ತುಮಕೂರಲ್ಲಿ ಮತ್ತೆ ಶುರುವಾಯ್ತು ಬೈಕ್ ವ್ಹೀಲಿಂಗ್ ಹಾವಳಿ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 3- ನಗರದಲ್ಲಿ ಕೆಲ ದಿನಗಳಿಂದ ಸ್ತಬ್ಧವಾಗಿದ್ದ ಬೈಕ್ ವ್ಹೀಲಿಂಗ್ ಮತ್ತೆ ಪ್ರಾರಂಭವಾಗಿದ್ದು, ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ. ಕೆಲವು ತಿಂಗಳುಗಳ ಹಿಂದೆ ಪೊಲೀಸರಿಗೆ ಸವಾಲು ಹಾಕಿ ರಾಷ್ಟ್ರೀಯ ಹೆದ್ದಾರಿ-48 ಸೇರಿದಂತೆ ಎಸ್‍ಎಸ್ ಪುರಂ, ಕುಣಿಗಲ್ ರಸ್ತೆ, ಗುಬ್ಬಿ ಗೇಟ್, ಕೋತಿ ತೋಪು, ಶಿರಾ ಗೇಟ್, ಬಟವಾಡಿ ಸೇರಿದಂತೆ ಮತ್ತಿತರ ಕಡೆ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವಕರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದರು.

ಇದು ಮಾಸುತ್ತಿದ್ದಂತೆ ಮತ್ತೆ ಯುವಕರು ರಾಜಾರೋಷವಾಗಿ ಬೈಕ್ ವ್ಹೀಲಿಂಗ್ ಮಾಡಿಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ. ಇದರ ಜತೆಗೆ ಕರ್ಕಶವಾದ ಸೈಲೆನ್ಸರ್‍ಗಳು, ಹಾರನ್‍ಗಳನ್ನು ದ್ವಿಚಕ್ರ ವಾಹನಗಳಿಗೆ ಅಳವಡಿಸಿಕೊಂಡು ಶಬ್ದ ಮಾಲಿನ್ಯ ಕೂಡ ಮಾಡುತ್ತಿದ್ದಾರೆ.

ಮುಂದೆ ಬೈಕ್ ವ್ಹೀಲಿಂಗ್ ಮಾಡುತ್ತ ಹೋಗುತ್ತಿರುವವರನ್ನು ಹಿಂದೆ ಮತ್ತೊಂದು ಬೈಕ್‍ನಲ್ಲಿ ಯುವಕರು ತಮ್ಮ ಮೊಬೈಲ್‍ಗಳಲ್ಲಿ ದೃಶ್ಯಗಳನ್ನು ವಿಡಿಯೋ ಕೂಡ ಮಾಡುತ್ತಿದ್ದಾರೆ.

ಸಂಜೆಯಾಗುತ್ತಿದ್ದಂತೆ ಪೊಲೀಸರ ಕಣ್ತಪ್ಪಿಸಿ ಜನನಿಬಿಡ ಪ್ರದೇಶಗಳಿಗೆ ಬೈಕ್ ವ್ಹೀಲಿಂಗ್ ಮಾಡುತ್ತಿದ್ದಾರೆ. ಸಂಚಾರಿ ನಿಯಮಗಳಂತೂ ಇವರಿಗೆ ಲೆಕ್ಕಕ್ಕೇ ಇಲ್ಲದಂತಾಗಿದೆ. ಸಿಗ್ನಲ್ ಜಂಪ್ ಮಾಡುವುದು, ಒನ್‍ವೇನಲ್ಲಿ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ.

ಪೊಲೀಸರು ವಾಹನ ಸಂಖ್ಯೆಯನ್ನು ನೋಂದಣಿ ಮಾಡಿಕೊಳ್ಳಲು ವಾಹನಗಳಿಗೆ ನಂಬರ್ ಪ್ಲೇಟ್‍ಗಳೇ ಇಲ್ಲ. ಹಾಗಾಗಿ ಅಂತಹ ವಾಹನಗಳನ್ನು ಪತ್ತೆಹಚ್ಚುವುದು ಕಷ್ಟವಾಗಿದೆ. ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ಕೊಡಬೇಡಿ ಎಂದು ಕೆಲ ಪ್ರಜ್ಞಾವಂತರು ಪ್ರಶ್ನಿಸಿದ್ದಕ್ಕೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಯುವಕರ ಇಂತಹ ಖಯಾಲಿಗೆ ಅಮೂಲ್ಯವಾದ ಪ್ರಾಣ ಕಳೆದುಕೊಳ್ಳುವಂತಾಗುತ್ತದೆ. ಇದರಿಂದ ಫೋಷಕರು ಪರಿತಪಿಸುವಂತಾಗಬಾರದು ಎಂಬುದೇ ನಗರದ ಜನರ ಆಶಯ.

Facebook Comments