ಯುವ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಮೂವರಲ್ಲಿ ಪೈಪೋಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ರಾಜ್ಯ ಯುವ ಕಾಂಗ್ರೆಸ್ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಶೇ.50ರಷ್ಟು ಮತದಾನವಾಗಿದ್ದು, ಮೂರು ಮಂದಿ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವವರ ಪೈಕಿ ಎನ್‍ಎಸ್‍ಯುಐನ ಅಧ್ಯಕ್ಷರಾಗಿದ್ದ ಮಂಜುನಾಥ್‍ಗೌಡ, ಶಾಸಕ ಎನ್.ಎ.ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲ್ಪಾಡ್, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಅವರ ಪುತ್ರ ರಕ್ಷರಾಮಯ್ಯ ಅವರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಹೆಚ್ಚು ಸ್ಥಾನಗಳಿಸಿದ ಮೂವರನ್ನು ಮತ್ತೊಂದು ಸುತ್ತಿನ ಸಂದರ್ಶನ ನಡೆಸಿ ಯುವ ಕಾಂಗ್ರೆಸ್‍ನ ರಾಷ್ಟ್ರೀಯ ಸಮಿತಿ ಅಂತಿಮವಾಗಿ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಲಿದೆ.

ಕಳೆದ ಒಂದು ತಿಂಗಳಿನಿಂದಲೂ ನಡೆದ ಯುವ ಕಾಂಗ್ರೆಸ್ ಚುನಾವಣೆ ಅತ್ಯಂತ ರೋಚಕವಾಗಿದ್ದು, ರಾಷ್ಟ್ರ ರಾಜಕಾರಣವನ್ನು ಮೀರಿಸುವಂತಹ ತಂತ್ರಗಾರಿಕೆಯನ್ನು ಒಳಗೊಂಡಿದೆ.ರಕ್ಷ ರಾಮಯ್ಯ ಅವರ ಪರವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವ ಕೃಷ್ಣಬೈರೇಗೌಡ, ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಅನೇಕ ನಾಯಕರು ಕೆಲಸ ಮಾಡಿದ್ದಾರೆ.

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ದೆಹಲಿಯಲ್ಲಿ ರಾಹುಲ್‍ಗಾಂಧಿ ಬಣದಲ್ಲಿ ಗುರುತಿಸಿಕೊಂಡಿರುವ ಶ್ರೀನಿವಾಸ್ ಅವರಿಗೆ ಪರ್ಯಾಯವಾಗಿ ನಾಯಕತ್ವವನ್ನು ಹುಟ್ಟುಹಾಕಲು ಕೆಲವು ನಾಯಕರು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ರಕ್ಷ ರಾಮಯ್ಯ ಅವರನ್ನು ಗೆಲ್ಲಿಸುವ ಸರ್ಕಸ್ ನಡೆಸಿದ್ದಾರೆ. ಮತ್ತೊಂದೆಡೆ ರಕ್ಷ ರಾಮಯ್ಯ ಅವರ ವಿರುದ್ಧವಾಗಿ ಒಂದಷ್ಟು ನಾಯಕರು ಕೆಲಸ ಮಾಡುತ್ತಿದ್ದು, ಇಲ್ಲಿ ಮತ್ತೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಬಣದ ನಡುವೆ ಪೈಪೋಟಿ ಏರ್ಪಟ್ಟಿದೆ.

ರಿಜ್ವಾನ್ ಅರ್ಷದ್ ಕಾಲದಿಂದಲೂ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ಬಣದ ನಡುವೆ ಪೈಪೋಟಿ ನಡೆಯುತ್ತಿದೆ. ಈ ಬಾರಿ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಸತೀಶ್‍ಜಾರಕಿಹೊಳಿ ಸೇರಿದಂತೆ ಅನೇಕರು ಆರಂಭದಲ್ಲಿ ಮೊಹಮ್ಮದ್‍ನಲ್ಪಾಡ್‍ಪರವಾಗಿ ಕೆಲಸ ಮಾಡಿದ್ದರು. ಕೊನೆ ಕ್ಷಣದಲ್ಲಿ ಎನ್‍ಎಸ್‍ಯುಐ ಅಧ್ಯಕ್ಷ ಮಂಜುನಾಥ್ ಅವರನ್ನು ಗೆಲ್ಲಿಸಲು ಒಲವು ತೋರಿದ್ದರು.

ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳು ಒಗ್ಗೂಡಿದ್ದು, ನಲ್ಪಾಡ್ ಅವರನ್ನು ಗೆಲ್ಲಿಸುವ ಕಸರತ್ತು ನಡೆಸಿವೆ. ನಲ್ಪಾಡ್ ಅವರ ಮೇಲೆ ಕ್ರಿಮಿನಲ್ ಪ್ರಕರಣ ಇರುವುದರಿಂದ ಅವರನ್ನು ಚುನಾವಣೆಯಿಂದ ಹಿಂದೆ ಸರಿಸಬೇಕೆಂಬ ಸಾಕಷ್ಟು ಹುನ್ನಾರಗಳು ನಡೆದವು. ಆದರೆ, ಅದಕ್ಕೆ ಹಲವಾರು ನಾಯಕರು ವಿರೋಧ ವ್ಯಕ್ತಪಡಿಸಿದ್ದರು.  ಸದಸ್ಯರಾಗಲು ಅವಕಾಶ ನೀಡಿದ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶನೀಡಬೇಕು. ಮತದಾರರು ಸೋಲು-ಗೆಲುವನ್ನು ನಿರ್ಧರಿಸುತ್ತಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸುವುದು ಸರಿಯಲ್ಲ ಎಂಬ ವಾದವನ್ನು ಹಲವು ನಾಯಕರು ಮುಂದಿಟ್ಟ ಹಿನ್ನೆಲೆಯಲ್ಲಿ ನಲ್ಪಾಡ್‍ಗೆ ಅವಕಾಶ ಸಿಕ್ಕಿದೆ.

ಆದರೆ, ಕೊನೆ ಕ್ಷಣದಲ್ಲಿ ಅವರ ಮೇಲಿರುವ ಕ್ರಿಮಿನಲ್ ಪ್ರಕರಣವನ್ನು ಮುಂದಿಟ್ಟುಕೊಂಡು ಬದಿಗೆ ಸರಿಸುವ ಸಂಚುಕೂಡ ನಡೆದಿದೆ. ಒಂದು ಬಣ ರಕ್ಷ ರಾಮಯ್ಯ ಅವರನ್ನು ಗೆಲ್ಲಿಸುವುದಕ್ಕಿಂತ ನಲ್ಪಾಡ್ ಅಥವಾ ಮಂಜುನಾಥ್ ಅವರನ್ನು ಆಯ್ಕೆ ಮಾಡುವ ಉದ್ದೇಶದಿಂದ ಲಾಬಿ ನಡೆಸುತ್ತಿದೆ.

ಕಳೆದ ಮೂರು ದಿನಗಳಿಂದ ನಡೆದ ಯುವ ಕಾಂಗ್ರೆಸ್‍ನ ಮತದಾನದಲ್ಲಿ ಒಟ್ಟು 4.36 ಲಕ್ಷ ಮತದಾರರ ಪೈಕಿ ನಿನ್ನೆ ಮತದಾನ ಅಂತ್ಯಗೊಂಡ ವೇಳೆ 1,92,703 ಮಂದಿ ಮತದಾನ ಮಾಡಿದ್ದಾರೆ. ಮತದಾನ ಗೌಪ್ಯವಾಗಿ ನಡೆಯಬೇಕಿತ್ತು. ಆದರೆ, ಹಣದ ವಹಿವಾಟು ನಡೆದು ಅಭ್ಯರ್ಥಿಗಳಿಗೆ ತೋರಿಸಿಯೇ ಬಹಳಷ್ಟು ಮಂದಿ ಮತದಾನ ಮಾಡಿದ್ದಾರೆ. ಹೀಗಾಗಿ ಫಲಿತಾಂಶ ನಿರೀಕ್ಷಿತ ಎಂದು ಹೇಳಲಾಗುತ್ತಿದೆ.

Facebook Comments