ಬಿಜೆಪಿಗೆ ಪ್ರತಿಷ್ಠೆಯಾದ ಆರ್.ಆರ್.ನಗರ ಚುನಾವಣೆ, ಕಾಂಗ್ರೆಸ್‍ನಲ್ಲಿ ಕಗ್ಗಂಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.30- ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ರಾಜ್ಯ ಬಿಜೆಪಿ ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸಲಿದೆಯೇ ? ಇಂತದೊಂದು ಪ್ರಶ್ನೆ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ವಿಶ್ವಾಸದಲ್ಲಿ ಕಾಂಗ್ರೆಸ್‍ನಿಂದ ವಲಸೆ ಹೋದ ಮಾಜಿ ಶಾಸಕ ಮುನಿರತ್ನ ಇದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿಮುನಿರಾಜುಗೌಡ ಅವರು ಈ ಭಾರಿ ನಾನೇ ಬಿಜೆಪಿ ಅಭ್ಯರ್ಥಿಯಾಗುತ್ತೇನೆ ಎಂಬ ಬಲವಾದ ವಿಶ್ವಾಸದಲ್ಲಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸರ್ಕಾರ ರಚನೆಗೆ ಕಾರಣರಾದ 17 ಮಂದಿ ಶಾಸಕರ ಪೈಕಿ ಯಾರಿಗೂ ಅನ್ಯಾಯ ಮಾಡದೇ ಎಲ್ಲರ ಕೈ ಹಿಡಿಯುವ ಬಿಗಿ ಪಟ್ಟಿನಲ್ಲಿದ್ದಾರೆ. ಅದಕ್ಕೆ ಆದರೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಬಿಜೆಪಿ ನಿಷ್ಠರಾಗಿರುವ ತುಳಸಿ ಮುನಿರಾಜು ಅವರಿಗೆ ಟಿಕೆಟ್ ಕೊಡಿಸುವ ಸಲುವಾಗಿ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.

# ಕಾಂಗ್ರೆಸ್‍ನಲ್ಲಿ ಅಭ್ಯರ್ಥಿ ಕೊರತೆ:
ರಾಜರಾಜೇಶ್ವರಿನಗರದಲ್ಲಿ ಮುನಿರತ್ನ ಪ್ರಬಲ ಅಭ್ಯರ್ಥಿಯಾಗಲಿದ್ದಾರೆ. ಅವರ ವಿರುದ್ಧ ಯಾರನ್ನು ಕಣಕ್ಕಿಳಿಸುವುದು ಎಂಬ ಗೊಂದಲದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.

ಐಎಎಸ್ ಅಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಅಥವಾ ಕುಸುಮಾ ಅವರ ತಂದೆ ಕಾಂಗ್ರೆಸ್ ನಾಯಕ ಹನುಮಂತರಾಯಪ್ಪ ಅವರ ಹೆಸರುಗಳು ಕೇಳಿ ಬರುತ್ತಿವೆ. ಇದೆಲ್ಲದರ ನಡುವೆ ಸಂಸದ ಡಿ.ಕೆ.ಸುರೇಶ್ ರಾಷ್ಟ್ರ ರಾಜಕಾರಣದ ಬಗ್ಗೆ ನಿರಾಸಕ್ತಿ ಹೊಂದಿದ್ದು, ರಾಜ್ಯ ರಾಜಕೀಯಕ್ಕೆ ಬರಲು ಆಸಕ್ತಿ ಹೊಂದಿದ್ದಾರೆ.

ಕೊನೆ ಕ್ಷಣದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಡಿ.ಕೆ.ಸುರೇಶ್ ಸ್ರ್ಪಸಲಿದ್ದಾರೆ ಎಂಬ ವದಂತಿಗಳಿದ್ದವು. ಆದರೆ ಆ ಪ್ರಸ್ತಾಪವನ್ನು ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಸುರೇಶ್ ಅವರ ಸಹೋದರ ಡಿ.ಕೆ.ಶಿವಕುಮಾರ್ ತಳ್ಳಿ ಹಾಕಿದ್ದಾರೆ. ಹನುಮಂತರಾಯಪ್ಪ ಅವರನ್ನು ಕಣಕ್ಕಿಳಿಸಲು ಡಿ.ಕೆ. ಸಹೋದರರು ನಿರಾಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ.

ಅಚ್ಚರಿಯ ಬೆಳವಣಿಗೆಯಲ್ಲಿ ಮುನಿರತ್ನ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಣೆಯಾಗಲಿದೆ. ಕಾಂಗ್ರೆಸ್ ಬಿಟ್ಟು ಹೋದರೂ ತಮ್ಮ ಮೂಲ ಪಕ್ಷದ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಮುನಿರತ್ನ ಮತ್ತೆ ಕಾಂಗ್ರೆಸ್‍ಗೆ ಬಂದು ಅಭ್ಯರ್ಥಿಯಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ಒಂದು ವೇಳೆ ಅಂತಹ ಬೆಳವಣಿಗೆಗಳು ನಡೆದರೆ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ಮುನಿರತ್ನ ಅವರ ಹಿತರಕ್ಷಣೆಯಾಗದಿದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಿಂದ ವಲಸೆ ಹೋದ ನಾಯಕರು ಬಂಡೇಳುವ ಸಾಧ್ಯತೆ ಇದೆ. ಆ ವೇಳೆಗೆ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯೂ ಶುರುವಾಗಬಹುದು.

ನಾಯಕತ್ವ ಬದಲಾವಣೆಯಾಗುವುದಾದರೆ ವಲಸಿಗರು ಸಹಜವಾಗಿ ಮೂಲೆ ಗುಂಪಾಗಲಿದ್ದಾರೆ. ಆ ಸನ್ನಿವೇಶದಲ್ಲಿ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾದರೂ ಅಚ್ಚರಿ ಪಡಬೇಕಿಲ್ಲ. ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳು ಪ್ರತಿಷ್ಠಿತ ಕಣಗಳಾಗಿವೆ. ಅದರಲ್ಲೂ ರಾಜರಾಜೇಶ್ವರಿನಗರ ಕ್ಷೇತ್ರವಂತೂ ಹೈವೋಲ್ಟೇಜ್ ಕಣವಾಗಿದೆ.

Facebook Comments

Sri Raghav

Admin