ರಾಜ್ಯಸಭೆಯಲ್ಲಿ ಪೌರತ್ವ ಮಸೂದೆ ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಡಿ.11- ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿರುವ ಕೇಂದ್ರ ಎನ್‍ಡಿಎ ಸರ್ಕಾರದ ಮಹತ್ವಾಕಾಂಕ್ಷಿ ಪೌರತ್ವ(ತಿದ್ದುಪಡಿ)ಮಸೂದೆ 2019 ಇಂದು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನ ಮೇಲ್ಮನೆಯಲ್ಲಿ ಈ ವಿಧೇಯಕವನ್ನು ಮಂಡಿಸಿದ ನಂತರ ಸುದೀರ್ಘ ಕಾಲ ಕಾವೇರಿದ ಚರ್ಚೆ ನಡೆಯಿತು.

ಪ್ರತಿಪಕ್ಷಗಳು ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿ ಪ್ರತಿಭಟಿಸಿದರೆ ಅಮಿತ್ ಶಾ ಅವರು ಈ ಮಸೂದೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ಈ ಮಸೂದೆಯಿಂದ ಬಾರದೆ ಇರುವ ಮುಸ್ಲಿಮರು ಯಾವುದೇ ಗೊಂದಲ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಭಾರತೀಯ ಮುಸ್ಲಿಮರು ಇಂದಿಗೂ, ಎಂದೆಂದಿಗೂ ಭಾರತೀಯ ಪೌರರೇ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಪಾಕಿಸ್ತಾನ , ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳದಿಂದ ಬೇಸತ್ತು ಇಲ್ಲಿಗೆ ಬಂದಿರುವ ಮುಸ್ಲಿಮೇತರರಿಗೆ ಮಾತ್ರ ಭಾರತೀಯ ಪೌರತ್ವ ನೀಡಲಾಗುತ್ತದೆ. ಜಗತ್ತಿನ ಬೇರೆ ದೇಶಗಳ ಮುಸ್ಲಿಮರಿಗೆ ನಾವು ಯಾವುದೇ ನಾಗರಿಕತ್ವ ನೀಡುವುದಿಲ್ಲ ಎಂದು ಗೃಹ ಸಚಿವರು ಹೇಳಿದರು.

ವೋಟ್ ಬ್ಯಾಂಕ್‍ಗಾಗಿ ಕೇಂದ್ರ ಸರ್ಕಾರ ವಿಧೇಯಕ ಮಂಡನೆಯ ರಾಜಕೀಯ ಮಾಡುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಳ್ಳಿ ಹಾಕಿದ ಅಮಿತ್ ಶಾ ಚುನಾವಣಾ ಪ್ರಣಾಳಿಕೆಯಲ್ಲೇ ಈ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.

ಈಶಾನ್ಯ ರಾಜ್ಯಗಳ ಜನತೆ ಕೂಡ ಈ ಮಸೂದೆಯಿಂದ ಯಾವುದೇ ಗೊಂದಲ ಮತ್ತು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಅಲ್ಲಿನ ಅರ್ಹ ಪೌರರು ಮತ್ತು ಮೂಲ ನಿವಾಸಿಗಳ ರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಈ ವಿಧೇಯಕ ಮಿಜೋರಾಂ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯಸಭೆಯಲ್ಲಿ ಆಡಳಿತಾರೂಢ ಪಕ್ಷಕ್ಕೆ ಬಹುಮತ ಲಭಿಸಿ ಮಸೂದೆ ಅಂಗೀಕಾರವಾಗಬಹುದು ಎಂದು ತಿಳಿದಿದ್ದರೂ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ಪ್ರತಿಭಟನೆಯ ರೂಪದಲ್ಲಿ ಹೋರಾಟ ಮುಂದುವರೆಸಿದೆ.

ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ರಾಜ್ಯಸಭೆಯಲ್ಲಿ ತಮ್ಮ ಸದಸ್ಯರಿಗೆ ವಿಪ್ ಜಾರಿಗೊಳಿಸಿ ಉದ್ದೇಶಿತ ಮಸೂದೆಯ ಪರಿಶೀಲನೆಗೆ ಆಯ್ದ ಸಮಿತಿಗೆ ಕಳುಹಿಸುವ ನಿರ್ಣಯ ಕೈಗೊಂಡಿದೆ. ಲೋಕಸಭೆಯಲ್ಲಿ ಸೋಮವಾರ ಮಸೂದೆ ಪರವಾಗಿ ಮತ ಹಾಕಿದ್ದ ಶಿವಸೇನೆ ವಿರೋಧ ಪಕ್ಷಗಳ ಪರವಾಗಿ ನಿನ್ನೆ ಬೆಂಬಲ ವ್ಯಕ್ತಪಡಿಸಿತು. ಮಸೂದೆಗೆ ಬೆಂಬಲ ನೀಡುವ ವಿಚಾರವಾಗಿ ಜೆಡಿಯುನಲ್ಲಿ ಭಿನ್ನತೆ ಕಂಡು ಬಂದಿದೆ. ಜೆಡಿಯುನ ನಾಯಕರಾದ ಪ್ರಶಾಂತ್ ಕಿಶೋರ್ ಮತ್ತು ಪವನ್ ಕುಮಾರ್ ವರ್ಮ ಪಕ್ಷದ ತೀರ್ಮಾನವನ್ನು ಟೀಕಿಸಿದ್ದಾರೆ.

ರಾಜ್ಯಸಭೆಯಲ್ಲಿ ಕೂಡ ಮಸೂದೆಗೆ ಸಂಬಂಧಪಟ್ಟಂತೆ ಇಂದು ಸುದೀರ್ಘ ಚರ್ಚೆ ನಡೆಯಿತು. ಬಿಜೆಪಿ ಈ ಸಂದರ್ಭದಲ್ಲಿ ಬಿಜೆಡಿ, ಟಿಡಿಪಿ, ಎಐಎಡಿಎಂಕೆ ಮತ್ತು ವೈಎಸ್‍ಆರ್ ಸಿಪಿಯ ಬೆಂಬಲವನ್ನು ನಿರೀಕ್ಷಿಸುತ್ತಿದ್ದು ರಾಜ್ಯಸಭೆಯಲ್ಲಿ 128 ಸದಸ್ಯರ ಬೆಂಬಲ ನಿರೀಕ್ಷಿಸುತ್ತಿದೆ.

ಪೌರತ್ವ ತಿದ್ದುಪಡಿ ಮಸೂದೆಗೆ ಎಷ್ಟು ಸದಸ್ಯರು ಬೆಂಬಲ ನೀಡುತ್ತಿದ್ದಾರೆ ಎಂಬುದು ಇಲ್ಲಿ ಮುಖ್ಯವಲ್ಲ. ನಮಗೆ ಬೇಕಾಗಿರುವುದು ಬಹುಮತ ವರ್ಸಸ್ ನೈತಿಕತೆ, ಎಲ್ಲದಕ್ಕೂ ನಾವು ಉತ್ತರ ಬಯಸುತ್ತೇವೆ ಎಂದು ಪ್ರತಿಪಕ್ಷದ ನಾಯಕರು ತಿಳಿಸಿದ್ದಾರೆ.

Facebook Comments