ನೆರೆ, ಬೆಳೆ ಹಾನಿಗೆ ಮಧ್ಯಂತರ ಪರಿಹಾರಕ್ಕೆ ಈಶ್ವರ ಖಂಡ್ರೆ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.19- ಪ್ರಧಾನಮಂತ್ರಿ ಫಸಲ್‍ಭೀಮಾ ಯೋಜನೆಯಡಿ ನೆರೆಯಿಂದ ಹಾನಿಗೊಳಗಾದ ಕೃಷಿ ಬೆಳೆಗಳಿಗೆ ಮಧ್ಯಂತರ ಪರಿಹಾರವಾಗಿ ತಕ್ಷಣವೇ 1ಸಾವಿರ ಕೋಟಿ ರೂ.ಗಳನ್ನು ಕೊಡಿಸಲು ಅವಕಾಶವಿದ್ದು, ರಾಜ್ಯ ಸರ್ಕಾರ ಸಮಿತಿಗಳನ್ನು ರಚಿಸಿ ಕೂಡಲೇ ಕ್ರಮಕೈಗೊಳ್ಳಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಒತ್ತಾಯಿಸಿದರು.

ಪಕ್ಷದ ಕಚೇರಿಯಲ್ಲಿಂದು ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಫಸಲ್‍ಭೀಮಾ ಯೋಜನೆ ನಿಯಮಾವಳಿ ಪ್ರಕಾರ ಬರ ಹಾಗೂ ನೆರೆ ಹಾವಳಿಯಿಂದ ಸಂಪೂರ್ಣ ಬೆಳೆ ನಷ್ಟವಾದರೆ ಸ್ಥಳೀಯವಾಗಿ ಸಮಿತಿಗಳನ್ನು ಜಿಲ್ಲಾಧಿಕಾರಿಗಳು ಮತ್ತು ತಹಶೀಲ್ದಾರ್ ಅವರ ನೇತೃತ್ವದಲ್ಲಿ ರಚಿಸಬೇಕು. ವಿಮಾ ಸಂಸ್ಥೆಯ ಪ್ರತಿನಿಧಿ ಅದರಲ್ಲಿರಬೇಕು. ವಾರದೊಳಗಾಗಿ ಸಮಿತಿ ರಚನೆ ಮಾಡಿ ನಷ್ಟದ ಅಂದಾಜು ಮಾಡಿ 15 ದಿನಗಳೊಳಗೆ ವರದಿ ಪಡೆದುಕೊಂಡು ಅದನ್ನು ವಿಮಾ ಕಂಪನಿಗಳಿಗೆ ರವಾನಿಸಬೇಕು.

ಕಂಪನಿಗಳು ತಕ್ಷಣವೇ ಮಧ್ಯಂತರ ಪರಿಹಾರ ಬಿಡುಗಡೆ ಮಾಡಬೇಕು. ಆಗಸ್ಟ್ 1ರಿಂದಲೂ ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 30 ಲಕ್ಷ ಎಕರೆಯಲ್ಲಿ ಬೆಳೆದ ಬೆಳೆ ಕೊಚ್ಚಿ ಹೋಗಿದೆ. ಪ್ರತಿ ಎಕರೆಗೆ ಕನಿಷ್ಠ 20 ಸಾವಿರದಂತೆ ಪರಿಹಾರ ಕೊಡಬೇಕಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಕನಿಷ್ಠ 5 ಸಾವಿರ ರೂ.ಗಳನ್ನು ಪ್ರತಿ ಎಕರೆಗೆ ಮಧ್ಯಂತರ ಪರಿಹಾರ ನೀಡಬೇಕು. ಇದು ಸುಮಾರು 1 ಸಾವಿರ ಕೋಟಿ ರೂ.ಗಳಷ್ಟಾಗಲಿದೆ.

ನಷ್ಟದ ಸಂಪೂರ್ಣ ಅಂದಾಜು ವರದಿ ಸಲ್ಲಿಕೆಯಾದ ಬಳಿಕ ಉಳಿದ ಪ್ರತಿ ಎಕರೆಗೆ 15 ಸಾವಿರ ರೂ.ಗಳ ಪರಿಹಾರ ಪಾವತಿಯಾದರೆ ಇನ್ನೂ 3 ಸಾವಿರ ಕೋಟಿ ರೈತರ ಖಾತೆಗೆ ಜಮಾವಣೆಯಾಗುತ್ತದೆ. ವಿಮಾಕಂಪನಿಗಳಿಂದಲೇ ಬೆಳೆನಷ್ಟಕ್ಕೆ 4 ಸಾವಿರ ಕೋಟಿ ಪರಿಹಾರ ಸಂದಾಯವಾದಂತಾಗುತ್ತದೆ. ಇದು ಸರ್ಕಾರ ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್ ಯೋಜನೆಗಳನ್ನು ಹೊರತುಪಡಿಸಿದ ಪರಿಹಾರವಾಗಿದೆ ಎಂದು ಅವರು ವಿವರಿಸಿದರು.

ಪ್ರತಿ ಕುಟುಂಬಕ್ಕೆ 350 ಚದರಡಿ ವಿಸ್ತೀರ್ಣದ ಮನೆ ನಿರ್ಮಿಸಿಕೊಡುವ ಯೋಜನೆಯನ್ನು ರಾಜ್ಯಸರ್ಕಾರ ಪ್ರಸ್ತಾಪಿಸಿದೆ. ಅಷ್ಟು ಜಾಗ ಸಾಲುವುದಿಲ್ಲ. ಕನಿಷ್ಠ 800 ಚದರಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಡಬೇಕು. ನೆರೆ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡುತ್ತಿರುವ ಉಪವಿಭಾಗಾಧಿಕಾರಿಗಳನ್ನು ಆಗಸ್ಟ್ 26 ರಿಂದ ಸೆಪ್ಟೆಂಬರ್ 21ರವರೆಗೆ ತರಬೇತಿಗಾಗಿ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ನೆರೆ ಪರಿಹಾರ ಕಾರ್ಯಗಳು ಮುಕ್ತಾಯಗೊಳ್ಳು ವವರೆಗೂ ಉಪವಿಭಾಗಾಧಿಕಾರಿಗಳನ್ನು ತರಬೇತಿಗೆ ಕಳುಹಿಸಬಾರದು ಎಂದು ಅವರು ಆಗ್ರಹಿಸಿದರು. ಶಾಸಕ ಆನಂದ್‍ನ್ಯಾಮೇಗೌಡ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Facebook Comments