ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶ ನೀಡುವಂತೆ ಸಿಎಂಗೆ ಜಮೀರ್ ಪತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ಲಾಕ್‍ಡೌನ್ ನಿಂದಾಗಿ ಮುಚ್ಚಿದ್ದ ದೇವಸ್ಥಾನಗಳನ್ನು ಜೂನ್ 1 ರಿಂದ ರಾಜ್ಯದ್ಯಾಂತ ತೆರೆಯಲು ತೀರ್ಮಾನಿಸಿರುವ ಹಿನ್ನಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ಎಲ್ಲಾ ಸಮುದಾಯದವರು ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿ ಸಿಎಂ ಬಿ.ಎಸ್. ಯಡಿಯೂರಪ್ಪನವರಿಗೆ ಶಾಸಕ ಜಮೀರ್ ಅಹಮದ್ ಖಾನ್ ಪತ್ರ ಬರೆದಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪತ್ರ ಬರೆದಿರುವ ಜಮೀರ್ ಆಹಮ್ಮದ್ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಜೂ. 1 ರಂದು ರಾಜ್ಯದ ಎಲ್ಲಾ ದೇವಸ್ಥಾನಗಳನ್ನು ತೆರೆಯುವ ಸಂಬಂಧ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿರುವುದಾಗಿ ತಿಳಿಸಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದು ಹೇಳಿದ್ದಾರೆ.

ಸರ್ಕಾರ ಮಂದಿರಗಳನ್ನು ತೆರೆಯಲು ಅಕೃತ ಆದೇಶ ಹೊರಡಿಸುವ ಮುನ್ನ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಸಿಖ್ ಇನ್ನಿತರ ಪ್ರಾರ್ಥನಾ ಮಂದಿರಗಳನ್ನು ತೆರೆಯುವ ಸಂಬಂಧ ಮತ್ತೊಮ್ಮೆ ಮರು ಪರಿಶೀಲಿಸಬೇಕಾಗಿದೆ.

ಇಲ್ಲಿ ಸಾಮಾಜಿಕ ಅಂತರಗಳನ್ನು ಕಾಪಾಡಿಕೊಳ್ಳುವ ಹಾಗೂ ಸರ್ಕಾರದ ನಿಯಮಾನುಸಾರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಸರ್ಕಾರ ಆದೇಶ ಮಾಡಬೇಕಿದೆ. ಈ ರೀತಿ ಎಲ್ಲಾ ಸಮುದಾಯದವರಿಗೂ ಪ್ರಾರ್ಥನೆ ಸಲ್ಲಿಸಲು ತಾವು ಅನುವು ಮಾಡಿಕೊಡಬೇಕಾಗಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.

ಕೋವಿಡ್-19 ಹರಡುವಿಕೆ ಹಿನ್ನೆಲೆಯಲ್ಲಿ ತಾವು ನಮ್ಮ ಸಮುದಾಯದವರೂ ಸೇರಿದಂತೆ ಎಲ್ಲ ಸಮುದಾಯದ ನಾಯಕರ ಸಭೆ ನಡೆಸಿ, ಎಲ್ಲ ಮಂದಿರ, ಮಸೀದಿ ಚರ್ಚ್‍ಗಳನ್ನು ಮುಚ್ಚಲು ಸೂಚನೆ ನೀಡಿದ್ದಿರಿ.

ತಮ್ಮ ಸೂಚನೆ ಮೇರೆಗೆ ಮಂದಿರ, ಮಸೀದಿ, ದರ್ಗಾ, ಚರ್ಚ್, ಗುರುದ್ವಾರ ಹಾಗೂ ಇನ್ನಿತರೆ ಪ್ರಾರ್ಥನಾ ಮಂದಿರಗಳನ್ನು ಮುಚ್ಚಲಾಗಿತ್ತು ಎಂದಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಬರುವ ಜೂನ್ 1 ರಿಂದ ಮುಚ್ಚಿದ್ದ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಸೇರಿದಂತೆ ಎಲ್ಲಾ ಮಂದಿರಗಳನ್ನು ತೆರೆಯಲು ಅನುಮತಿ ಕೊಟ್ಟಿದೆ.

Facebook Comments

Sri Raghav

Admin