ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ತಲೆ ಕೆಡಿಸಿಕೊಳ್ಳದ ಬಿಜೆಪಿ ವರಿಷ್ಠರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 27- ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ತುದಿಗಾಲಲ್ಲಿ ನಿಂತಿದ್ದರೂ ಕೇಂದ್ರ ನಾಯಕರು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

ಇದೇ 30ರಂದು ಕೇಂದ್ರದಲ್ಲಿ ಪ್ರಧಾನಿ ಮತ್ತೆ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಬಳಿಕ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನಂತರ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಬೇಕು. ಈ ಪ್ರಕ್ರಿಯೆ ಕನಿಷ್ಠ 2ರಿಂದ 3 ವಾರಗಳು ಬೇಕಾಗುತ್ತದೆ.

ಹೀಗಾಗಿ ರಾಜ್ಯದ ಯಾವುದೇ ಬೆಳವಣಿಗೆಗಳ ಬಗ್ಗೆಯೂ ಕೇಂದ್ರ ನಾಯಕರು ಸದ್ಯಕ್ಕೆ ತಲೆ ಹಾಕಿಲ್ಲ. ಸೂಕ್ತ ಕಾಲದಲ್ಲಿ ನಾವು ನಿರ್ಧಾರ ಕೈಗೊಳ್ಳುತ್ತೇವೆ ಎಂದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ.

ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಪತನಗೊಳಿಸಿದರೆ ರಾಷ್ಟ್ರಮಟ್ಟದಲ್ಲಿ ಹೆಚ್ಚು ಸುದ್ದಿಯಾಗಿ ಸರ್ಕಾರಕ್ಕೆ ಕಪ್ಪುಚುಕ್ಕಿಯಾಗಬಹುದೆಂಬ ಭೀತಿ ಕೇಂದ್ರ ನಾಯಕರಿಗೆ ಕಾಡುತ್ತಿದೆ.

ಹೀಗಾಗಿ ಸಾಕಷ್ಟು ಅಳೆದು- ತೂಗಿ ಪಕ್ಷಕ್ಕೆ ಯಾವುದೇ ರೀತಿಯ ಕಳಂಕ ಬಾರದಂತೆ ತುಂಬ ಎಚ್ಚರಿಕೆಯಿಂದ ಜಾಣ್ಮೆಯ ಹೆಜ್ಜೆ ಇಡಲು ತೀರ್ಮಾನಿಸಿದ್ದಾರೆ. ಆದರೆ ರಾಜ್ಯ ನಾಯಕರು ಮಾತ್ರ ತಕ್ಷಣವೇ ಸರ್ಕಾರ ರಚನೆಯಾಗಬೇಕೆಂದು ತುದಿಗಾಲಲ್ಲಿ ನಿಂತಿದ್ದಾರೆ.

ಕೇಂದ್ರದಲ್ಲಿ ಸರ್ಕಾರ ರಚನೆಯಾಗಿ, ಕೆಲವು ಪ್ರಕ್ರಿಯೆಗಳು ಮುಗಿದ ಬಳಿಕವಷ್ಟೇ ಕರ್ನಾಟಕ ಹಾಗೂ ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕುರಿತಂತೆ ನಾವು ತೀರ್ಮಾನ ಕೈಗೊಳ್ಳುತ್ತೇವೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಯತ್ನಕ್ಕೆ ಕೈ ಹಾಕಬೇಡಿ ಎಂದು ವರಿಷ್ಠರು ಸ್ಪಷ್ಟ ಮಾತುಗಳಲ್ಲೇ ಸೂಚನೆ ಕೊಟ್ಟಿದ್ದಾರೆ.

# ಸ್ಥಿರ ಸರ್ಕಾರ ಸಾಧ್ಯವಿಲ್ಲ:
ಆಪರೇಷನ್‍ಕಮಲದ ಮೂಲಕ ಸರ್ಕಾರ ರಚನೆ ಮಾಡಲು ನಮ್ಮದೇನು ಅಭ್ಯಂತರವಿಲ್ಲ. ಸಚಿವ ಸ್ಥಾನ ಇಲ್ಲವೇ ಬೇರೊಂದು ಸ್ಥಾನಮಾನದ ಆಸೆಗಾಗಿ ಪಕ್ಷಕ್ಕೆ ಬರುವ ಶಾಸಕರನ್ನು ನೆಚ್ಚಿಕೊಂಡು ಸ್ಥಿರ ಸರ್ಕಾರ ನೀಡಲು ಸಾಧ್ಯವೇ ಎಂಬ ಮೂಲ ಪ್ರಶ್ನೆಯನ್ನು ವರಿಷ್ಠರು ರಾಜ್ಯ ನಾಯಕರ ಮುಂದಿಟ್ಟಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಕೇವಲ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕೆಂಬ ಉದ್ದೇಶದಿಂದ ಸರ್ಕಾರ ರಚನೆ ಮಾಡಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರಕ್ಕೆ ಬಹುಮತ ಇದ್ದರೂ ಸ್ಥಿರವಾದ ಸರ್ಕಾರ ನೀಡಲು ಸಾಧ್ಯವಾಗದಿರಲು ಕಾರಣ ಶಾಸಕರು ಮತ್ತು ಪಕ್ಷಗಳ ನಡುವೆ ಸಮನ್ವಯತೆ ಕಾರಣ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.

ಬಿಜೆಪಿಗೆ ಬರುವ ಶಾಸಕರು ಪಕ್ಷದ ತತ್ವ ಸಿದ್ದಾಂತ ನೋಡಿಕೊಂಡು ಬರುವುದಿಲ್ಲ. ಬಂದವರೆಲ್ಲರಿಗೂ ಸಂಪುಟದಲ್ಲಿ ಸ್ಥಾನಮಾನ ನೀಡಿದರೆ ನಿಷ್ಠಾವಂತ ಶಾಸಕರು ತಿರುಗಿ ಬಿದ್ದರೆ ಸರ್ಕಾರ ಉಳಿಯಲು ಸಾಧ್ಯವಿಲ್ಲ. 2008ರಲ್ಲಿ ಇದೇ ರೀತಿ ಶಾಸಕರನ್ನು ಕರೆತಂದು ಮಂತ್ರಿ ಸ್ಥಾನ ಹಾಗೂ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡಿದ್ದರಿಂದ ಜನಪರವಾದ ಆಡಳಿತ ನಡೆಸಲು ಸಾಧ್ಯವಾಗಲಿಲ್ಲ.

ಬಿಜೆಪಿ ತಕ್ಷಣವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕೆಂಬ ಹಪಾಹಪಿಯೂ ಇಲ್ಲ. ನಮಗೆ ದೂರದೃಷ್ಟಿ ಮತ್ತು ಜನಪರವಾದ ಆಡಳಿತ ನೀಡುವುದು ಮುಖ್ಯ. ಹೀಗಾಗಿ ಸರ್ಕಾರವನ್ನು ಅಸ್ಥಿರಗೊಳಿಸಲೇಬೇಕೆಂಬ ದುರುದ್ದೇಶ ಇಲ್ಲ. ಎಲ್ಲವೂ ಪರಿಸ್ಥಿತಿಯ ಮೇಲೆ ಅವಲಂಬಿತವಾಗಿದೆ ಎಂದು ಪಕ್ಷದ ಪ್ರಮುಖರು ತಿಳಿಸಿದ್ದಾರೆ.

ಒಂದು ವೇಳೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಮಧ್ಯಂತರ ಚುನಾವಣೆ ಎದುರಾದರೂ ಪಕ್ಷ ಅದನ್ನು ಎದುರಿಸಲು ಸಿದ್ಧವಿದೆ. ಲೋಕಸಭೆ ಚುನಾವಣೆ ಫಲಿತಾಂಶವನ್ನು ಗಮನಿಸಿದರೆ ನಮ್ಮ ನಿರೀಕ್ಷೆಗೂ ಮೀರಿದ ಫಲಿತಾಂಶ ಬಂದಿದೆ.

ಪಕ್ಷದ ಸಂಘಟನೆ, ಕಾರ್ಯಕರ್ತರ ಹುಮ್ಮಸ್ಸು, ಗೆಲ್ಲುವ ಅವಕಾಶಗಳು ನಮಗಿರುವುದರಿಂದ ಆತುರಕ್ಕೆ ಬಿದ್ದು ಸರ್ಕಾರ ರಚನೆ ಮಾಡುವ ಮನಸ್ಥಿತಿಯಿಂದ ಹೊರಬರಬೇಕು. ಶಾಸಕರ ನಡವಳಿಕೆ ನೋಡಿಕೊಂಡು ನಾವು ಮುಂದುವರೆಯುತ್ತೇವೆ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಸಲಹೆ ಮಾಡಿದ್ದಾರೆ.

Facebook Comments

Sri Raghav

Admin