ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮದ್ದೂರು, ಅ.19- ಬೈಕ್‍ನಲ್ಲಿ ಬಂದ ಐವರು ದುಷ್ಕರ್ಮಿಗಳ ಗುಂಪು ಹಾಡಹಗಲೆ ಯುವಕನೋಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಘಟನೆಯಿಂದಾಗಿ ಕೆ.ಎಂ.ದೊಡ್ಡಿಯಲ್ಲಿ ಬಿಗುವಿನ ಸ್ಥಿತಿ ಉಂಟಾಗಿದ್ದು, ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ತಾಲೂಕಿನ ಮೆಲ್ಲಹಳ್ಳಿ ಗ್ರಾಮದ ಚೆಲುವರಾಜು ಅವರ ಪುತ್ರ ನವೀನ್ (30) ಕೊಲೆಯಾದ ಯುವಕ. ದಾಳಿಯಿಂದ ತೀವ್ರಗಾಯಗೊಂಡಿದ್ದ ನವೀನ್‍ನನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಆದರೆ ನವೀನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಲೆಯಾದ ನವೀನ್ ಕೆ.ಎಂ.ದೊಡ್ಡಿ ಹಲಗೂರು ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. ದ್ವೇಷದ ಹಿನ್ನೆಲೆಯಲ್ಲಿ ಬೈಕ್‍ನಲ್ಲಿ ಬಂದ ಐದು ಮಂದಿ ಬೆಳಿಗ್ಗೆ 11ಗಂಟೆಗೆ ಸುಮಾರಿಗೆ ಹೋಟೆಲ್‍ಗೆ ನುಗ್ಗಿ ನವೀನ್ ಮೇಲೆ ಏಕಾಏಕಿ ದಾಳಿ ಮಾಡಿದ್ದಾರೆ.

ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಲಾಂಗ್‍ನಿಂದ ಆತನ ಕುತ್ತಿಗೆ, ಹೊಟ್ಟೆಗೆ ಹೊಡೆದು ಪರಾರಿಯಾಗಿದ್ದಾರೆ. ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments