ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಹಂತಕರಿಗೆ ಅತ್ಯುಗ್ರ ಶಿಕ್ಷೆ : ಯೋಗಿ ಭರವಸೆ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ಡಿ.7-ಉನ್ನಾವೋ ಅತ್ಯಾಚಾರ ಸಂತ್ರಸ್ತೆ ನಿನ್ನೆ ತಡರಾತ್ರಿ ಮೃತಪಟ್ಟ ಘಟನೆ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ದುಷ್ಕರ್ಮಿಗಳಿಗೆ ಅತ್ಯುಗ್ರ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ವೇಳೆ ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಮೇಲೆ ದಾಳಿ ನಡೆಸಿದ ಐವರು ಆರೋಪಿಗಳು, ಆಕೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು.

ಶೇ.90ರಷ್ಟು ಸುಟ್ಟ ಗಾಯಗಳಿಂದಾಗಿ ನಿನ್ನೆ ತಡರಾತ್ರಿ ದೆಹಲಿ ಸಫ್ತರ್‍ಜಂಗ್ ಆಸ್ಪತ್ರೆಯಲ್ಲಿ ಆಕೆ ಕೊನೆಯುಸಿರೆಳೆದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ, ಇದು ಅತ್ಯಂತ ನೋವಿನ ಸಂಗತಿ. ಈ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯ ಕೈಗೊಳ್ಳಲಿದ್ದು, ತಪ್ಪಿತಸ್ಥರಿಗೆ ಅತ್ಯುಗ್ರ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದ್ದಾರೆ.

ಗಲ್ಲು ಶಿಕ್ಷೆಗೆ ಮನವಿ: ಈ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ್, ಇನ್ನೊಂದು ತಿಂಗಳಲ್ಲಿ ಈ ಹತ್ಯೆಯ ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.

ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಅತ್ಯಂತ ಬರ್ಬರ ಕೊಲೆ. ಆಕೆಯ ಜೀವಂತ ದಹನಕ್ಕೆ ಕಾರಣವಾದ ಎಲ್ಲಾ ಐವರಿಗೆ ನೇಣುಗಂಬದ ಶಿಕ್ಷೆ ವಿಧಿಸಬೇಕು. ಇನ್ನೊಂದು ತಿಂಗಳಲ್ಲಿ ಇದು ಜಾರಿಯಾಗಬೇಕು. ಇದಕ್ಕಾಗಿ ನಾನು ಕೇಂದ್ರ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ಹೈದರಾಬಾದ್ ಶೈಲಿ ಎನ್‍ಕೌಂಟರ್‍ಗೆ ಆಗ್ರಹ: ಉನ್ನಾವೋ ಸಂತ್ರಸ್ತೆ ಮೃತಪಟ್ಟ ಘಟನೆ ಬಗ್ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಪಶುವೈದ್ಯೆ ಅತ್ಯಾಚಾರಿ ಮತ್ತು ಹಂತಕರನ್ನು ಎನ್‍ಕೌಂಟರ್ ಮಾಡಿದ ರೀತಿಯಲ್ಲೇ ಉನ್ನಾವೋ ದುರುಳರನ್ನು ಹೊಡೆದುರುಳಿಸಬೇಕೆಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Facebook Comments