ನೆಲಮಂಗಲದಲ್ಲಿ ಮಿತಿಮೀರಿದ ಮೀಟರ್ ಬಡ್ಡಿ ದಂಧೆಕೋರರ ಹಾವಳಿ…!

ಈ ಸುದ್ದಿಯನ್ನು ಶೇರ್ ಮಾಡಿ

ನೆಲಮಂಗಲ, ಜೂ.28- ಬೆತ್ತನಗೆರೆ ರಕ್ತ ಚರಿತ್ರೆಯಿಂದ ಇಡೀ ರಾಜ್ಯದ ಕ್ರೈಂ ಲೋಕವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದ್ದ ನೆಲಮಂಗಲ ಮತ್ತೆ ಸುದ್ದಿಯಾಗತೊಡಗಿದೆ. ಬೆತ್ತನಗೆರೆ ಸೀನ ಮತ್ತು ಶಂಕರನ ಜಿದ್ದಾಜಿದ್ದಿಗೆ ಅಂತ್ಯ ಬೀಳುತ್ತಿದ್ದಂತೆ ಇಲ್ಲಿ ಎಲ್ಲವೂ ತಣ್ಣಗಾಯಿತು ಎಂದು ಜನ ತಿಳಿದುಕೊಂಡಿದ್ದರು. ಆದರೆ, ಬೆಂಗಳೂರು ಬಿಲದ ಅಂಚಿನಲ್ಲೇ ಇರೋ ನೆಲಮಂಗಲದಲ್ಲಿ ಇದೀಗ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಮಿತಿಮೀರಿದೆ.

ಯಾವಾಗ ಬೆಂಗಳೂರು ಅಂಚಿನ ಭೂಮಿಗೆ ಬಂಗಾರದ ಬೆಲೆ ಬಂತೋ ಆಗಲೇ ಇಲ್ಲಿ ರಿಯಲ್ ಎಸ್ಟೇಟ್ ಬೆಳೆಯತೊಡಗಿತ್ತು. ಇದರಲ್ಲಿ ಹಣ ತೊಡಗಿಸಿ ವ್ಯವಹಾರ ಕೈಕೊಟ್ಟವರನ್ನೇ ಟಾರ್ಗೆಟ್ ಮಾಡಿಕೊಂಡು ಬಡ್ಡಿ ದಂಧೆಕೋರರು ಕೋಟಿ ಕೋಟಿ ಕೊಟ್ಟು ನಂತರ ಅಸಲು, ಚಕ್ರಬಡ್ಡಿ ಕಟ್ಟದ ಜನರ ಆಸ್ತಿಯನ್ನೇ ಬರೆಸಿಕೊಂಡು ಅಟ್ಟಹಾಸ ಮೆರೆಯುತ್ತಿದ್ದಾರೆ.

ಇಂತಹ ಬಡ್ಡಿದಂಧೆಕೋರರಿಗೆ ಕೆಲವು ಪ್ರಭಾವಿ ವ್ಯಕ್ತಿಗಳ ಕೃಪೆ ಇದೆ. ಕೆಲವರ ಜೀವನವನ್ನೇ ಅಂತ್ಯಗೊಳಿಸುವಂತಹ ಮೀಟರ್‍ಬಡ್ಡಿದಂಧೆಯ ಕರಾಳ ಮುಖ ಇತ್ತೀಚೆಗೆ ಬಯಲಾಗಿದೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಮೀಟರ್ ಬಡ್ಡಿ ವಸೂಲಿ ಮಾಡಲು ಪಿಸ್ತೂಲ್ ಹಣೆಗಿಟ್ಟು ವ್ಯಕ್ತಿಯೊಬ್ಬರನ್ನು ಬೆದರಿಸಿದ ಪ್ರಕರಣ ದಾಖಲಾಗಿದೆ. ಆದರೂ ಆರೋಪಿ ಮಾತ್ರ ವಿದೇಶಕ್ಕೆ ಹಾರಿ ಸೇಫ್ ಆಗಿದ್ದಾನೆ.

ಇದು ಸಾವಿರ.. ಲಕ್ಷ.. ಒಂದು ಕೋಟಿಯ ಮೀಟರ್ ಬಡ್ಡಿ ವ್ಯವಹಾರ ಅಲ್ಲ. ಬರೋಬ್ಬರಿ ಹತ್ತಾರು ಕೋಟಿ ರೂಪಾಯಿಗಳ ಮಹಾನ್ ದಂಧೆ. ಇಂಥಾ ಮೀಟರ್ ಬಡ್ಡಿ ಲೋಕದ ಸರದಾರ ಚನ್ನನಾಯಕನಹಳ್ಳಿಯ ನಾಗೇಶ್. ಹಲವು ವರ್ಷಗಳಿಂದ ಬಡ್ಡಿದಂಧೆ ನಡೆಸುತ್ತಿರುವ ನಾಗೇಶ್ ಶೇ.6ರಿಂದ ಶೇ.8ರಷ್ಟು ಬಡ್ಡಿಗೆ ಸಾಲ ಕೊಡೋದು. ಸಾಲ ಕಟ್ಟಲು ವಿಫಲರಾದ ವ್ಯಕ್ತಿಗಳನ್ನು ಗನ್‍ಪಾಯಿಂಟ್‍ನಲ್ಲಿ ಬೆದರಿಸಿ ಅವರ ಜಮೀನು ಬರೆಸಿಕೊಳ್ಳುವುದನ್ನೇ ಕಾಯಕ ಮಾಡಿಕೊಂಡಿದ್ದ.

ಇತ್ತೀಚೆಗೆ ವಾಜರಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್, ನಾಗೇಶನಿಂದ 95 ಲಕ್ಷ ಬಡ್ಡಿಗೆ ಹಣ ಪಡೆದಿದ್ದ. ಅದಕ್ಕೆ ಪ್ರತಿಯಾಗಿ ಬೆತ್ತನಗೆರೆ ಬಳಿಯ 3 ಕೋಟಿ ಮËಲ್ಯದ ಭೂಮಿಯನ್ನು ಕ್ರಯ ಮಾಡಿಕೊಟ್ಟಿದ್ದರು. 65 ಲಕ್ಷ ಅಸಲಿಗೆ ವಾಜರಹಳ್ಳಿ ಬಳಿಯ ಎರಡು ಸೈಟ್‍ಗಳನ್ನು ಮಾರಿ ಹಣ ನೀಡಿದ್ದರು. ಪಡೆದ 95 ಲಕ್ಷಕ್ಕೆ ಮಂಜುನಾಥ್ 10 ಕೋಟಿಯಷ್ಟು ಬಡ್ಡಿ ಕಟ್ಟಿದ್ದರಂತೆ.

ಆದರೂ ಇನ್ನೂ 30 ಲಕ್ಷ ಹಣ ನೀಡಬೇಕು ಎಂದು ಮಂಜುನಾಥ್ ಧಮಕಿ ಹಾಕಿದ್ದ. ಮಾತ್ರವಲ್ಲ, ಕಳೆದ ಮೇ 15ರಂದು ತನ್ನ ಪಟಾಲಂ ಜತೆ ಮನೆಗೆ ಬಂದು ಬಾಕಿ ಹಣ ಕೊಡುವಂತೆ ನಾಗೇಶ್ ಬೆದರಿಸಿದ್ದಾನೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಗನ್‍ಪಾಯಿಂಟ್‍ನಿಂದ ಬೆದರಿಸಿ ನನ್ನ ಪತ್ನಿಯ 20 ಖಾಲಿ ಚೆಕ್‍ಗಳು ಹಾಗೂ 10 ಇ-ಸ್ಟ್ಯಾಂಪ್ ಪೇಪರ್‍ಗಳ ಮೇಲೆ ಬಲವಂತವಾಗಿ ಸಹಿ ಹಾಕಿಸಿಕೊಂಡಿದ್ದರು. ಮೀಟರ್ ಬಡ್ಡಿದಂಧೆಯ ಈ ಕರಾಳ ಮುಖದಿಂದ ಬೆದರಿದ ಮಂಜುನಾಥ್ ಧೈರ್ಯ ಮಾಡಿ ನೆಲಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ.

ಖಾಕಿ ಮಾಮ ಎಂಟ್ರಿ..!
ನೆಲಮಂಗಲದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಮೀಟರ್ ಬಡ್ಡಿ ದಂಧೆಯ ಕರಾಳ ಮುಖ ಬಯಲಾಗುತ್ತಿದ್ದಂತೆ ಪ್ರಕರಣದಲ್ಲಿ ಎಂಟ್ರಿ ಪಡೆದ ಹಿರಿಯ ಪೆÇಲೀಸ್ ಅಧಿಕಾರಿಯೊಬ್ಬರು ನಾಗೇಶನ ಬೆಂಬಲಕ್ಕೆ ನಿಂತಿದ್ದಾರೆ.  ಸ್ವತಃ ನಾಗೇಶನ ಸಂಬಂಧಿಕರೇ ಆದ ಹಿರಿಯ ಪೊಲೀಸ್ ಅಧಿಕಾರಿ ನೇರ ನೆಲಮಂಗಲ ಠಾಣೆಗೆ ಬಂದು ಸ್ಥಳೀಯ ರಾಜಕಾರಣಿಯೊಬ್ಬರ ಮೂಲಕ ರಾಜಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು.

ಪರಸ್ಪರ ಮುಚ್ಚಳಿಕೆ ಪತ್ರ ಬರೆಸಿಕೊಂಡ ನೆಲಮಂಗಲ ಪೊಲೀಸರು ನಾಗೇಶನನ್ನು ಬಿಡುಗಡೆ ಮಾಡಿದ್ದರು. ಅಲ್ಲಿಂದ ಶುರುವಾಯ್ತು ನಾಗೇಶ್ ಆಟ. ಸೀದಾ ಮಲೇಷ್ಯಾಕ್ಕೆ ಹಾರಿದ್ದ ನಾಗೇಶ್. ಇದೀಗ ಅಲ್ಲಿಂದಲೇ ಮಂಜುನಾಥ್‍ನ ನಂಬರ್‍ಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ.

ಈಗಾಗಲೇ ಮೃತ್ಯುಂಜಯ ಎಂಬುವವರು ಸೇರಿದಂತೆ ಹಲವಾರು ವ್ಯಕ್ತಿಗಳಿಗೆ ಬೆದರಿಕೆ ಹಾಕಿ ನೆಲಮಂಗಲ ಸುತ್ತಮುತ್ತಲಲ್ಲೇ ನೂರು ಕೋಟಿಗೂ ಹೆಚ್ಚು ಮೀಟರ್ ಬಡ್ಡಿದಂಧೆ ನಡೆಸಿರುವುದು ಬೆಳಕಿಗೆ ಬಂದಿದೆ. ತಾನು ಬಡ್ಡಿ ನೀಡಿದ ವ್ಯಕ್ತಿಗಳನ್ನು ಬೆದರಿಸಲು ನಾಗೇಶ್ ಬಳಸುವ ಪಿಸ್ತೂಲ್‍ಗೂ ಲೈಸೆನ್ಸ್ ಮಾಡಿಸಿಕೊಂಡಿಲ್ಲದಿರುವುದು ವಿಶೇಷ.

ಒಂದೆಡೆ ಅಕ್ರಮ ಶಸ್ತ್ರಾಸ್ತ್ರ ಬಳಕೆ ಕಾಯ್ದೆ, ಮತ್ತೊಂದೆಡೆ ಅಕ್ರಮ ಹಣ ವಹಿವಾಟು ಪ್ರತಿಬಂಧಕ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಬಹುದಾದರೂ ಪೊಲೀಸರು ಮಾತ್ರ ಕೆಲವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ನಾಗೇಶನಿಗೆ ಎಡೆಮುರಿ ಕಟ್ಟದಿರುವುದು ವಿಪರ್ಯಾಸವೇ ಸರಿ.

ಹಲವರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಮೀಟರ್ ಬಡ್ಡಿ ಮಾಫಿಯಾವನ್ನು ಪೆಪೊಲೀಸರು ಮಟ್ಟ ಹಾಕದಿದ್ದರೆ ಮತ್ತೊಮ್ಮೆ ನೆಲಮಂಗಲದಲ್ಲಿ ರಕ್ತ ಚರಿತ್ರೆ ಆರಂಭವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

Facebook Comments