Friday, April 26, 2024
Homeರಾಜ್ಯಅನಂತ್‍ಕುಮಾರ್ ಹೆಗಡೆಯವರನ್ನು ಪಕ್ಷದಿಂದ ಹೊರಹಾಕಿ : ಗೃಹ ಸಚಿವ ಪರಮೇಶ್ವರ್

ಅನಂತ್‍ಕುಮಾರ್ ಹೆಗಡೆಯವರನ್ನು ಪಕ್ಷದಿಂದ ಹೊರಹಾಕಿ : ಗೃಹ ಸಚಿವ ಪರಮೇಶ್ವರ್

ಬೆಂಗಳೂರು,ಮಾ.11- ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ಕೊಡುತ್ತಿರುವ ಸಂಸದ ಅನಂತಕುಮಾರ್ ಹೆಗಡೆ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಪ್ರಧಾನಿ ನರೇಂದ್ರಮೋದಿಯವರು ಮುಕ್ತ ಕಂಠದಿಂದ ಹೊಗಳಿದ್ದಾರೆ. ಸಂವಿಧಾನ ಇಲ್ಲದೇ ಹೋಗಿದ್ದರೆ ನಾನು ಪ್ರಧಾನಮಂತ್ರಿ ಆಗುತ್ತಿರಲಿಲ್ಲ ಎಂದಿದ್ದಾರೆ. ಆದರೆ ಅವರ ಪಕ್ಷದ ಸಂಸದರೊಬ್ಬರು ಪದೇಪದೇ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ನಾನು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಮುಜುಗರ ತರುವ ಮಾತುಗಳನ್ನಾಡಿದರೆ ಸರಿಪಡಿಸಬೇಕು. ಆದರೆ, ಸಂಸದ ಅನಂತಕುಮಾರ್ ಅವರ ಹೇಳಿಕೆಯಿಂದ ದೂರ ಇದ್ದೇವೆ ಎಂದು ಹೇಳಿದರೆ ಸಾಲದು. ಅವರನ್ನು ಪಕ್ಷದಿಂದ ಹೊರಹಾಕಬೇಕು ಅಥವಾ ನಿಯಂತ್ರಿಸಬೇಕು. ಸಂವಿಧಾನದ ಬಗ್ಗೆ ಕೀಳುಮಟ್ಟದ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸ್ರ್ಪಧಿಸಲು ಸರಿಯಾದ ಅಭ್ಯರ್ಥಿಯೇ ಇಲ್ಲ ಎಂದು ಬಿಜೆಪಿಯವರು ಹೇಳಿಕೊಳ್ಳಬಹುದು. ಆದರೆ, ಚುನಾವಣೆ ನಂತರ ವಾಸ್ತವಾಂಶ ಏನೆಂಬುದು ಗೊತ್ತಾಗಲಿದೆ. ಸಚಿವ ಎಚ್.ಸಿ.ಮಹದೇವಪ್ಪ ಅವರ ಸ್ಪರ್ಧೆಯ ಮಾತುಗಳು ಕೇಳಿಬರುತ್ತಿವೆ. ಮಹದೇವಪ್ಪ ನನಗೆ ಟಿಕೆಟ್ ಬೇಡ, ತಮ್ಮ ಮಗನಿಗೆ ನೀಡುವಂತೆ ಹೇಳುತ್ತಿದ್ದಾರೆ. ಅಂತಿಮ ತೀರ್ಮಾನ ಹೈಕಮಾಂಡ್ ಮಾಡಲಿದೆ ಎಂದು ತಿಳಿಸಿದರು.

ತುಮಕೂರಿನಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಅವರಿಗೆ ಟಿಕೆಟ್ ನೀಡಿರುವುದಕ್ಕೆ ವಿರೋಧ ಮಾಡುತ್ತಿರುವವರ ಮನವೊಲಿಸುವ ಕೆಲಸವನ್ನು ನಿನ್ನೆಯಿಂದ ಆರಂಭಿಸಲಾಗಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವಂತೆ ಅಸಮಾಧಾನಿತರಲ್ಲಿ ಮನವಿ ಮಾಡಲಾಗಿದೆ. ಚುನಾವಣೆ ಎಂದ ಮೇಲೆ ಅಸಮಾಧಾನ ಸಹಜ. ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News