ಮನೆಗೆ ನುಗ್ಗಿ ಕುಟುಂಬದ ಮೂವರನ್ನು ಕೊಚ್ಚಿ ಕೊಲೆಗೈದ ದುಷ್ಕರ್ಮಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಜ.19- ಮನೆಗೆ ನುಗ್ಗಿದ ದುಷ್ಕರ್ಮಿಗಳು ತಾಲೂಕು ಪಂಚಾಯಿತಿ ಮಾಜಿ ಸದಸ್ಯನ ಕುಟುಂಬದ ಮೂವರನ್ನು ಧಾರುಣವಾಗಿ ಕೊಚ್ಚಿ ಭೀಕರವಾಗಿ ಕೊಲೆಗೈದಿರುವ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡದಲ್ಲಿ ನಡೆದಿದೆ. ಈ ಘಟನೆಯಿಂದಾಗಿ ಇಡೀ ಬೈಲಹೊಂಗಲ ತಾಲೂಕು ಬೆಚ್ಚಿಬಿದ್ದಿದೆ. ತಾಪಂ ಮಾಜಿ ಸದಸ್ಯ ಶಿವಾನಂದ ಅಂದಾನಶೆಟ್ಟಿ (60), ಪತ್ನಿ ಶಾಂತವ್ವ (55) ಮತ್ತು ಪುತ್ರ ವಿನೋದ್ ಅಂದಾನಶೆಟ್ಟಿ (26) ಕೊಲೆಯಾದ ದುರ್ದೈವಿಗಳು.

ನಿನ್ನೆ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಮನೆಯೆಲ್ಲ ರಕ್ತಸಿಕ್ತವಾಗಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ದೊಡ್ಡವಾಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು ಸಾಕ್ಷ್ಯ ಕಲೆಯಲ್ಲಿ ತೊಡಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ದೊಡ್ಡವಾಡ ಠಾಣಾ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಕೊಲೆಗೆ ರಾಜಕೀಯ ದ್ವೇಷವೇ, ವೈಯಕ್ತಿಕ ದ್ವೇಷವೇ ಅಥವಾ ದರೋಡೆ ಹಿನ್ನೆಲೆಯಲ್ಲಿ ನಡೆದಿರುವ ಕೊಲೆಯೇ ಎಂಬ ಬಗ್ಗೆಯೂ ಪೊಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ.  ಒಂದೇ ಕುಟುಂಬದ ಮೂವರು ಸದಸ್ಯರು ಒಂದೇ ರಾತ್ರಿಯಲ್ಲಿ ಹೆಣವಾಗಿ ಬಿದ್ದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಲ್ಲದೆ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.

Facebook Comments