಜ್ಯಪಾಲ ವಜುಬಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟಿಲ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ರಮೇಶ್ ಜಾರಕಿಹೊಳಿ, ನಟರಾದ ಪುನೀತ್‍ರಾಜ್‍ಕುಮಾರ್ ಸೇರಿದಂತೆ ಹಲವಾರು ಮಂದಿ ಯೋಗಾಭ್ಯಾಸ ಮಾಡಿ ಜನರಲ್ಲಿ ಅರಿವು ಮೂಡಿಸಿದರು.

ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾಮೂಹಿಕ ಯೋಗ ಪ್ರದರ್ಶನಗಳ ಸಂಖ್ಯೆ ಕಡಿಮೆ ಇತ್ತು. ಆದರೂ ಅಲ್ಲಲ್ಲಿ ಕೆಲವರು ಸಾಮೂಹಿಕ ಯೋಗಾಭ್ಯಾಸ ನಡೆಸಿದರು. ಈ ವೇಳೆ ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿತ್ತು. ಸ್ಯಾನಿಟೈಜರ್, ಸ್ವಚ್ಛತೆ ಮತ್ತು ಕೊರೊನಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರಮುಖವಾಗಿ ಪಾಲಿಸಲಾಯಿತು.

ಯೋಗದಿಂದ ಆರೋಗ್ಯ ಸುಧಾರಣೆಯಷ್ಟೆ ಅಲ್ಲದೆ ರೋಗ ನಿರೋಧಕ ಶಕ್ತಿ ಹೆಚ್ಚಲಿದೆ. ಒತ್ತಡಗಳು ಕಡಿಮೆಯಾಗಿ ಮಾನಸಿಕ ನೆಮ್ಮದಿ ಮೂಡಲಿದೆ. ಸಂಕಷ್ಟ ಕಾಲದಲ್ಲಿ ಸದೃಢ ಆರೋಗ್ಯಕ್ಕಾಗಿ ಯೋಗ ಸಿದ್ಧೌಷಧ ಎಂಬ ಉಪನ್ಯಾಸಗಳು ಕೇಳಿಬಂದಿವೆ.

ಜನಸಾಮಾನ್ಯರ ವಲಯದಲ್ಲೂ ಯೋಗ ದಿನಾಚರಣೆಯ ಅಭ್ಯಾಸಗಳು ಜೋರಾಗಿಯೇ ಕಂಡುಬಂದವು. ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಯೋಗಾಭ್ಯಾಸದ ವಿಡಿಯೋಗಳು, ಫೋಟೋಗಳನ್ನು ಅಪ್‍ಲೋಡ್ ಮಾಡುವ ಮೂಲಕ ಹೆಚ್ಚು ಜನರನ್ನು ತಲುಪುವ ಪ್ರಯತ್ನ ಮಾಡಿದರು.

Facebook Comments