ಮುಸಾ ಹತ್ಯೆ ಹಿನ್ನೆಲೆಯಲ್ಲಿ ಕಾಶ್ಮೀರ ಉದ್ರಿಕ್ತ, 2ನೇ ದಿನ ಕಫ್ರ್ಯೂ ಮುಂದುವರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಮೇ 25- ಕುಖ್ಯಾತ ಭಯೋತ್ಪಾದಕ ಜಾಕೀರ್ ಮುಸಾ ಎನ್‍ಕೌಂಟರ್‍ನಲ್ಲಿ ಹತನಾದ ನಂತರ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉದ್ರಿಕ್ತ ಸ್ಥಿತಿ ತಲೆದೋರಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎರಡನೇ ದಿನವಾದ ಇಂದೂ ಕೂಡ ಕಫ್ರ್ಯೂ ಮುಂದುವರಿಸಲಾಗಿದೆ.

ಶ್ರೀನಗರ, ಕುಲ್ಗಾಂ ಮತ್ತು ಪುಲ್ವಾಮಾ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮುಸಾ ಹತ್ಯೆ ನಂತರ ನಿನ್ನೆಯಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಿಂಸಾಚಾರ ಸಾಧ್ಯತೆ ತಡೆಗಟ್ಟಲು ಕಫ್ರ್ಯೂ ವಿಧಿಸಲಾಗಿತ್ತು. ತ್ವೇಷಮಯ ವಾತಾವರಣ ಮುಂದುವರಿದ ಕಾರಣ ಕಫ್ರ್ಯೂವನ್ನು ಇಂದೂ ಸಹ ವಿಸ್ತರಿಸಲಾಗಿದೆ.

ಶಾಲಾ-ಕಾಲೇಜುಗಳಿಗೆ ಇಂದು ಸಹ ರಜೆ ಘೋಷಿಸಲಾಗಿದೆ. ಇಂಟರ್‍ನೆಟ್ ಸೇವೆಯನ್ನು ಎರಡನೇ ದಿನವೂ ಸ್ಥಗಿತಗೊಳಿಸಲಾಗಿದೆ. ಕುಖ್ಯಾತ ಅಲ್ ಖೈದಾ ಭಯೋತ್ಪಾದನೆ ಸಂಘಟನೆ ಜತೆ ಸೇರಿರುವ ನಿಷೇದಿತ ಅನ್ಸರ್ ಘಾಝ್‍ವತ್-ಉಲ್-ಹಿಂದ್ ಬಣದ ಮುಖ್ಯಸ್ಥನಾಗಿದ್ದ ಮುಸಾ, ದಕ್ಷಿಣ ಕಾಶ್ಮೀರದ ತ್ರಾಲ್‍ನಲ್ಲಿ ಮೊನ್ನೆ ರಾತ್ರಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಹತನಾದ.

ಗುರುವಾರ ರಾತ್ರಿ ಶೋಪಿಯಾನ್, ಪುಲ್ವಾಮಾ, ಅವಂತಿಪೊರ ಮತ್ತು ಶ್ರೀನಗರದಲ್ಲಿ ಪ್ರತ್ಯೇಕತಾವಾದಿಗಳು ಮತ್ತು ಉಗ್ರರ ಪರ ನಿಲುವು ಹೊಂದಿರುವ ಮಂದಿ ಹಠಾತ್ ಪ್ರತಿಭಟನೆಗಳನ್ನು ನಡೆಸಿ ಮುಸಾ ಪರ ಘೋಷಣೆಗಳು ಮತ್ತು ಸೇನೆ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಉದ್ರಿಕ್ತ ಗುಂಪನ್ನು ಪ್ರತಿರೋಧಿಸಲು ಕಣಿವೆ ರಾಜ್ಯದ ಕೆಲವೆಡೆ ಕಫ್ರ್ಯೂ ವಿಧಿಸಲಾಗಿತ್ತು. ಪುಲ್ವಾಮಾ, ಶ್ರೀನಗರ, ಅನಂತನಾಗ್ ಮತ್ತು ಬದ್ಗಂ ಜಿಲ್ಲೆಗಳಲ್ಲಿ ಇಂದು ಕೂಡ ನಿರ್ಬಂಧ ವಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin