Friday, April 26, 2024
Homeರಾಜ್ಯನಿಗಮ ಮಂಡಳಿಗಳಿಗೆ 30 ಶಾಸಕರ ಪಟ್ಟಿ ಹೈಕಮಾಂಡ್‍ಗೆ ಸಲ್ಲಿಕೆ

ನಿಗಮ ಮಂಡಳಿಗಳಿಗೆ 30 ಶಾಸಕರ ಪಟ್ಟಿ ಹೈಕಮಾಂಡ್‍ಗೆ ಸಲ್ಲಿಕೆ

ಬೆಂಗಳೂರು,ಅ.10- ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆಯುತ್ತಾ ಬಂದಿದ್ದು, ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡದಿರುವ ಕುರಿತು ಅಸಮಾಧಾನ ಹೊಗೆಯಾಡುತ್ತಿರುವ ನಡುವೆಯೇ, 30 ಮಂದಿ ಶಾಸಕರನ್ನು ಪ್ರಮುಖ ನಿಗಮಗಳಿಗೆ ಅಧ್ಯಕ್ಷರನ್ನಾಗಿ ಮಾಡುವ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‍ಗೆ ಸಲ್ಲಿಸಿದ್ದಾರೆ.

ನಿನ್ನೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್‍ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದು, ಶೇ. 50-50 ರ ಅನುಪಾತದಲ್ಲಿ ನಿಗಮ ಮಂಡಳಿಗಳಿಗೆ ನೇಮಕಾತಿ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ 70 ಕ್ಕೂ ಹೆಚ್ಚು ನಿಗಮಗಳಿಗೆ ಏಕಕಾಲಕ್ಕೆ ತಲಾ 30 ತಿಂಗಳ ಅವಧಿಯಂತೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ನೇಮಿಸಲು ಚಿಂತನೆ ನಡೆದಿದೆ. ಇದನ್ನು ಮೂರು ಭಾಗಗಳಾಗಿ ವಿಂಗಡಿಸಿ 24 ತಿಂಗಳುಗಳಿಗೆ ಸೀಮಿತಗೊಳಿಸಿದರೆ ಇನ್ನಷ್ಟು ಮಂದಿಗೆ ಅಧಿಕಾರ ಹಂಚಿಕೆ ಮಾಡಬಹುದು. ಆಗ ಎಲ್ಲರಿಗೂ ಆದ್ಯತೆ ನೀಡಲು ಸಾಧ್ಯವಾಗಲಿದೆ ಎಂಬ ವಾದಗಳು ಕೇಳಿಬಂದಿದೆ.

ಸೈಬರ್ ಕ್ರೈಂ ಪ್ರಕರಣಗಳ ಕಾಲಮಿತಿ ತನಿಖೆಗೆ ಕಟ್ಟುನಿಟ್ಟಿನ ಕ್ರಮ : ದಯಾನಂದ

ಸಚಿವ ಸಂಪುಟದಲ್ಲಿ ಅವಕಾಶ ಸಿಗದೆ ಅಸಮಾಧಾನಗೊಂಡಿರುವ ಕಾಂಗ್ರೆಸ್‍ನ ಶಾಸಕರನ್ನು ಓಲೈಸಲು ನಿಗಮಮಂಡಳಿಗಳಲ್ಲಿ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ. ಆದರೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿಗಮಮಂಡಳಿಗಳಲ್ಲಿ ಕಾರ್ಯಕರ್ತರಿಗೆ, ಮುಖಂಡರಿಗೆ ಹೆಚ್ಚಿನ ಅವಕಾಶ ನೀಡಬೇಕು. ಅಕಾರ ಅವಕಾಶ ವಂಚಿತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.

ಶಾಸಕರಿಗೆ ಆದ್ಯತೆ ನೀಡುತ್ತಾ ಹೋದರೆ ಕಾಂಗ್ರೆಸ್‍ನ ಮುಖಂಡರು, ಕಾರ್ಯಕರ್ತರು ಅಸಮಾಧಾನಗೊಳ್ಳುತ್ತಾರೆ. ಲೋಕಸಭೆ, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇದು ಅಡ್ಡಪರಿಣಾಮ ಬೀರಲಿದೆ. ಹೀಗಾಗಿ ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ಒತ್ತು ನೀಡಬೇಕು ಎಂಬುದು ಡಿ.ಕೆ.ಶಿವಕುಮಾರ್ ಅವರ ಆಗ್ರಹವಾಗಿದೆ.

ಆದರೆ ಇದರ ಹೊರತಾಗಿಯೂ ಮುಖ್ಯಮಂತ್ರಿಯವರು 30 ಮಂದಿ ಶಾಸಕರ ಪಟ್ಟಿಯನ್ನು ಹೈಕಮಾಂಡ್ ಮುಂದೆ ಮಂಡಿಸಿದ್ದು, ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಜೊತೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಹೈಕಮಾಂಡ್ ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಶತಕ ಸಿಡಿಸಿ ವಿಶಿಷ್ಟ ದಾಖಲೆ ಬರೆದ ಡೇವಿಡ್ ಮಲಾನ್

ಈ ಹಿಂದೆ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಸದಸ್ಯರ ಆಯ್ಕೆ ವೇಳೆಯಲ್ಲೂ ರಾಜ್ಯ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂಬ ಆಕ್ಷೇಪಗಳಿದ್ದವು. ಕೆಲವು ಸಚಿವರ ವಿರೋಧವನ್ನೂ ಲೆಕ್ಕಿಸದೆ ಮೂರು ಸದಸ್ಯರನ್ನು ವಿಧಾನಪರಿಷತ್‍ಗೆ ಚುನಾಯಿಸಲಾಗಿತ್ತು. ಈಗ ನಿಗಮಮಂಡಳಿ ನೇಮಕಾತಿ ವಿಷಯದಲ್ಲೂ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರ ಅಭಿಪ್ರಾಯಗಳಿಗೆ ಮನ್ನಣೆ ನೀಡಲಿದೆಯೇ, ಇಲ್ಲವೇ ಎಂಬುದು ಕುತೂಹಲ ಕೆರಳಿಸಿದೆ.

RELATED ARTICLES

Latest News