ಡಿಜೆ ಹಳ್ಳಿ ಗಲಭೆ ಪ್ರಕರಣ : ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ ಪೊಲೀಸ್ ಬಲೆಗೆ
ಬೆಂಗಳೂರು, ಡಿ.3- ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಪ್ರಕರಣದ ಮತ್ತೊಬ್ಬ ಆರೋಪಿ, ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಳೆದ ರಾತ್ರಿ ಜಾಕೀರ್ನನ್ನು ಬಂಧಿಸಿದ ಸಿಸಿಬಿ ಪೊಲೀಸರು ಚಾಮರಾಜಪೇಟೆಯಲ್ಲಿರುವ ಕೇಂದ್ರ ಕಚೇರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮತ್ತು ಅವರ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿ ಬೆಂಕಿ ಹಚ್ಚಿದ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು ಮಾಜಿ ಮೇಯರ್ ಸಂಪತ್ರಾಜ್ ಮತ್ತು ಬಿಬಿಎಂಪಿ ಮಾಜಿ ಸದಸ್ಯ ಜಾಕೀರ್ ಅವರುಗಳಿಗೆ ನೋಟಿಸ್ ನೀಡಿ ವಿಚಾರಣೆಗೊಳಪಡಿಸಿ ಅವರ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದರು.
ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ಎರಡನೆ ಸಲ ಜಾಕೀರ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರೂ ಹಾಜರಾಗದೆ ಗೈರಾಗಿ ತಲೆಮರೆಸಿಕೊಂಡಿದ್ದರು. ತದನಂತರ ಅವರ ಮೊಬೈಲ್ ಸಹ ಸ್ವಿಚ್ಆಫ್ ಆಗಿತ್ತು. ಸಿಸಿಬಿ ಪೊಲೀಸರು ಜಾಕೀರ್ಗಾಗಿ ಮುಂಬೈ, ಕೇರಳ, ತಮಿಳುನಾಡು ಸೇರಿದಂತೆ ಮುಂತಾದ ಕಡೆ ಶೋಧ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ.
ಇತ್ತೀಚೆಗೆ ಜಾಕೀರ್ ಕುಟುಂಬದ ಸದಸ್ಯರನ್ನು ಕರೆಸಿ ವಿಚಾರಿಸಿದರೂ ಜಾಕೀರ್ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಜಾಕೀರ್ ಅವರನ್ನು ಬಂಧಿಸಿದ್ದಾರೆ. ಜಾಕೀರ್ ಸ್ನೇಹಿತ ಸಂಪತ್ರಾಜ್ ಆವರನ್ನು ಈಗಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದು, ಸದ್ಯ ಅವರು ಈಗ ಜೈಲಿನಲ್ಲಿದ್ದಾರೆ.
ಅಖಂಡ ಶ್ರೀನಿವಾಸಮೂರ್ತಿ ಮತ್ತು ಅವರ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲು ಆರೋಪಿಗಳಿಗೆ ಕುಮ್ಮಕ್ಕು ನೀಡಿದ್ದಾರೆಂಬ ಆರೋಪ ಸಂಪತ್ರಾಜ್ ಮತ್ತು ಜಾಕೀರ್ ಮೇಲಿದೆ.