ಕಾಟಾಚಾರದ ಪ್ಯಾಕೇಜ್ ಬದಲಿಗೆ ಬಡವರ ಖಾತೆಗಳಿಗೆ 10 ಸಾವಿರ ಹಾಕಿ: ಕಾಂಗ್ರೆಸ್ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ಕಾಟಾಚಾರದ ಪ್ಯಾಕೇಜ್ ಬದಲಿಗೆ ಸರ್ಕಾರ ಎಲ್ಲಾ ಬಡವರ ಖಾತೆಗಳಿಗೆ ನೇರವಾಗಿ 10 ಸಾವಿರ ರೂಪಾಯಿಗಳನ್ನು ಹಾಕುವಂತೆ ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವರಾದ ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಶಾಸಕ ರಿಜ್ವಾನ್ ಅರ್ಷದ್ ಅವರು, ಸರ್ಕಾರದ ಲೋಪಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.

ಮಾಜಿ ಸಚಿವರಾದ ಕೃಷ್ಣಭೈರೇಗೌಡ ಮಾತನಾಡಿ, ಲಾಕ್ಡೌನ್ ನಿಂದ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಕೋಟ್ಯಂತರ ಮಂದಿ ಆದಾಯವನ್ನ ಕಳೆದುಕೊಂಡಿದ್ದಾರೆ. ಲಾಕ್ಡೌನ್ ಮಾಡಿ ಐದು ವಾರ ಕಳೆದಿದೆ. ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ಸರ್ಕಾರ ಕಣ್ಣೊರೆಸುವ ಪ್ಯಾಕೇಜ್ ಘೋಷಿಸಿದೆ. ಕಳೆದ ವರ್ಷವೂ ಪ್ಯಾಕೇಜ್ ಘೋಷಿಸಿತ್ತು.

ಆಗ ಘೋಷಿಸಿದ ಪ್ಯಾಕೇಜ್ ಸರಿಯಾಗಿ ತಲುಪಿಲ್ಲ. ತೋಟಗಾರಿಕೆಗೆ 137 ಕೋಟಿ ಘೋಷಿಸಿತ್ತು, ಪಾವತಿಯಾಗಿದ್ದು ಕೇವಲ 50 ಕೋಟಿ ಮಾತ್ರ, ಹೂ ಬೆಳೆಗಾರರಿಗೆ 31 ಕೋಟಿ ಘೋಷಣೆ ಮಾಡಿ ಪಾವತಿಯಾಗಿದ್ದು ಕೇವಲ 15 ಕೋಟಿ ಮಾತ್ರ. 2.3 ಲಕ್ಷ ಸವಿತಾ ಸಮಾಜದವರಿಗೆ 5ಸಾವಿರ ಘೋಷಣೆ ಮಾಡಿದ್ದು, ಕೇವಲ 55466 ಜನರಿಗೆ ಮಾತ್ರ ತಲುಪಿದ್ದು.

7.45 ಲಕ್ಷ ಚಾಲಕರಿಗೆ 5 ಸಾವಿರ ಘೋಷಣೆ ಮಾಡಿ, ಕೊಟ್ಟಿದ್ದು 2 ಲಕ್ಷ 14 ಸಾವಿರ ಜನರಿಗೆ ಮಾತ್ರ. 6.48 ಲಕ್ಷ ಕಟ್ಟಡಕಾರ್ಮಿಕರಿಗೆ 5 ಸಾವಿರ ಘೋಷಣೆ ಮಾಡಿ ಕೊಟ್ಟಿದ್ದು 5 ಲಕ್ಷ ಜನರಿಗೆ ಮಾತ್ರ, 1.25 ಲಕ್ಷ ನೇಕಾರರಿಗೆ ತಲಾ2 ಸಾವಿರ ಘೋಷಣೆ ಮಾಡಿ 49,756 ಜನರಿಗೆ ಮಾತ್ರ ತಲುಪಿದೆ. ಹೇಳಿದ್ದು ಒಂದು ಮಾಡಿದ್ದು ಇನ್ನೊಂದು ಎಂದರು ಆಕ್ರೋಶ ವ್ಯಕ್ತ ಪಡಿಸಿದರು.

ಈ ವರ್ಷವೂ 1250 ಕೋಟಿ ಪ್ಯಾಕೇಜ್ ಘೋಷಿಸಲಾಗಿದೆ. ರಾಜ್ಯದಲ್ಲಿ ಅರ್ಧದಷ್ಟು ರೈತರಿದ್ದಾರೆ, 3.5 ಲಕ್ಷ ರೈತರು ರಾಜ್ಯದಲ್ಲಿದ್ದಾರೆ ಆದರೆ 89 ಸಾವಿರ ರೈತರಿಗೆ ಮಾತ್ರ ನೆರವು ಘೋಷಿಸಿದ್ದಾರೆ. ಉಳಿದ ರೈತರಿಗೆ ನಷ್ಟವಾಗಿಲ್ಲವೇ? 15 ರಿಂದ 20 ಲಕ್ಷ ಆಟೋ,ಕ್ಯಾಬ್ ಚಾಲಕರಿದ್ದಾರೆ ಇಷ್ಟೂ ಜನ ತಮ್ಮ ಆದಾಯ ಕಳೆದುಕೊಂಡಿದ್ದಾರೆ ಆದರೆ 2.1 ಲಕ್ಷ ರೈತರಿಗೆ ಮಾತ್ರ ಸರ್ಕಾರ ನೆರವು ಘೋಷಿಸಿದೆ.

50 ಲಕ್ಷ ಅಸಂಘಟಿತ ಕಾರ್ಮಿಕರಿದ್ದಾರೆ, ಕುಂಬಾರ, ಅಕ್ಕಸಾಲಿ, ಗಾಣಿಗ ಸೇರಿ ಕುಲಕುಸುಬಿನವರಿದ್ದಾರೆ, ಇವರಲ್ಲಿ 3 ಲಕ್ಷ ಜನರಿಗೆ ಮಾತ್ರ ಪರಿಹಾರ ನೀಡುವುದಾಗಿ ಸರ್ಕಾರ ಹೇಳಿದೆ. 10 ಲಕ್ಷ ಕುಟುಂಬ ಬೀದಿಬದಿ ವ್ಯಾಪಾರ ನಂಬಿದ್ದಾರೆ ಸರ್ಕಾರ 2.2 ಲಕ್ಷ ಮಂದಿಗೆ ಮಾತ್ರ ತಲಾ 2 ಸಾವಿರ ಪರಿಹಾರ ಘೋಷಿಸಿದೆ. ಉಳಿದ ಬೀದಿಬದಿ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ತಮಿಳುನಾಡು 2.07 ಕೋಟಿ ಬಡವರಿಗೆ 8368 ಕೋಟಿ, 2.7 ಕೋಟಿ ಪಡಿತರ ದಾರರಿಗೆ 4 ಸಾವಿರ ಕೊಟ್ಟಿದೆ. ಕೇರಳ 20 ಸಾವಿರ ಪ್ಯಾಕೇಜ್ ಘೋಷಿಸಿದೆ. ಕರ್ನಾಟಕ ಕೇರಳಕ್ಕಿಂತ ಎರಡಪಟ್ಟು ಆರ್ಥಿಕ ಸಾಮರ್ಥ್ಯ ಹೊಂದಿದೆ. ಈಗಾಗಲೇ ಎರಡು ಪ್ಯಾಕೇಜ್ ಕೇರಳ ಕೊಟ್ಟಿದೆ. ಆಂಧ್ರ ಸರ್ಕಾರ ಚಾಲಕರಿಗೆ 10 ಸಾವಿರ ಕೊಟ್ಟಿದೆ, ವಿವಿಧ ಕಾರ್ಮಿಕರಿಗೆ 5000 ಘೋಷಿಸಿದೆ. ಸ್ವಯಂ ಉದ್ಯೋಗಿ ಮಹಿಳೆಯರಿಗೆ 15 ಸಾವಿರ ನೀಡಿದೆ. ಆಮ್ಲಜನಕದಿಂದ ಸಾವನ್ನಪ್ಪಿದವರಿಗೆ 10 ಲಕ್ಷ ನೀಡಿದೆ, ಆದರೆ ನಮ್ಮ ಸರ್ಕಾರ ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ ಸತ್ತವರಿಗೆ 2 ಲಕ್ಷ ಹಣ ನೀಡಿದೆ. ಸರ್ಕಾರಕ್ಕೆ ಮರ್ಯಾದೆ ಇದ್ಯಾ ಎಂದು ಕಿಡಿಕಾರಿದರು.

ಆಟೋ ಚಾಲಕರಿಗೆ 2 ಸಾವಿರ ಘೋಷಣೆ ಮಾಡಲಾಗಿದೆ, ಅದನ್ನ ಪಡೆಯೋಕೆ ಚಾಲಕ 500 ಖರ್ಚು ಮಾಡಬೇಕು. ಕಟ್ಟಡ ಕಾರ್ಮಿಕರು ಎಲ್ಲಿಂದ ಸರ್ಟಿಫಿಕೆಟ್ ತರ್ತಾರೆ. ಬೀದಿಬದಿ ವ್ಯಾಪಾರಿಗಳು ಎಲ್ಲಿಂದ ದಾಖಲೆ ತರುತ್ತಾರೆ. ಅಷ್ಟು ಕನಿಷ್ಠ ಜ್ಙಾನವೂ ಸರ್ಕಾರಕ್ಕಿಲ್ವೇ? ಈ ಪರಿಹಾರ ಪಡೆಯೋಕೆ ದಿನವೆಲ್ಲ ಓಡಾಡಬೇಕೆ ಎಂದು ಆರೋಪಿಸಿದ ಅವರು, ಎಲ್ಲ ಬಡವರ ಖಾತೆ ನೇರವಾಗಿ ಕನಿಷ್ಠ 10 ಸಾವಿರ ರೂಪಾಯಿಗಳನ್ನು ಹಾಕಿ ಎಂದು ಒತ್ತಾಯಿಸಿದರು.

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ಕೇಂದ್ರ ಸರ್ಕಾರ ಕಳೆದ ವರ್ಷ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿತ್ತು. ಅದು ಎಲ್ಲಿ ಹೋಯ್ತುಗೊತ್ತಿಲ್ಲ. ಯಾವ ದಾಖಲೆಗಳೂ ಇದರ ಬಗ್ಗೆ ಸಿಕ್ಕಿಲ್ಲ. ಪೀಣ್ಯದಲ್ಲೇ 30 ಸಾವಿರ ಕೈಗಾರಿಕೆ ಮುಚ್ಚಿ ಹೋಗಿವೆ. ಯಾರಿಗೂ ಪರಿಹಾರ ಸಿಗಲಿಲ್ಲ ಎಂದು ಆರೋಪಿಸಿದರು.

ಕೇರಳ ಅನಾಥಮಕ್ಕಳಿಗೆ 3 ಲಕ್ಷ ಘೋಷಿಸಿದೆ, ಅವರ ಸಂಪೂರ್ಣ ವಿದ್ಯಾಬ್ಯಾಸದ ಖರ್ಚು ನೀಡುವುದಾಗಿ ಹೇಳಿದೆ. ನಮ್ಮ ಸರ್ಕಾರ ಸತ್ತವರ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು. ನರೆಗಾ ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು, ಕೇಂದ್ರದ ಮೇಲೆ ಒತ್ತಡ ಹೆಚ್ಚಿಸಬೇಕು.

ರಾಜ್ಯದ  25 ಸಂಸದರು ಈ ಬಗ್ಗೆ ಮಾತನಾಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಏನನ್ನೂ ಕೊಡ್ತಿಲ್ಲ. ನಮ್ಮ ಮೇಲೆ ಸಿಟ್ಟೋ, ಯಡಿಯೂರಪ್ಪ ಮೇಲಿನ ಸಿಟ್ಟೋ ಗೊತ್ತಿಲ್ಲ. ಉದ್ಯೋಗ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ, ಬಡವರ ಅಕೌಂಟಿಗೆ 10 ಸಾವಿರ ಪರಿಹಾರ ಹಾಕಬೇಕು ಎಂದು ಒತ್ತಾಯಿಸಿದರು.

Facebook Comments