ಎಲೆಕ್ಷನ್ ಪ್ರಚಾರದಲ್ಲಿ ಸಚಿವರು ಬ್ಯುಸಿ, ಆಡಳಿತ ಯಂತ್ರ ಸ್ತಬ್ಧ : ಸರ್ಕಾರದ ವಿರುದ್ಧ ಕಾಂಗ್ರೆಸ್ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.28- ಮುಖ್ಯಮಂತ್ರಿ ಒಳಗೊಂಡಂತೆ ಎಲ್ಲಾ ಸಚಿವರು ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದರಿಂದ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಕೂಡಲೇ ರಾಜ್ಯ ಸರ್ಕಾರಕ್ಕೆ ಆಡಳಿತದತ್ತ ಗಮನ ಹರಿಸಲು ಸೂಚಿಸಬೇಕೆಂದು ಕಾಂಗ್ರೆಸ್ ರಾಜ್ಯಪಾಲರನ್ನು ಒತ್ತಾಯಿಸಿದೆ. ಕಾಂಗ್ರೆಸ್ ನಾಯಕರ ನಿಯೋಗವಿಂದು ರಾಜಭವನಕ್ಕೆ ತೆರಳಿ ಸರ್ಕಾರದ ವಿರುದ್ಧ ದೂರು ನೀಡಿದೆ.

ರಾಜ್ಯಪಾಲ ವಜುಭಾಯಿ ವಾಲಾ ಅವರ ಅನಾರೋಗ್ಯದಿಂದಾಗಿ ಅವರನ್ನು ಕಾಂಗ್ರೆಸ್ ನಿಯೋಗ ಭೇಟಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ರಾಜಭವನದ ಅಧಿಕಾರಿಗಳಿಗೆ ಕಾಂಗ್ರೆಸ್ ನಿಯೋಗ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.ಈ ಹಿಂದೆ ರಾಜ್ಯದಲ್ಲಿ ರಾಜಕೀಯ ಬೆಳವಣಿಗೆಗಳಾದಾಗ ಸಮ್ಮಿಶ್ರ ಸರ್ಕಾರಕ್ಕೆ ಸೂಚನೆ ರವಾನಿಸಿದ್ದ ರಾಜ್ಯಪಾಲರು ಅಭಿವೃದ್ಧಿಯ ವಿಷಯದಲ್ಲಿ ಹಿನ್ನಡೆಯಾಗುತ್ತಿದೆ ಎಂಬ ಕಾಳಜಿ ವ್ಯಕ್ತಪಡಿಸಿದ್ದರು.

ಈಗ ಉಪಚುನಾವಣೆಯಲ್ಲಿ ಬಿಜೆಪಿ ಸಂಪುಟದ ಎಲ್ಲಾ ಸಚಿವರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಯಾರೊಬ್ಬರೂ ಲಭ್ಯವಿಲ್ಲ. ಜನಸಾಮಾನ್ಯರ ಕೈಗೆ ಯಾವೊಬ್ಬ ಸಚಿವರೂ, ಅಧಿಕಾರಿಗಳು ಸಿಗುತ್ತಿಲ್ಲ. ಕಡತಗಳು ವಿಲೇವಾರಿಯಾಗುತ್ತಿಲ್ಲ. ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಕೇವಲ 15 ಕ್ಷೇತ್ರಗಳ ಉಪಚುನಾವಣೆ ಕಾರಣಕ್ಕಾಗಿ ಇಡೀ ಸಂಪುಟ ಆಡಳಿತವನ್ನು ನಿರ್ಲಕ್ಷ್ಯ ಮಾಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಆಯೋಗ ಆಕ್ರೋಶ ವ್ಯಕ್ತಪಡಿಸಿದೆ.

ಉಪ ಚುನಾವಣೆಯಲ್ಲಿ ಆಡಳಿತ ಯಂತ್ರ ದುರುಪಯೋಗವಾಗುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಜಾತಿ ಆಧಾರದ ಮೇಲೆ ಮತಯಾಚನೆ ಮಾಡಿದ್ದಾರೆ. ಗೃಹ ಸಚಿವ ಬಸವರಾಜಬೊಮ್ಮಾಯಿ ಕಾರಿನಲ್ಲಿ ಹಣ ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಅವರ ಕಾರಿನ ಚಾಲಕನ ಮೇಲೆ ದೂರು ದಾಖಲಾಗಿದೆ. ಬಿಜೆಪಿ ಅಭ್ಯರ್ಥಿಗಳು ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ.

ಈ ಎಲ್ಲಾ ಮಾಹಿತಿಗಳ ಕುರಿತು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದೆ. ಆದರೆ, ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ನಿಷ್ಪಕ್ಷಪಾತ ಹಾಗೂ ನಿರ್ಭೀತ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ತಾಕೀತು ಮಾಡುವಂತೆ ಕಾಂಗ್ರೆಸ್ ನಿಯೋಗ ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದೆ.

Facebook Comments