ಸಮುದ್ರ ಪಾಲಾದ 225 ಟಿಎಂಸಿ ಕಾವೇರಿ ನೀರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 25- ಕಾವೇರಿ ಜಲಾನಯನ ಭಾಗದಲ್ಲಿ 405 ಟಿಎಂಸಿ ಅಡಿ ಹಾಗೂ ಕೃಷ್ಣ ಜಲಾನಯನ ಭಾಗದಲ್ಲಿ 500 ಟಿಎಂಸಿ ಅಡಿ ನೀರನ್ನು ಜಲಾಶಯಗಳಿಂದ ಕಳೆದ ವರ್ಷ ಹೊರಬಿಡಲಾಯಿತು. ರಾಜ್ಯದ ಎಲ್ಲ ಪ್ರಮುಖ ಜಲಾಶಯಗಳು ಮುಂಗಾರಿನ ಆರಂಭದಲ್ಲೇ ಭರ್ತಿಯಾದರೂ 2ನೇ ಬೆಳೆಗೆ ನೀರಿನ ಕೊರತೆ ಉಂಟಾಯಿತ್ತಲ್ಲದೆ ಕುಡಿಯುವ ನೀರಿನ ಸಮಸ್ಯೆಯನ್ನು ರಾಜ್ಯ ಎದುರಿಸುವಂತಾಗಿದೆ.

ಕಳೆದ ಬಾರಿ ಮುಂಗಾರು ಆರಂಭದಲ್ಲೇ ಜಲಾಶಯಗಳು ಭರ್ತಿಯಾಗಿ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ನೀರನ್ನು ಜಲಾಶಯಗಳಿಂದ ಹೊರಬಿಡಲಾಯಿತು. ಆದರೂ ಈ ಬೇಸಿಗೆಯಲ್ಲಿ ಕುಡಿಯುವ ನೀರಿನ ಆಹಾಕಾರ ತಪ್ಪಲಿಲ್ಲ.

ರಾಜ್ಯ ಸರ್ಕಾರದ ಉನ್ನತ ಮೂಲದ ಮಾಹಿತಿ ಪ್ರಕಾರ ಕಾವೇರಿ ಜಲಾನಯನ ಭಾಗದಿಂದ ಕಳೆದ ಜೂನ್‍ನಿಂದ ಮೇ ಅಂತ್ಯದವರೆಗೆ 405 ಟಿಎಂಸಿ ಅಡಿ ನೀರನ್ನು ಬಿಡಲಾಗಿದೆ. ತಮಿಳುನಾಡು ಕೂಡ 96 ಟಿಎಂಸಿ ಅಡಿಯ ನೀರನ್ನು ಮಾತ್ರ ಬಳಸಿಕೊಂಡಿದೆ. ಸುಮಾರು 225 ಟಿಎಂಸಿ ನೀರು ಸಮುದ್ರದ ಪಾಲಾಗಿದೆ.

ತಮಿಳುನಾಡಿಗೆ ಜಲ ವರ್ಷವೊಂದರಲ್ಲಿ 177.25 ಟಿಎಂ ಅಡಿ ನೀರನ್ನು ರಾಜ್ಯದಿಂದ ಬಿಡಬೇಕಾಗಿತ್ತು. ಆದರೆ ಜೂನ್-ಜುಲೈ ಆಗಸ್ಟ್ ನಲ್ಲಿ ಅತಿವೃಷ್ಟಿ ಉಂಟಾದ ಪರಿಣಾಮ ಕೆಆರ್‍ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳು ಭರ್ತಿಯಾಗಿ ಹೆಚ್ಚುವರಿ ನೀರನ್ನು ಜಲಾಶಯದಿಂದ ಅನಿವಾರ್ಯವಾಗಿ ಹೊರಬಿಡಲಾಗಿತ್ತು.

ಈ ನೀರನ್ನು ರಾಜ್ಯದ ಜಲಾನಯನ ಭಾಗದಲ್ಲಿರುವ ಸಣ್ಣಪುಟ್ಟ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಬೇಕಿತ್ತು ಎಂಬುದು ತಜ್ಞರ ಹಾಗೂ ಜನರ ಅಭಿಪ್ರಾಯವಾಗಿದೆ. ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತಹ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಳ್ಳಬೇಕಾಗಿದೆ ಎಂಬುದು ತಜ್ಞರ ಸಲಹೆಯಾಗಿದೆ.

ಮೇಕೆದಾಟು ಬಳಿ ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ಸಮತೋಲನ ಜಲಾಶಯ ನಿರ್ಮಾಣ ಮಾಡಲು ಮುಂದಾಗಿದೆಯಾದರೂ ಅದು ಇನ್ನು ಕಾರ್ಯಗತವಾಗಿಲ್ಲ. ಆಗಸ್ಟ್ ನಂತರ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಜಲಾಶಯಗಳಿಗೆ ಬರಬೇಕಾದ ಒಳಹರಿವು ಶೇ.50ರಷ್ಟು ಕಡಿಮೆಯಾಗಿದೆ. ಇದರಿಂದ ರೈತರ 2ನೇ ಬೆಳೆಗಳಿಗೆ ನೀರಿನ ಕೊರತೆ ಸೃಷ್ಟಿಯಾಗಿತ್ತು.

ಕೃಷ್ಣ ಜಲಾನಯನ ಭಾಗದಲ್ಲೂ 500 ಟಿಎಂಸಿ ಅಡಿಯಷ್ಟು ನೀರನ್ನು ಹೆಚ್ಚುವರಿಯಾಗಿ ಹೊರ ರಾಜ್ಯಕ್ಕೆ ಬಿಡಲಾಗಿದೆ. ಸುಮಾರು 560 ಟಿಎಂಸಿ ಅಡಿ ನೀರು ಕಳೆದ ವರ್ಷ ಇದ್ದರೂ ಬಳಸಿಕೊಳ್ಳಲು ಸಾದ್ಯವಾಗಿದ್ದು ಮಾತ್ರ 160-170 ಟಿಎಂಸಿ ಮಾತ್ರ.

ಪ್ರತಿ ವರ್ಷವು ಮಳೆ ಉತ್ತಮವಾಗಿ ಬೀಳುವುದಿಲ್ಲ.ಕಳೆದ 20 ವರ್ಷಗಳಲ್ಲಿ 15ಕ್ಕಿಂತ ಹೆಚ್ಚು ವರ್ಷಗಳಲ್ಲಿ ಬರಪರಿಸ್ಥಿತಿಯನ್ನು ಎದುರಿಸಲಾಗಿದೆ. ಕಳೆದ ಮೂರು ವರ್ಷಗಳಿಂದಲೂ ಸತತ ಬರ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಸಣ್ಣಪುಟ್ಟ ಕೆರೆಗಳಿಗೆ ನೀರು ತುಂಬಿಸಿ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ