Friday, April 26, 2024
Homeರಾಜ್ಯನೇಹಾ ಹತ್ಯೆ ಪ್ರಕರಣವನ್ನು ಎಸ್‍ಐಟಿ ತನಿಖೆ ನಡೆಸುವಂತೆ ಬೊಮ್ಮಾಯಿ ಆಗ್ರಹ

ನೇಹಾ ಹತ್ಯೆ ಪ್ರಕರಣವನ್ನು ಎಸ್‍ಐಟಿ ತನಿಖೆ ನಡೆಸುವಂತೆ ಬೊಮ್ಮಾಯಿ ಆಗ್ರಹ

ಹುಬ್ಬಳ್ಳಿ,ಏ.19- ಹಾಡಹಗಲೇ ಕಾಲೇಜು ಕ್ಯಾಂಪಸ್‍ನಲ್ಲಿ ಯುವತಿಯ ಹತ್ಯೆ ಮಾಡಿರುವುದು ಅತ್ಯಂತ ಆಘಾತಕಾರಿ, ಸಮಾಜಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿರುವುದರಿಂದ ರಾಜಾರೋಷವಾಗಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರ ಪ್ರಕರಣವನ್ನು ಎಸ್‍ಐಟಿಗೆ ವಹಿಸಿ ತನಿಖೆ ನಡೆಸಬೇಕೆಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ನೇಹಾ ಪಾರ್ಥಿವ ಶರೀರ ಇರುವ ಕಿಮ್ಸ್‍ಗೆ ಭೇಟಿ ನೀಡಿ, ಅವರ ಕುಟುಂಬದವರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಆಘಾತಕರ ವಿಚಾರ. ಈ ರೀತಿ ಹುಬ್ಬಳ್ಳಿಯಲ್ಲಿ ಯಾವತ್ತೂ ನಡೆದಿಲ್ಲ. ಇದೊಂದು ಸಮಾಜದ ನಡುವೆ ಇರುವ ಕ್ಷೋಭೆ. ಸಮಾಜಗಳ ನಡುವೆ ಸಾಮರಸ್ಯ ಕಡಿಮೆಯಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಗದಗನಲ್ಲಿ ನಮ್ಮ ನಗರ ಸಭೆಯ ಉಪಾಧ್ಯಕ್ಷರ ಕುಟುಂಬದ ಕಗ್ಗೊಲೆಯಾಗಿದೆ ಎಂದು ದೂರಿದರು.

ಬೆಂಗಳೂರಿನಲ್ಲಿ ಜೈ ಶ್ರೀರಾಮ್ ಹೇಳಿದವರ ಮೆಲೆ ಹಲ್ಲೆಯಾಗಿದೆ. ಸಮಾಜ ಘಾತುಕ ಶಕ್ತಿಗಳಿಗೆ ಪೊಲೀಸ್ ಠಾಣೆಗಳಲ್ಲಿ ರಾಜ ಮರ್ಯಾದೆ ಸಿಗುತ್ತಿದೆ. ಈ ಸರ್ಕಾರದಲ್ಲಿ ಗುಂಡಾಗಳನ್ನು ರಕ್ಷಿಸುವವರು ಇದ್ದಾರೆ ಎನ್ನುವ ನಂಬಿಕೆ ಇರುವುದರಿಂದ ಈ ರೀತಿ ಘಟನೆ ನಡೆಯುತ್ತಿವೆ. ಸರ್ಕಾರ ಇದನ್ನು ಗಂಭಿರವಾಗಿ ಪರಿಣಗಿಸಬೇಕು. ಮುಖ್ಯಮಂತ್ರಿಗಳು ಒಂದು ಟ್ವೀಟ್ ಮಾಡಿ ಕೈ ತೊಳೆದುಕೊಳ್ಳಬಾರದು ಎಂದು ಹೇಳಿದರು.

ಇದು ಕೇವಲ ವೈಯಕ್ತಿಕ ಘಟನೆ. ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಕರ್ನಾಟಕ ಇನ್ನೊಂದು ಬಿಹಾರ ಆಗುತ್ತಿದೆ. ಗೃಹ ಸಚಿವರು, ಡಿಜಿಪಿ ಏನು ಮಾಡುತ್ತಿದ್ದಾರೆ. ಈ ಸರ್ಕಾರದ ಅವಯಲ್ಲಿ ವಿಧಾನಸೌಧದಲ್ಲಿಯೇ ಪಾಕಿಸ್ತಾನ ಜಿಂದಾಬಾದ್ ಹೇಳುತ್ತಾರೆ. ಗದಗದಲ್ಲಿ ಕುಟುಂಬದ ಕಗ್ಗೊಲೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ವಾಗ್ದಾಳಿ ನಡೆಸಿದರು.

ಹುಬ್ಬಳ್ಳಿ ಕಮೀಷನರ್ ಹೇಳಿಕೆಗಳನ್ನು ನೋಡಿದಾಗ ಅವರು ಯಾವುದೇ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ನೇಹಾ ಹತ್ಯೆ ಪ್ರಕರಣವನ್ನು ಎಸ್‍ಐಟಿ ಮೂಲಕ ತನಿಖೆ ನಡೆಸಬೇಕು. ಅಪರಾಧ ವಿಭಾಗದ ಡಿಜಿಪಿ ಅವರು ಇದರ ಮುಂದಾಳತ್ವ ವಹಿಸಿ ತನಿಖೆ ನಡೆಸಬೇಕು. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಈ ಪ್ರಕರಣದ ತಾರ್ಕಿಕ ಅಂತ್ಯ ಆಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.

ಕುಟುಂಬಕ್ಕೆ ಸಾಂತ್ವನ:
ಹತ್ಯೆಗೀಡಾದ ನೇಹಾ ಅವರ ತಂದೆಗೆ ದೂರವಾಣಿ ಮೂಲಕ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರು, ಈ ರೀತಿಯ ಘಟನೆ ದುರದೃಷ್ಟಕರ ನಾವು ನಿಮ್ಮೊಂದಿಗಿದ್ದೇವೆ. ಧೈರ್ಯವಾಗಿರಿ ಎಂದು ಸಾಂತ್ವನ ಹೇಳಿದರು.

RELATED ARTICLES

Latest News