ಡಿಕೆಶಿ ಪರ ಪ್ರತಿಭಟನೆ ಜಾತಿ ಬಣ್ಣ ಕಟ್ಟುವುದು ಎಷ್ಟು ಸರಿ..? : ಸದಾನಂದಗೌಡ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿರುವುದಕ್ಕೆ ಜಾತಿ ಬಣ್ಣ ಕಟ್ಟುವುದು ಎಷ್ಟರ ಮಟ್ಟಿಗೆ ಸರಿ? ಜನ ಇದನ್ನು ನೋಡಿ ಮರೆಯುತ್ತಾರೆ ಅಷ್ಟೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ವ್ಯಂಗ್ಯವಾಡಿದ್ದಾರೆ.

ನಿನ್ನೆ ಪ್ರತಿಭಟನೆ ನಡೆಸುವ ವೇಳೆ ಭಾಷಣ ಮಾಡಿದ ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ವಿ.ಎಸ್.ಉಗ್ರಪ್ಪ, ದಿನೇಶ್ ಗುಂಡೂರಾವ್ ಇವರ್ಯಾರೂ ಒಕ್ಕಲಿಗರೇ ಅಲ್ಲ. ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಆದರೆ ಅದಕ್ಕೆ ಜಾತಿ ಬಣ್ಣ ಕಟ್ಟುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರ ಪ್ರಭಾವಿ ನಾಯಕರು ಎನಿಸಿಕೊಂಡವರೆ ನಿನ್ನೆ ಪ್ರತಿಭಟನೆಯಲ್ಲಿ ಭಾಗವಹಿಸಿರಲಿಲ್ಲ. ಇನ್ನು ಇದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಒಕ್ಕಲಿಗರ ಪ್ರತಿಭಟನೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಕುಹಕವಾಡಿದರು.

ಮಧ್ಯ ಕನರ್ಟಕ ರಾಜಧಾನಿ ಧಾವಣಗೆರೆಯಲ್ಲಿ ಹೊಸ ರಸಗೊಬ್ಬರ ಕಾರ್ಖಾನೆಯನ್ನು ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಸುಮಾರು 6ಸಾವಿರ ಕೋಟಿ ರೂ. ಬಂಡವಾಳ ಹೂಡಲು ಕರ್ನಾಟಕ ಮಾರ್ಕೆಟಿಂಗ್ ಫೆಡರೇಷನ್ ಮುಂದೆ ಬಂದಿದೆ. ಶೀಘ್ರದಲ್ಲೇ ಇದು ಪ್ರಾರಂಭವಾಗಲಿದೆ ಎಂದು ಹೇಳಿದರು.

ವಿಜಯಪುರ, ಬೀದರ್ ಹಾಗೂ ದಾವಣಗೆರೆ ಸೇರಿದಂತೆ ಯಾವುದೇ ಒಂದು ಭಾಗದಲ್ಲಿ ಕಾರ್ಖಾನೆ ಸ್ಥಾಪನೆ ಮಾಡಲು ತೀರ್ಮಾನಿಸಿದೆವು. ಇದಕ್ಕಾಗಿ ತಜ್ಞರ ಸಮಿತಿಯನ್ನು ರಚನೆ ಮಾಡಲಾಗಿತ್ತು. ಮುಖ್ಯವಾಗಿ ನೀರು, ರೈಲ್ವೆ ಸಂಪರ್ಕ ಲಭ್ಯತೆ ಆಧಾರದ ಮೇಲೆ ಸ್ಥಳ ಗುರುತಿಸಲು ಸಮಿತಿಗೆ ನಿರ್ದೇಶನ ನೀಡಲಾಗಿತ್ತು. ಈ ಪ್ರಕಾರ ದಾವಣಗೆರೆ ಎಲ್ಲದಕ್ಕೂ ಸೂಕ್ತವಾಗಿರುವುದರಿಂದ ಈ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಇದೇ ರೀತಿ ಉತ್ತರ ಪ್ರದೇಶ, ಗೋರಕ್‍ಪುರ ಸೇರಿದಂತೆ ದೇಶದ ನಾಲ್ಕು ಭಾಗಗಳಲ್ಲಿ ರಸಗೊಬ್ಬರ ಕಾರ್ಖಾನೆಗಳನ್ನು ಸ್ಥಾಪನೆ ಮಾಡಲಿದ್ದೇವೆ. ಶೇ.27ರಷ್ಟು ರಸಗೊಬ್ಬರ ಈ ನಾಲ್ಕು ಕಾರ್ಖಾನೆಗಳಲ್ಲೇ ಉತ್ಪಾದನೆಯಾಗಲಿದೆ ಎಂದು ತಿಳಿಸಿದರು. ಶೀಘ್ರ ಬಿಡುಗಡೆ: ಅತಿ ವೃಷ್ಟಿಯಿಂದ ಹಾನಿಗೊಳಗಾಗಿರುವ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಶೀಘ್ರದಲ್ಲೇ ಪರಿಹಾರ ಬಿಡುಗಡೆಯಾಗಲಿದೆ.

ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ರಾಜ್ಯದ ಪರಿಸ್ಥಿತಿ ಬಗ್ಗೆ ವಿವರಿಸಲಾಗಿದೆ. ನಾನು ಇಂತಹ ದಿನಾಂಕದಂದೇ ಹಣ ಬಿಡುಗಡೆಯಾಗಲಿದೆ ಎಂದು ಹೇಳುವುದಿಲ್ಲ. ಆದರೆ, ಸದ್ಯದಲ್ಲೇ ಕೇಂದ್ರ ಸರ್ಕಾರ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು. ಹಣ ಬಿಡುಗಡೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ. ಕೇಂದ್ರದಿಂದ ಆಗಮಿಸಿದ್ದ ಅಧ್ಯಯನ ತಂಡ ಮಾಹಿತಿ ನೀಡಿದೆ. ಖುದ್ದು ನಾನೇ ಸಚಿವ ಸಂಪುಟದಲ್ಲಿ ಈ ಬಗ್ಗೆ ಪ್ರಧಾನಿಗಳ ಗಮನಕ್ಕೆ ತಂದಿದ್ದೇನೆ.

ಕರ್ನಾಟಕ ಮಾತ್ರವಲ್ಲದೆ ಕೇಂದ್ರದಿಂದ ಮಳೆಯಿಂದ ಹಾನಿಗೊಳಗಾದ ಯಾವುದೇ ರಾಜ್ಯಕ್ಕೂ ಹಣ ಬಿಡುಗಡೆಯಾಗಿಲ್ಲ. ಯಾವುದೇ ರಾಜ್ಯಗಳಿಗೂ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ನೆರೆ ಸಂತ್ರಸ್ತರ ಪರಿಹಾರ ಕಾರ್ಯವನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದಾರೆ. ಈಗಾಗಲೇ ಸಂತ್ರಸ್ತರಿಗೆ ಮನೆ ನಿರ್ಮಾಣ, ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದು, ಜೀವ ರಕ್ಷಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.ರಾಜ್ಯದಲ್ಲೂ ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ ಎಂದು ತಿಳಿಸಿದರು.

ಶೀಘ್ರದಲ್ಲೇ ಚೇತರಿಕೆ: ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಬದಲಾವಣೆಯಿಂದಾಗಿ ಆರ್ಥಿಕ ಹಿಂಜರಿಕೆ ಬದಲಾಗಿದೆ. ಶೀಘ್ರದಲ್ಲೇ ಇದು ಚೇತರಿಕೆಯಾಗುವ ವಿಶ್ವಾಸ ನನಗಿದೆ, ಹಿಂದೆ ಡಿಡಿಪಿ ದರ 8.2ರಷ್ಟಿದದ್ದು 4.2ಕ್ಕೆ ಕುಸಿದಿತ್ತು. ಶೀಘ್ರದಲ್ಲೇ ಇನ್ನಷ್ಟು ಚೇತರಿಕೆಯಾಗಲಿದೆ ಎಂಬ ವಿಶ್ವಾಸವನ್ನು ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಆರ್ಥಿಕ ಹಿಂಜರಿಕೆ ಶಾಶ್ವತವಾಗಿ ಇರುವುದಿಲ್ಲ. ಜಾಗತಿಕ ಮಟ್ಟದಲ್ಲೂ ಉಂಟಾದ ದಿಢೀರ್ ಬೆಳವಣಿಗೆಯಿಂದ ಇಂತಹ ಏರುಪೇರುಗಳು ಸರ್ವೆ ಸಾಮಾನ್ಯ. ನಾವು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಅನೇಕ ರೀತಿಯ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆಟೋಮೊಬೈಲ್ ಕ್ಷೇತ್ರದಲ್ಲಿ ವಾಹನ ಖರೀದಿ ಮಾಡುವವರಿಗೆ ತೆರಿಗೆ ವಿನಾಯಿತಿ, ತೆರಿಗೆ ಸುಧಾರಣೆ, ಪ್ರತಿಯೊಬ್ಬರಿಗೂ ಸುಲಭವಾಗಿ ಸಾಲ ಸಿಗಲಿ ಎಂಬ ಕಾರಣಕ್ಕಾಗಿ ಬ್ಯಾಂಕುಗಳ ವಿಲಿನೀಕರಣ ಸೇರಿದಂತೆ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ವಿವರಿಸಿದರು.

ನೂರು ದಿನಗಳ ಅವಧಿಯಲ್ಲಿ ನಮ್ಮ ಸರ್ಕಾರ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ. ತ್ರಿವಳಿ ತಲಾಖ್, ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿರುವುದು ಸೇರಿದಂತೆ ಹತ್ತು ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಭಾರತದೆಲ್ಲೆಡೆ ವಿಶ್ವದೆಲ್ಲೆಡೆ ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ಛ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥನಾರಾಯಣ, ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ