Friday, April 26, 2024
Homeರಾಜ್ಯನ್ಯಾಯವಾದಿಗಳ ರಕ್ಷಣಾ ಕಾಯ್ದೆ ಮೇಲ್ಮನೆಯಲ್ಲಿ ಅಂಗೀಕಾರ

ನ್ಯಾಯವಾದಿಗಳ ರಕ್ಷಣಾ ಕಾಯ್ದೆ ಮೇಲ್ಮನೆಯಲ್ಲಿ ಅಂಗೀಕಾರ

ಬೆಳಗಾವಿ,ಡಿ.15- ನ್ಯಾಯವಾದಿಗಳು ಯಾವುದೇ ಭಯ ಅಥವಾ ಬಾಹ್ಯ ಪ್ರಭಾವಕ್ಕೆ ಒಳಗಾಗದೆ ತಮ್ಮ ವೃತ್ತಿಪರ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲು ಹಾಗೂ ಅವರ ಮೇಲಿನ ಹಿಂಸೆಯನ್ನು ನಿಷೇಸಲು ಹಾಗೂ ಅವರಿಗೆ ರಕ್ಷಣೆ ಒದಗಿಸಲು ಅವಕಾಶ ಕಲ್ಪಿಸಿರುವ 2023ನೇ ಸಾಲಿನ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕಕ್ಕೆ ವಿಧಾನ ಪರಿಷತ್ ನಲ್ಲಿ ಅಂಗೀಕಾರ ಲಭಿಸಿತು.

ವಿಧೇಯಕ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವ ಪ್ರಸಂಗಗಳು ನಡೆಯುತ್ತಿವೆ. ಅವರಿಗೆ ಕಾನೂನಾತ್ಮಕ ರಕ್ಷಣೆ ಅವಶ್ಯಕತೆ ಇದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಕೂಡ ಆದೇಶ ನೀಡಿದೆ. ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಪೊಲೀಸರ ರೀತಿ, ವಕೀಲರೂ ಮುಖ್ಯ ಎಂದರು.

ವಿಧೇಯಕದ ಮೇಲೆ ಬಿಜೆಪಿಯ ತೇಜಸ್ವಿನಿ ರಮೇಶ್ ಮಾತನಾಡಿ, ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಈ ವಿಧೇಯಕವನ್ನು ಜಾರಿಗೆ ಮಾಡಲು ಮುಂದಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಕಡೆ ಪಕ್ಷ ಈಗ ಬಂದಿರುವುದು ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದರು.

ಕಾಂಗ್ರೆಸ್ನ ನಾಗರಾಜ್ ಯಾದವ್ ಅವರು, ಹಿಂದಿನ ಸರ್ಕಾರಕ್ಕೆ ಬದ್ದತೆ ಇರಲಿಲ್ಲ. ನಮ್ಮ ಸರ್ಕಾರ ವಕೀಲರ ಮೇಲಿನ ಹಲ್ಲೆಯನ್ನು ತಡೆಗಟ್ಟುವ ಉದ್ದೇಶದಿಂದ ಈ ಕಾಯ್ದೆಯನ್ನು ಜಾರಿ ಮಾಡಿದೆ. ಇದು ನುಡಿದಂತೆ ನಡೆಯುವ ಸರ್ಕಾರ ಎಂದು ಸಮರ್ಥನೆ ಮಾಡಿಕೊಂಡರು. ನಾಗರಾಜ್ ಯಾದವ್ ಅವರ ಈ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ, ಶಶಿಲ್ ನಮೋಶಿ, ತೇಜಸ್ವಿನಿ ರಮೇಶ್ ಮತ್ತಿತರರು ತಿರುಗಿ ಬಿದ್ದರು.

ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ಇದರಲ್ಲಿ ಯಾವ ಸರ್ಕಾರವು ಭುಜ ತಟ್ಟಿಕೊಳ್ಳಬೇಕಾದ ಅಗತ್ಯವಿಲ್ಲ. ಹಿಂದೆ ನಮ್ಮ ಸರ್ಕಾರ ದೊಡ್ಡದು ಮಾಡಲು ಮುಂದಾಗಿತ್ತು. ವಕೀಲರ ಪರಿಷತ್ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಕಾಯ್ದೆಯನ್ನು ಜಾರಿಗೆ ತರುವಂತೆ ಮನವಿ ಮಾಡಿದ್ದರು. ಬಹುತೇಕ ನಮ್ಮ ಸರ್ಕಾರದ ಅವಧಿಯಲ್ಲೇ ಕಾಯ್ದೆ ಮಂಡನೆಗೆ ಸಿದ್ಧವಾಗಿತ್ತು. ಆದರೆ ಕೆಲವು ಕಾರಣಗಳಿಂದ ವಿಳಂಬವಾಗಿದೆ.

ನನ್ನ ಸ್ಪಷ್ಟನೆ ಎಂದರೆ ಕಾಯ್ದೆ ಮೇಲೆ ಮಾತನಾಡುವಾಗ ನಮ್ಮ ಸರ್ಕಾರ, ನಿಮ್ಮ ಸರ್ಕಾರ ಮಾಡಿತ್ತು ಎಂಬುದನ್ನು ಹೇಳಿಕೊಳ್ಳಬಾರದು. ನಾಗರಾಜ್ ಯಾದವ್ ಅವರ ಹೇಳಿಕೆಯನ್ನು ನಾವು ಒಪ್ಪುವುದಿಲ್ಲ ಎಂದು ಆಕ್ಷೇಪಿಸಿದರು. ಆಗ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು, ಕಾಯ್ದೆ ಮೇಲೆ ಮಾತನಾಡುವಾಗ ಆ ಸರ್ಕಾರ, ಈ ಸರ್ಕಾರ ಎಂದು ಹೇಳಬಾರದು. ಕಾಯ್ದೆಯಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಮಾತನಾಡಬೇಕು. ಅಗತ್ಯವಾದರೆ ಸರ್ಕಾರಕ್ಕೆ ಸಲಹೆಗಳನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.

ಆಗ ಜೆಡಿಎಸ್ನ ಮರಿತಿಬ್ಬೇಗೌಡ ಅವರು, ಸದಸ್ಯರು ಹೇಗೆ ಮಾತನಾಡಬೇಕೆಂಬ ಸಾಮಾನ್ಯ ಜ್ಞಾನ ಇರಬೇಕಲ್ಲವೇ? ಪಾಕಿಸ್ತಾನ, ಅದು ಇದು ಎಂದು ಬೆಂಕಿ ಹಚ್ಚಿದವರು ಯಾರು ಎಂದು ತೇಜಸ್ವಿನಿ ರಮೇಶ್ ಮತ್ತು ಬಿಜೆಪಿ ವಿರುದ್ಧ ಕಿಡಿಕಾರಿದರು. ಬಳಿಕ ಸಭಾಪತಿಗಳ ಮಧ್ಯಪ್ರವೇಶದಿಂದ ಸದನ ತಿಳಿಗೊಂಡಿತು. ನಂತರ ವಿಧೇಯಕದ ಮೇಲೆ ಪಿ.ಎಚ್.ಪೂಜಾರ್, ಎಚ್.ವಿಶ್ವನಾಥ್ ಮತ್ತಿತರರು ಮಾತನಾಡಿದರು.

ಸದಸ್ಯರು ನೀಡಿರುವ ಸಲಹೆಗಳನ್ನು ಪರಿಗಣಿಸಿಯೇ ವಿಧೇಯಕವನ್ನು ಜಾರಿಗೆ ಮಾಡಿದ್ದೇವೆ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ಬಳಿಕ ಸಭಾಪತಿ ಹೊರಟ್ಟಿ ಅವರು ಧ್ವನಿ ಮತದ ಮೂಲಕ ವಿಧೇಯಕವನ್ನು ಅಂಗೀಕರಿಸಿದರು. ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಕಾಯಿದೆಯನ್ನು ಡಿಸೆಂಬರ್ 12ರಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ವಿಧಾನಸಭೆಯಲ್ಲಿ ಮಂಡಿಸಿದ್ದರು.

RELATED ARTICLES

Latest News