2 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ವಾಪಾಸ್, ಬಿಜೆಪಿ ಖುಷ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.21- ಮುಖಂಡರ ನಿರಂತರ ಪ್ರಯತ್ನದ ಫಲವಾಗಿ ಎರಡು ಕಡೆ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರವನ್ನು ಹಿಂಪಡೆಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ಮತ್ತು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆಯುವ ಮೂಲಕ ಫಲಿತಾಂಶಕ್ಕೂ ಮುನ್ನವೇ ದಳಪತಿಗಳಿಗೆ ಮರ್ಮಾಘಾತವಾಗಿದೆ.

ಹಿರೇಕೆರೂರು ರಟ್ಟೆಹಳ್ಳಿಯ ಕಬ್ಬಿಣ ಕಂತಿಮಠದ ಶ್ರೀಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಮಠಾಧೀಶರು, ಹಿರಿಯರು, ಸಮಾಜದ ಮುಖಂಡರು ಹಾಗೂ ಭಕ್ತರ ಒತ್ತಡಕ್ಕೆ ಮಣಿದು ನಾಮಪತ್ರ ವಾಪಸ್ ಪಡೆದಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ತಾಲ್ಲೂಕು ಕಚೇರಿಗೆ ಆಗಮಿಸಿದ ಶಿವಾಚಾರ್ಯ ಶಿವಲಿಂಗ ಮಹಾಸ್ವಾಮಿ ಅವರು ಅಧಿಕೃತವಾಗಿ ನಾಮಪತ್ರವನ್ನು ಹಿಂಪಡೆದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಹಾಗೂ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ನಿರಂತರವಾಗಿ ಸ್ವಾಮೀಜಿಗಳ ಜೊತೆ ಸಂಪರ್ಕದಲ್ಲಿದ್ದರು. ಅಲ್ಲದೆ ರಂಭಾಪುರಿ ಮಠದ ಶ್ರೀಗಳು ಕೂಡ ನಾಮಪತ್ರ ವಾಪಸ್ ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀಮಠದ ಅಭಿವೃದ್ದಿಗೆ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡುವುದಾಗಿ ರಾಘವೇಂದ್ರ ಭರವಸೆ ಕೊಟ್ಟ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರು ನಾಮಪತ್ರ ಹಿಂಪಡೆದರು.

ಜಿದ್ದಾಜಿದ್ದಿನ ಕಣವಾಗಿರುವ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಗುರುದಾಶ್ಯಾಳ್ ಕೊನೆಗೂ ನಾಮಪತ್ರ ಹಿಂಪಡೆಯಲು ಸಮ್ಮತಿಸಿದ್ದಾರೆ.
ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿಯವರ ಪರಮಾಪ್ತರಾಗಿದ್ದ ಗುರು ದಾಶ್ಯಾಳ್ ಮೂರು ದಿನಗಳ ಹಿಂದೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ದಿಢೀರನೇ ನಾಪತ್ತೆಯಾಗಿದ್ದರು. ನಾಮಪತ್ರ ಹಿಂಪಡೆಯುವಂತೆ ಬಿಜೆಪಿಯವರು ಒತ್ತಡ ಹಾಕಬಹುದೆಂಬ ಹಿನ್ನೆಲೆಯಲ್ಲಿ ಯಾರ ಕೈಗೂ ಸಿಗದಂತೆ ಗೌಪ್ಯ ಸ್ಥಳದಲ್ಲಿದ್ದರು.

ನಿನ್ನೆ ದೂರವಾಣಿ ಮೂಲಕ ಪತ್ತೆಹಚ್ಚಿದ ಲಕ್ಷ್ಮಣ್ ಸವದಿ ನಾಮಪತ್ರ ಹಿಂಪಡೆಯುವಂತೆ ಮನವರಿಕೆ ಮಾಡಿದರು. ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು. ನೀವು ಕಣದಲ್ಲೇ ಉಳಿದರೆ ಅಧಿಕೃತ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಹಿನ್ನಡೆಯಾಗಲಿದೆ. ಒಂದೊಂದು ಸ್ಥಾನವೂ ಮುಖ್ಯವಾಗಿರುವುದರಿಂದ ನಾಮಪತ್ರ ಹಿಂಪಡೆಯಲೇಬೇಕೆಂದು ಸವದಿ ಪಟ್ಟು ಹಿಡಿದರು.

ಕೊನೆಗೆ ಒಲ್ಲದ ಮನಸ್ಸಿನಿಂದಲೇ ಗುರುದಾಶ್ಯಾಳ್ ನಾಮಪತ್ರವನ್ನು ಹಿಂಪಡೆದಿದ್ದಾರೆ. ಇದರಿಂದ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ 12 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದಂತಾಗಿದೆ.  ಹೊಸಕೋಟೆಯಲ್ಲಿ ಪಕ್ಷದ ಅಭ್ಯರ್ಥಿ ಶರತ್ ಬಚ್ಚೇಗೌಡರಿಗೆ ಜೆಡಿಎಸ್ ಬೆಂಬಲ ಸೂಚಿಸಿದೆ. ಹಿರೇಕೆರೂರು ಮತ್ತು ಅಥಣಿಯಲ್ಲಿ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದಿರುವುದು ಜೆಡಿಎಸ್‍ಗೆ ಭಾರೀ ಹಿನ್ನಡೆ ಉಂಟು ಮಾಡಿದೆ.

Facebook Comments