ಸಿಜೆಐಗೆ ಝಡ್ ಪ್ಲಸ್ ಸೆಕ್ಯೂರಿಟಿ, ಪಂಚ ನ್ಯಾಯಮೂರ್ತಿಗಳ ನಿವಾಸಕ್ಕೆ ಭಾರಿ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ.9- ದೇಶಾದ್ಯಂತ ಭಾರೀ ಕುತೂಹಲ ಕೆರಳಿಸಿರುವ ಅಯೋಧ್ಯೆಯಲ್ಲಿನ ರಾಮಮಂದಿರ-ಬಾಬರಿ ಮಸೀದಿ ಭೂ ವಿವಾದ ಕುರಿತು ಐತಿಹಾಸಿಕ ತೀರ್ಪು ಘೋಷಣೆಗೆ ಮುನ್ನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪಂಚ ನ್ಯಾಯಾಧೀಶರನ್ನು ಒಳಗೊಂಡ ಸಾಂವಿಧಾನಿಕ ಪೀಠದ ಎಲ್ಲಾ ಸದಸ್ಯರ ನಿವಾಸಗಳಿಗೂ ಅತ್ಯಂತ ಬಿಗಿ ಭದ್ರತೆ ಒದಗಿಸಲಾಗಿದೆ.

ಹಿರಿಯ ನ್ಯಾಯಮೂರ್ತಿಗಳಾದ ಎಸ್.ಎ. ಬೊಬಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್.ಎ.ನಜೀರ್ ಅವರಿಗೂ ವಿಶೇಷ ಭದ್ರತೆ ನೀಡಲಾಗಿದೆ. ಝಡ್ ಪ್ಲಸ್ ಸೆಕ್ಯೂರಿಟಿ ದೇಶದ ಅತ್ಯುನ್ನತ ಭದ್ರತಾ ವ್ಯವಸ್ಥೆಯಾಗಿದೆ. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ(ಸಿಎಪಿಎಫ್‍ಗಳು) ಒಂದಾದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‍ಪಿಎಫ್) ಕಮ್ಯಾಂಡೋಗಳಿಂದ ಈ ಭದ್ರತೆ ಒದಗಿಸಲಾಗುತ್ತದೆ.

ಅಯೋಧ್ಯೆಯ ಚಾರಿತ್ರಿಕ ತೀರ್ಪು ಘೋಷಣೆ ಹಿನ್ನೆಲೆಯಲ್ಲಿ ಸಿಜೆಐ ಗೊಗೋಯಿ ಅವರಿಗೆ ಝಡ್+ ಸೆಕ್ಯೂರಿಟಿ ಮತ್ತು ಸಾಂವಿಧಾನ ಪೀಠದಲ್ಲಿರುವ ಇತರ ನಾಲ್ವರು ನ್ಯಾಯಮೂರ್ತಿಗಳಿಗೆ ವಿಶೇಷ ಭದ್ರತೆ ಒದಗಿಸಲು ನಿನ್ನೆ ನಿರ್ಧಾರ ಕೈಗೊಳ್ಳಲಾಯಿತು.  ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಇದೇ ತಿಂಗಳು 17ರಂದು ನಿವೃತ್ತರಾಗಲಿದ್ದಾರೆ. ಅಷ್ಟರೊಳಗೆ ಅವರು ಇನ್ನೂ ಮೂರು ಪ್ರಮುಖ ವಿವಾದಗಳ ಕುರಿತು ಮಹತ್ವದ ತೀರ್ಪು ನೀಡಲಿದ್ದಾರೆ.

ವಿಶ್ವ ವಿಖ್ಯಾತ ಶಬರಿಮಲೈನ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ, ಬಹು ಕೋಟಿ ರೂ.ಗಳ ರಫೇಲ್ ಯುದ್ಧ ವಿಮಾನಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದಲ್ಲಿ ಕೇಂದ್ರ ಸರ್ಕಾರದ ಪಾತ್ರ ಹಾಗೂ ಮಾಹಿತಿ ಹಕ್ಕು ಕಾಯ್ದೆಯನ್ನು ಮುಖ್ಯ ನ್ಯಾಯಾಧೀಶರ ಅಧಿಕಾರ ವ್ಯಾಪ್ತಿಗೆ ಸೇರಿಸಬೇಕೇ ಎಂಬ ವಿಷಯಗಳ ಕುರಿತು ನ.17ರೊಳಗೆ ತೀರ್ಪು ಹೊರ ಬೀಳುವ ನಿರೀಕ್ಷೆ ಇದೆ.

ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮುಂದಿನ ಸಿಜೆಐ ಆಗಿ ನೇಮಕಗೊಳ್ಳಲಿದ್ದಾರೆ.  ಸುಪ್ರೀಂಕೋರ್ಟ್ ಸುತ್ತಮುತ್ತ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿತ್ತು. ಸುಪ್ರೀಂಕೋರ್ಟ್‍ಗೆ ಸಂಪರ್ಕ ಕಲ್ಪಿಸುವ ಸುತ್ತಮುತ್ತಲ ರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‍ಗಳನ್ನು ಹಾಕಿ ಅನಗತ್ಯ ಸಂಚಾರವನ್ನು ನಿರ್ಬಂಧಿಸಿದ್ದರು. ಸುಪ್ರೀಂಕೋರ್ಟ್ ಆವರಣ ಸಹ ಪೊಲೀಸರ ಭದ್ರಕೋಟೆಯಾಗಿತ್ತು.

Facebook Comments