ಐಹಿಕಾಭ್ಯುದಯದ ‘ಯೋಗ’ ಮಾರ್ಗ

ಈ ಸುದ್ದಿಯನ್ನು ಶೇರ್ ಮಾಡಿ

ಯೋಗಾ ವಿದ್ಯೆಯು ವಿಶ್ವಕ್ಕೆ ಭರತವರ್ಷವು ನೀಡಿರುವ ಒಂದು ಮಹಾಕೊಡುಗೆ. ವೇದೋಪನಿಷತ್ತುಗಳಲ್ಲಿ, ಶೃತಿಶಾಸ್ತ್ರ ಪುರಾಣಗಳಲ್ಲಿ, ಭಗವದ್ಗೀತೆ ಮತ್ತು ಇತಿಹಾಸಗಳಲ್ಲಿ ಕೂಡ ಯೋಗಕ್ಕೆ ಸಂಬಂಧಪಟ್ಟ ಉಲ್ಲೇಖಗಳಿರುವುದನ್ನು ನೋಡಿದರೆ ಇದಕ್ಕೆ ಸುಮಾರು ನಾಲ್ಕೈದು ಸಾವಿರ ವರ್ಷಗಳ ಹಿನ್ನೆಲೆ ಇರುವಂತೆ ಕಾಣುತ್ತದೆ.

ಆದರೂ ಈ ಒಂದು ವಿದ್ಯೆಯು ಯಾವುದೇ ಒಂದು ವ್ಯಕ್ತಿಗೆ, ಸಮಾಜಕ್ಕೆ, ಪಗಂಡಕ್ಕೆ, ಜಾತಿಗೆ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾದುದಿಲ್ಲ. ಇದು ಇಡೀ ವಿಶ್ವಕ್ಕೆ ಪ್ರಾಚೀನ ಋಷಿಮುನಿಗಳು ನೀಡಿರುವ ಒಂದು ವರಪ್ರಸಾದ. ಹಾಗಾದರೆ ಈ ಮಹಾವಿದ್ಯೆಯು ಎಲ್ಲಿಂದ ಪ್ರಾರಂಭವಾಯ್ತು? ಅದರ ಕರ್ತೃಗಳಾರು? ಅದು ಹೇಗೆ ಬೆಳೆದು ಬಂತು? ಅದರಲ್ಲಿರುವ ಅಂತಹ ಅಂತಃಶಕ್ತಿ ಏನು? ಇವೇ ಮೊದಲಾದ ಪ್ರಶ್ನೆಗಳು ಸಾಮಾನ್ಯವಾಗಿ ನಮ್ಮ ಮುಂದೆ ಬರುತ್ತವೆ.

ಪ್ರಾಚೀನ ಮಹರ್ಷಿಗಳು- ಶ್ರೀಮನ್ನಾರಾಯಣನನ್ನು ಮತ್ತು ಶ್ರೀ ಶಿವನನ್ನು (ಶಂಕರನನ್ನು) ಯೋಗಿಗಳೆಲ್ಲರ ಯೋಗೇಶ್ವರರೇ ಮೊತ್ತ ಮೊದಲನೆಯ ಯೋಗಾಚಾರ್ಯರೆಂಬುದಾಗಿಯೂ ಮಹರ್ಷಿಗಳೆಲ್ಲರ ಅಭಿಪ್ರಾಯ. ಮೂಲತಃ ಶಂಕರ-ನಾರಾಯಣರಲ್ಲಿ ಯಾವ ಭೇದವಿಲ್ಲದಿದ್ದರೂ ಅನೂಚಾನವಾಗಿ ಇವರೀರ್ವರ ಹೆಸರಿನಲ್ಲೂ ಒಂದೊಂದು ಯೋಗ ಸಂಪ್ರದಾಯವು ನಡೆದುಕೊಂಡು ಬಂದಿರುವುದು ರೂಢಿಯಲ್ಲಿದೆ.

ಹೀಗಾಗಿ ಕೆಲ ಕೆಲವು ಉಪನಿಷತ್ತುಗಳಲ್ಲಿ ಶ್ರೀಮನ್ನಾರಾಯಣನೇ ಯೋಗದ ಮೂಲ ಆಚಾರ್ಯನೆಂದು ಪ್ರತಿಪಾದಿಸಿದರೆ ಇನ್ನು ಕೆಲವು ಉಪನಿಷತ್ತುಗಳಲ್ಲಿ ರುದ್ರನನ್ನೇ ಯೋಗದ ಮೂಲ ಆಚಾರ್ಯನೆಂಬುದಾಗಿ ನಿರೂಪಿಸಲಾಗಿದೆ. ಆದರೂ ಉಪನಿಷತ್ತುಗಳಲ್ಲಿ ವಿಷ್ಣು (ನಾರಾಯಣ) ಮತ್ತು ಶಂಕರರಿಂದಲೇ ಹಿರಣ್ಯಗರ್ಭನೆಂನ್ನಿಸಿಕೊಂಡಿರುವ ಬ್ರಹ್ಮನಿಗೆ ಯೋಗಪದೇಶವಾಯಿತೆಂದೂ ಮತ್ತು ಆತನು ಅನೇಕ ಋಷಿಮಹರ್ಷಿಗಳಾದ ಯೋಗಾಚಾರ್ಯರುಗಳಿಂದ ಆ ಯೋಗವಿದ್ಯೆಯನ್ನು ಪ್ರಚುರಪಡಿಸಿದನೆಂದೂ ತಿಳಿಯುತ್ತದೆ.

ಶ್ರೀ ವಿವೇಕಾನಂದರು, ಶ್ರೀ ರಾಮತೀರ್ಥರೇ ಮೊದಲಾದ ಸನ್ಯಾಸಿಗಳು ವಿದೇಶಗಳಲ್ಲಿ ಭಾರತೀಯ ಸಂಸ್ಕøತಿಯನ್ನೂ, ಯೋಗವಿದ್ಯೆಯನ್ನೂ ಪ್ರಚಾರಪಡಿಸುವುದರಲ್ಲಿ ಅತಿ ಮುಖ್ಯವಾದ ಪಾತ್ರವನ್ನು ವಹಿಸಿದ್ದಾರೆ.

ಇದೇ ಕಾಲದಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಶ್ರಮಿಸಿದ್ದಾರೆ. ಇದಕ್ಕೆ ವ್ಯಾಪಕವಾದ ಪುನಶ್ಚೇತನವನ್ನಿತ್ತು ಯೋಗವಿದ್ಯೆಯ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದವರೆಂದರೆ ಶ್ರೀ ರಮಣಮಹರ್ಷಿಗಳು ಮತ್ತು ಶ್ರೀ ಅರವಿಂದರು. ಇವರು ಕ್ಷೀಣಿಸುತ್ತಿದ್ದ ಯೋಗ ವಿದ್ಯೆಯ ದೀಪಜ್ಯೋತಿಗೆ ತೈಲವನ್ನೆರೆದು ಅದು ಪ್ರಜ್ವಲಿಸಿ ಉರಿಯುವಂತೆ ಮಾಡಿದರು.

ಹೀಗಾಗಿ ವಿದೇಶದ ಆಸ್ತಿಕರನೇಕರು ಭಾರತದ ಕಡೆಗೆ ಆಶಾಭಾವನೆಯಿಂದ ನೋಡುವಂತಾಯ್ತು. ಅವರಲ್ಲನೇಕರಿಗೆ ಯೋಗವಿದ್ಯೆಯ ಸಂಬಂಧದಲ್ಲಿ ಅದರ ಸಾಧನೆಯ ವಿಚಾರದಲ್ಲಿ ವಿಶೇಷ ಆಸಕ್ತಿಯುಂಟಾಯಿತು. ಬಾಹ್ಯ ಸುಖಸಂಪತ್ತಿನಲ್ಲಿ ಭೋಗೈಶ್ವರ್ಯಗಳಲ್ಲಿ ಶಾಶ್ವತ ಸುಖಕಾಣದ ಅವರು ಭಾರತೀಯ ಸಂಸ್ಕøತಿಯಲ್ಲಿ, ಯೋಗವಿದ್ಯೆಯಲ್ಲಿ ಆನಂದವನ್ನು ಕಂಡು ಇದಕ್ಕೆ ಮಾರುಹೋದರು.

ಆದರೆ ಇಡೀ ಕಾಳಿನ ಜೊತೆಯಲ್ಲಿ ಜೊಳ್ಳೂ ತೂರಿ ಬಂದಂತೆ ಈ ಕಾಲದಲ್ಲೇ ಅನೇಕ ವ್ಯಾಪಾರೀ ಮನೋಭಾವದ ಯೋಗಶಿಕ್ಷಕರು ಕೇವಲ ಹಣಗಳಿಸುವ ದೃಷ್ಟಿಯಿಂದ ವಿದೇಶ ಸಂಚಾರ ಕೈಗೊಂಡು ಯೋಗಶಿಕ್ಷಣದ ನೆಪದಲ್ಲಿ ಧನಸಂಪಾದನೆಗೆ ನಿಂತಿರುವುದು ತೀರ ಶೋಚನೀಯವಾದ ವಿಚಾರ.

ಅಂತೂ ಯಾವುದೋ ರೀತಿಯಲ್ಲಿ ಇಂದು ಯೋಗವಿದ್ಯೆಯ ಮಾತೃಸ್ಥಾನವಾದ ಭಾರತದಲ್ಲಿದು ನಶಿಸುತ್ತಿದ್ದರೂ ವಿದೇಶಗಳಲ್ಲದು ವ್ಯಾಪಕವಾಗಿ ಬೆಳೆಯುತ್ತಿದೆ ಎಂಬುದಂತೂ ತೀರಸತ್ಯ. ನಮ್ಮಿಂದಲೇ ಕಲಿತ ಯೋಗವಿದ್ಯೆಗೆ ವಿಜ್ಞಾನದ ಲೇಪನವನ್ನಿತ್ತು ತಿರುಗಿ ನಮಗೇ ಮರಳಿಸುವ ಪ್ರಯತ್ನ ನಡೆದಿದೆ.

ವಾಸ್ತವಿಕವಾಗಿ ಯೋಗ ಮಾರ್ಗದಿಂದ ಐಹಿಕಾಭ್ಯುದಯ ಮತ್ತು ಆಮುಷ್ಮಿಕ ಶ್ರೇಯಸ್ಸು ಇವೆರಡನ್ನು ಧಾರಾಳವಾಗಿ ಸಾಧಿಸಬಹುದಾಗಿದೆ. ಅಭ್ಯಾಸ ಪ್ರಧಾನವಾದ ಯೋಗ ಮಾರ್ಗದಿಂದ ಅದ್ಭುತ ಮಹಿಮೆಯನ್ನೂ ಮೋಕ್ಷ ಸಾಮ್ರಾಜ್ಯವನ್ನೂ ಸಾಧಿಸಿದ ಅನೇಕ ಮಹಾನುಭಾವರುಗಳು ಇದ್ದಾರೆ.

ಯೋಗಪ್ರಸ್ಥಾನ ಪ್ರಾಚೀನವಾದುದೆಂಬ ಪ್ರತೀತಿಯೂ ಪುರಾಣಗಳಲ್ಲಿ ಪ್ರಸಿದ್ಧವಾಗಿದೆ. ರಾಮಾಯಣದಲ್ಲಿ ಲಕ್ಷ್ಮಣನೂ ಯೋಗಮಾರ್ಗದಿಂದಲೇ ಸ್ವಸ್ಥಾನವಾದ ವೈಕುಂಠವನ್ನು ಸೇರಿದನೆಂಬ ಐತಿಹ್ಯವಿದೆ. ಭಾರತ ಭಾಗವತಗಳಲ್ಲಿ ಬಲರಾಮ, ಶ್ರೀಕೃಷ್ಣ, ವಿದುರ ಮೊದಲಾದವರು ಯೋಗಾರೂಢರಾಗಿಯೇ ಪರಂಧಾಮ
ವನ್ನೈದಿದರೆಂದಿದೆ.

ಯೋಗಶಾಸ್ತ್ರ ಜಗತ್ತಿನ ಜನಕ್ಕೆ ಸಂಬಂಧಪಟ್ಟ ವಿಷಯವಾಗಿದ್ದು ಭರತಖಂಡದ ಪ್ರಮುಖ ವಿಜ್ಞಾನಗಳಲ್ಲೊಂದಾಗಿದೆ. ಆದರೆ ಸಹಸ್ರಾರು ವರುಷಗಳ ಹಿಂದೆಯೇ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಯೋಗಾಭ್ಯಾಸ ಪ್ರಚಾರದಲ್ಲಿದ್ದ ಉದಾಹರಣೆಗಳು ದೊರಕಿವೆ. ಪ್ರಾಯಶಃ ಕೆಲವು ಸಾವಿರ ವರ್ಷಗಳ ಹಿಂದೆಯೇ ಈ ವಿಜ್ಞಾನವು ಬೇರೆ ಬೇರೆ ರಾಷ್ಟ್ರಗಳಿಗೆ ಹರಡಿರಬಹುದು.

ಪೂರ್ವಕಾಲದಲ್ಲಿ ಸಾಮಾನ್ಯವಾಗಿ ಸನ್ಯಾಸವನ್ನು ಸ್ವೀಕರಿಸಿದ ವ್ಯಕ್ತಿಗಳೆ ಯೋಗಾಭ್ಯಾಸಮಾಡಿಕೊಂಡಿದ್ದು ಪ್ರಾಪಂಚಿಕ ವ್ಯವಹಾರಗಳಿಂದ ದೂರವಾಗೆ ಉಳಿಯುತ್ತಿದ್ದರು. ಇದನ್ನೆಲ್ಲಾ ನೋಡಿದ ಜನಸಾಮಾನ್ಯರು ಯೋಗಾಭ್ಯಾಸ ಮಾಡುವುದರಲ್ಲಾಗಲೀ ಈ ಬಗ್ಗೆ ವಿಷಯಗಳನ್ನು ತಿಳಿದುಕೊಳ್ಳುವುದಲ್ಲಾಗಲೀ ಆಸಕ್ತಿ ತೋರಿಸುತ್ತಿರಲಿಲ್ಲ.

ಆಧುನಿಕ ಕಾಲದಲ್ಲಿ ಯೋಗವು ವಿಶ್ವದಲ್ಲೆಲ್ಲಾ ಪ್ರಚಾರವಾಗಿರುವುದನ್ನೂ, ದಿನೇ ದಿನೇ ಈ ವಿಜ್ಞಾನವು ಪ್ರಖ್ಯಾತಿಗೆ ಬರುತ್ತಿರುವುದನ್ನೂ ನೋಡುತ್ತಿದ್ದೇವೆ. ಸೂಕ್ಷ್ಮವಾಗಿ ನೋಡುತ್ತಾ ಹೋದರೆ ಯೋಗದ ಮಾತೃಭೂಮಿಯಾದ ಭಾರತದಲ್ಲಿ ಇರುವುದಕ್ಕಿಂತ ಹೆಚ್ಚು ಯೋಗ ಪ್ರಚಾರ ಅಭ್ಯಾಸಗಳನ್ನು ಇತರ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನೋಡಬಹುದು. ಅಲ್ಲದೆ ಅನೇಕ ಕಡೆಗಳಲ್ಲಿ ಬೃಹತ್ ಯೋಗ ಸಮ್ಮೇಳನಗಳಾಗುತ್ತಿರುವುದೂ ಕಂಡು ಬರುತ್ತಿದೆ.

ಆಫ್ರಿಕಾ, ಸ್ವಿಡ್ಜರ್‍ಲ್ಯಾಂಡ್, ಜರ್ಮನಿ, ಇಟಲಿ, ಫ್ರಾನ್ಸ್ ಮತ್ತು ಇಂಗ್ಲೆಂಡ್ ದೇಶಗಳಲ್ಲಿ ಅನೇಕ ಯೋಗ ಕೇಂದ್ರಗಳನ್ನೂ, ಕೆಲವು ಆಸ್ಪತ್ರೆಗಳಲ್ಲಿ ನಡೆಸಲ್ಪಡುತ್ತಿರುವ ಯೋಗ ಚಿಕಿತ್ಸೆಗಳನ್ನೂ, ನೂರಾರು ಯೋಗ ಅಧ್ಯಾಪಕರು ಮತ್ತು ಸಾವಿರಾರು ಯೋಗವಿದ್ಯಾರ್ಥಿಗಳನ್ನು ಕಂಡ ನನಗೆ ಅತ್ಯಾಶ್ಚರ್ಯವಾಗಿದೆ.

ಭಾರತದಲ್ಲಿ ಮಾನವನು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕ್ರಮಬದ್ಧವಾಗಿ ಹೊಂದಿರಬೇಕಾದ ಅಗತ್ಯಗಳ ಬಗ್ಗೆ ಅನೇಕ ಸಾವಿರ ವರ್ಷಗಳ ಹಿಂದೆಯೇ ಆರ್ಯುವೇದ ಮತ್ತು ಯೋಗಶಾಸ್ತ್ರಗಳು ಬೋಧಿಸಿದ ವಿಚಾರಗಳು ಇಂದಿಗೂ ಅನ್ವಯಿಸುತ್ತಿವೆ.

ಮನುಷ್ಯನು ನಿರೋಗಿಯಾಗಿ ಬಾಳಬೇಕಾದರೆ ಕೇವಲ ಐಶ್ವರ್ಯ ಉನ್ನತ ಅಧಿಕಾರ ಎಲ್ಲಾ ತರದ ಸೌಕರ್ಯಗಳಿಂದ ಕೂಡಿರುವುದು ಇವು ಯಾವುದೂ ಸಾಲದೆಂಬುದು ಖಚಿತ. ದೇಹದ ಸ್ಥಿತಿಗತಿಗಳು ಸಮವಾಗಿದ್ದು ಆಗ್ನಿಯು ಕ್ರಮವಾಗಿ ತಿಂದ ಆಹಾರಗಳನ್ನು ಜೀರ್ಣಿಸಿ ಮಲಮೂತ್ರಗಳ ವಿಸರ್ಜನೆಗಳು ಕ್ರಮವಾಗಿ ನಡೆಯುತ್ತಿದ್ದು, ದೇಹದ ಧಾತುಗಳು ಸುಸೂತ್ರವಾಗಿದ್ದು ಮನಸ್ಸು ಪ್ರಫುಲ್ಲವಾಗಿದ್ದರೆ ಮಾತ್ರ ಮನುಷ್ಯನು ಸುಖಿಯೂ ಆರೋಗ್ಯವಂತನೂ ಎಂತ ಎನ್ನಿಸಿಕೊಳ್ಳುವನು.

ಈ ರೀತಿಯ ಆರೋಗ್ಯ ಮತ್ತು ಮನಃಸಂತೋಷವನ್ನುಂಟುಮಾಡಿಕೊಳ್ಳಬೇಕಾದಲ್ಲಿ ಆರ್ಯುವೇದಶಾಸ್ತ್ರದಲ್ಲಿ ವಿವರಿಸಿದ ಸ್ವಸ್ಥವೃತ್ತ ತತ್ತ್ವವನ್ನೂ ಯೋಗಶಾಸ್ತ್ರದಲ್ಲಿ ವಿವರಿಸಿದ ತತ್ತ್ವಗಳನ್ನೂ ಪರಿಪಾಲಿಸಿದಲ್ಲಿ ಮಾತ್ರ ಸಾಧ್ಯ.

# ಗುರುರಾಜ ಫೋಶೆಟ್ಟಿಹಳ್ಳಿ

Facebook Comments