4 ರೈತ ಮುಖಂಡರ ಹತ್ಯೆಗೆ ನಡೆದಿತ್ತೇ ಸಂಚು..!?
ನವದೆಹಲಿ,ಜ.23-ಗಣರಾಜ್ಯೋತ್ಸವದಂದು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಗಲಭೆ ಸೃಷ್ಟಿಸಿ ಕೆಲವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ರೈತರ ಗುಂಪಿನಲ್ಲಿ ಸೇರಿಕೊಂಡಿರುವ ಕೆಲ ಕಿಡಿಗೇಡಿಗಳು ರ್ಯಾಲಿ ಸಂದರ್ಭದಲ್ಲಿ ಮಾರಣಹೋಮ ನಡೆಸಲು ಸಂಚು ರೂಪಿಸಿದ್ದು, ತಮ್ಮ ಗುಂಪಿನಲ್ಲೇ ವೇಷ ಬದಲಿಸಿಕೊಂಡಿದ್ದ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ಹರಿಯಾಣ ಪೊಲೀಸರಿಗೆ ಒಪ್ಪಿಸಿದ್ದೇವೆ ಎಂದು ರೈತ ಮುಖಂಡ ಕುಲ್ವಂತ್ಸಿಂಗ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮುಖಕ್ಕೆ ಮಾಸ್ಕ್ ಹಾಕಿಕೊಂಡಿದ್ದ ಅನಾಮಧೇಯ ವ್ಯಕ್ತಿ ರ್ಯಾಲಿ ಸಂದರ್ಭದಲ್ಲಿ ನಾಲ್ಕು ರೈತ ಮುಖಂಡರನ್ನು ಗುಂಡಿಕ್ಕಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂದು ಸಿಂಗ್ ಆರೋಪಿಸಿದ್ದಾರೆ.
ಗಣರಾಜ್ಯೋತ್ಸವದಂದ ನಾವು ನಡೆಸುವ ರ್ಯಾಲಿಯನ್ನು ಹತ್ತಿಕ್ಕಲು ಪೊಲೀಸರು ಯತ್ನಿಸಿದರೆ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ರೈತರಿಗೆ ಮಾರಕವಾಗಲಿರುವ ಮೂರು ಮಸೂದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವವರೆಗೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.