ಫೇಸ್‍ಬುಕ್, ಟ್ವಿಟರ್ ನಂತರ ಯೂಟೂಬ್ ಸರದಿ, ಟ್ರಂಪ್ ವಿಡಿಯೋಗಳಿಗೆ ತಡೆ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಜ.13- ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸಂದರ್ಭ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಿಂದಲೂ ಡೊಲಾನ್ಡ್ ಟ್ರಂಪ್ ಅವರನ್ನು ಹೊರ ಹಾಕುವ ಪ್ರಕ್ರಿಯೆಗಳು ಬಿರುಸಿನಿಂದ ನಡೆಯುತ್ತಿವೆ. ವಾಷಿಂಗ್ಟನ್‍ನ ಕ್ಯಾಪಿಟಲ್ ಹೀಲ್ಸ್‍ನ ಹೊರಗೆ ನಡೆದ ಹಿಂಸಾಚಾರದ ಬಳಿಕ ಫೇಸ್‍ಬುಕ್ ಮತ್ತು ಟ್ವಿಟರ್ ಟ್ರಂಪ್ ಅವರ ಖಾತೆಯನ್ನು ಅಮಾನತುಗೊಳಿಸಿದ್ದವು. ಪರ್ಯಾಯವಾಗಿ ಟ್ರಂಪ್ ಟೀಮ್ ಹಾಗೂ ಬೇರೆ ಬೇರೆ ಹೆಸರಿನಲ್ಲಿ ಖಾತೆ ತೆರೆಯಲು ಪ್ರಯತ್ನ ಮಾಡಿದರೂ ಅದಕ್ಕೆ ಅವಕಾಶ ಕೊಟ್ಟಿಲ್ಲ.

ಪೇಸ್‍ಬುಕ್ ಕಳೆದ 6ದಿನಗಳಿಂದಲೂ ಟ್ರಂಪ್ ಅವರ ಖಾತೆಯನ್ನು ಅಮಾನತ್ತಿನಲ್ಲಿಟ್ಟಿದೆ. ಈಗ ಯೂಟೂಬ್ ಕೂಡ ಗಂಭೀರ ಕ್ರಮ ಕೈಗೊಂಡಿದ್ದು, ಕಳೆದ ಒಂದು ವಾರದಿಂದ ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಖಾತೆಯಲ್ಲಿ ಪ್ರಕಟಗೊಂಡಿದ್ದ ವಿಡಿಯೋಗಳನ್ನು ತಡೆಹಿಡಿದಿದೆ.

ಮಂಗಳವಾರ ಮಧ್ಯರಾತ್ರಿಯಿಂದ ಟ್ರಂಪ್ ಅವರ ಖಾತೆಯಲ್ಲಿ ಯಾವುದೇ ಹೊಸ ವಿಡಿಯೋಗಳನ್ನು ಅಪ್‍ಲೋಡ್ ಮಾಡಲು ನಿರಾಕರಿಸಲಾಗಿದೆ. ಟ್ರಂಪ್ ಅವರ ಖಾತೆಯನ್ನು ಪರಿಶೀಲಿಸಲಾಗಿ ಅದರಲ್ಲಿ ಪ್ರಕಟಿಸಲಾದ ಒಂದು ವಿಡಿಯೋ ಆಕ್ಷೇಪಾರ್ಹವಾಗಿದ್ದು, ಅದನ್ನು ತೆಗೆದು ಹಾಕಿದ್ದೇವೆ. ಯೂಟೂಬ್‍ನ ನಿಯಮಾವಳಿಗಳ ಪ್ರಕಾರ ಯಾವುದೇ ಹಿಂಸೆ ಹಾಗೂ ಹಿಂಸೆಯನ್ನು ಪ್ರಚೋದಿಸುವ ವಿಡಿಯೋಗಳನ್ನು ಪ್ರಕಟಿಸುವಂತಿಲ್ಲ. ಹಾಗಾಗಿ ಮುಂದಿನ 7 ದಿನಗಳವರೆಗೆ ಟ್ರಂಪ್ ಅವರ ಖಾತೆಯನ್ನು ಅಮಾನತ್ತಿನಲ್ಲಿಡುವುದಾಗಿ ಯೂಟೂಬ್ ಘೋಷಿಸಿದೆ.

Facebook Comments