ಹೊರ ರಾಜ್ಯದವರಿಗೆ ಮಕ್ಕಳ ಆಟಿಕೆ ಕಿಟ್ ಟೆಂಡರ್ : ವೈಎಸ್‍ವಿ ದತ್ತಾ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.19-ಮಕ್ಕಳ ಆಟಿಕೆ ಖರೀದಿ ಟೆಂಡರ್ ಅನ್ನು ಹೊರ ರಾಜ್ಯದವರಿಗೆ ನೀಡುವುದರಿಂದ ನಮ್ಮ ರಾಜ್ಯದವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ವೈಎಸ್‍ವಿ ದತ್ತಾ ತಿಳಿಸಿದರು.

ಈ ಸಂಜೆಯೊಂದಿಗೆ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಆಟಿಕೆ ಖರೀದಿ ಟೆಂಡರ್ ಅನ್ನು ನಮ್ಮ ರಾಜ್ಯದವರಿಗೆ ನೀಡದೇ ಹೊರ ರಾಜ್ಯದವರಿಗೆ ನೀಡುವ ಮೂಲಕ ಅಕ್ರಮ ನಡೆದಿದೆ ಎಂಬ ಆರೋಪ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಹೊರ ರಾಜ್ಯದವರಿಗೆ ನೀಡುವುದರಿಂದ ನಮ್ಮ ರಾಜ್ಯದ ಅರ್ಹರಿಗೆ ದ್ರೋಹ ಬಗೆದಂತಾಗಿದೆ. ಮಕ್ಕಳ ಆಟಿಕೆ ಟೆಂಡರ್ ಹೊರ ರಾಜ್ಯದವರಿಗೆ ನೀಡುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹಣ ಉಳಿತಾಯವಾಗಿದ್ದರೆ ಒಪ್ಪಬಹುದಿತ್ತು. ಆದರೆ, ಈ ಹಣ ಕೆಲವರ ಜೇಬಿಗೆ ಹೋಗಿರುವ ಆರೋಪವಿದೆ. ಇಂಥ ಅನ್ಯಾಯ, ಅಕ್ರಮವನ್ನು ಖಂಡಿಸುವುದಾಗಿ ತಿಳಿಸಿದ ಅವರು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಹೊರಗಡೆಯಿಂದ ಬಂದವರಿಗೆ ಜವಾಬ್ದಾರಿ ನೀಡುತ್ತಿರುವುದನ್ನು ಗಮನಿಸಬಹುದು ಎಂದು ಹೇಳಿದರು.

ಕೊರೋನಾ ಸಂಕಷ್ಟದಿಂದಾಗಿ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಗುತ್ತಿಗೆದಾರರು, ಕಾರ್ಮಿಕರು, ಮಾಲೀಕರು ಬೀದಿ ಪಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಅಲ್ಪಸ್ವಲ್ಪ ಅಭಿವೃದ್ಧಿಗೆ ಪೂರಕವಾದ ಸಾಮಗ್ರಿ ಖರೀದಿಯ ಟೆಂಡರನ್ನೂ ಹೊರ ರಾಜ್ಯದವರಿಗೆ ನೀಡಿದರೆ, ಇದಕ್ಕಿಂತ ಅನ್ಯಾಯ ಇನ್ನೊಂದಿಲ್ಲ. ನಮ್ಮ ರಾಜ್ಯದವರಿಗೆ ನೀಡಿದ್ದರೆ ಅಲ್ಪ ಸ್ವಲ್ಪ ಲಾಭವಾಗಿದ್ದರೂ ಕನ್ನಡಿಗರಿಗೆ ಅನುಕೂಲವಾಗುತ್ತಿತ್ತು ಎಂದರು.

ರಾಜ್ಯ ಸರ್ಕಾರ ಇನ್ನು ಮುಂದಾದರೂ ನಮ್ಮ ರಾಜ್ಯದವರಿಗೆ ಅನ್ಯಾಯವಾದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಟೆಂಡರ್ ನೀಡಿಕೆ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ರಾಜ್ಯದ ಹಿತ ಕಾಪಾಡಬೇಕು ಎಂದು ಅವರು ಒತ್ತಾಯಿಸಿದರು.

Facebook Comments