ಜಮೀರ್ ಹೇಳಿಕೆಗೆ ಸಿಎಂ ಯಡಿಯೂರಪ್ಪ ಗರಂ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.5- ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಮ್ಮ ಪೌರತ್ವದ ಬಗ್ಗೆ ದಾಖಲೆ ನೀಡಬೇಕೆಂಬ ಜಮೀರ್ ಹೇಳಿಕೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೆಂಡಾಮಂಡಲರಾಗಿದ್ದಾರೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಮೀರ್ ಅಹಮ್ಮದ್ ದೇಶದ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರ ದಾಖಲೆಗಳನ್ನು ಕೇಳಿದ್ದಾರೆ. ಆದರೆ, ನಾವು ಅವರ ಅಪ್ಪ-ಅಮ್ಮನ ದಾಖಲೆಗಳನ್ನು ಕೇಳುವುದಿಲ್ಲ ಎಂದು ತಿರುಗೇಟು ನೀಡಿದರು.

ಜಮೀರ್ ಅಹಮ್ಮದ್ ಒಬ್ಬ ಜವಾಬ್ದಾರಿಯುತ ಶಾಸಕ ಎಂಬುದನ್ನು ಮರೆತು ಬಾಯಿಗೆ ಬಂದಂತೆ ಮಾತನಾಡು ವುದನ್ನು ನಿಲ್ಲಿಸಬೇಕು. ಈ ಕಾಯ್ದೆ ಜಾರಿಯಾಗುವುದರಿಂದ ಯಾರಿಗೆ ಅನ್ಯಾಯ ವಾಗುತ್ತದೆ ಎಂದು ಮೊದಲು ತಿಳಿಸಲಿ. ಮನಬಂದಂತೆ ಮಾತನಾಡುವುದು ಬೇಡ ಎಂದು ಹರಿಹಾಯ್ದರು. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗು ವುದರಿಂದ ದೇಶದ ಯಾವುದೇ ನಾಗರಿಕರಿಗೂ ತೊಂದರೆಯಾಗುವುದಿಲ್ಲ ಎಂದು ಖುದ್ದು ಪ್ರಧಾನಿಯವರೇ ಸ್ಪಷ್ಟಪಡಿಸಿದ್ದಾರೆ. ಆದರೆ, ಕಾಂಗ್ರೆಸ್ಸಿಗರು ಸುಳ್ಳು ಆರೋಪ ಗಳನ್ನು ಮಾಡುವ ಮೂಲಕ ತಲೆ ಕೆಟ್ಟವರಂತೆ ಮಾತನಾಡು ತ್ತಿದ್ದಾರೆಂದು ತರಾಟೆಗೆ ತೆಗೆದು ಕೊಂಡರು.

ಆಫ್ಘಾನಿಸ್ಥಾನ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದಿಂದ ವಲಸೆ ಬಂದಿರುವವರಿಗೆ ಮಾತ್ರ ಕಾಯ್ದೆ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದರೂ ಪ್ರತಿಪಕ್ಷಗಳು ಮಾಡಲು ಕೆಲಸವಿಲ್ಲದೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿವೆ ಎಂದು ಬಿಎಸ್‍ವೈ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಜಾರಿ ಮಾಡಿರುವ ಕಾಯ್ದೆಯನ್ನು ಎಲ್ಲ ರಾಜ್ಯಗಳೂ ಅನುಷ್ಠಾನ ಗೊಳಿಸಲೇಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ಸಂಸತ್ತಿನಲ್ಲಿ ಬಹುಮತದಿಂದ ಅಂಗೀಕಾರವಾದ ಮಸೂದೆಯನ್ನು ತಿರಸ್ಕರಿಸಲು ಅವಕಾಶವಿಲ್ಲ ಎಂದು ಹೇಳಿದರು.

ದೇಶದ ನಿಜವಾದ ಪೌರರಿಗೆ ಈ ಕಾಯ್ದೆಯಿಂದ ಎಳ್ಳಷ್ಟೂ ತೊಂದರೆಯಾಗುವುದಿಲ್ಲ. ಆರು ಧರ್ಮ ದವರಿಗೆ ಮಾತ್ರ ತಮ್ಮ ನಾಗರಿಕತ್ವವನ್ನು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಉಳಿದಂತೆ ದೇಶವಾಸಿಗಳಿಗೆ ಇದರಿಂದ ಕಿಂಚಿತ್ತೂ ಧಕ್ಕೆ ಬರುವುದಿಲ್ಲ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸಿಗರು ಮುಸ್ಲಿಂ ಮತಗಳು ಕೈ ತಪ್ಪಿ ಹೋಗಬಹುದೆಂಬ ಆತಂಕದಿಂದ ಅವರನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮುಂದೆ ನಿಮ್ಮ ಡೋಂಗಿ ನಾಟಕಗಳು ನಡೆಯುವುದಿಲ್ಲ. ಮುಸ್ಲಿಮರಲ್ಲೂ ಕೂಡ ಜಾಗೃತಿ ಮೂಡಿದೆ. ಇದುವರೆಗೂ ನೀವು ಅವರಿಗೆ ಹಾಕಿರುವ ಮಕ್ಮಲ್ ಟೋಪಿ ಸಾಕು ಎಂದು ಯಡಿಯೂರಪ್ಪ ವ್ಯಂಗ್ಯವಾಡಿದರು.

Facebook Comments