ಸಾರಿಗೆ ನೌಕರರ ಮುಷ್ಕರ 2ನೇ ದಿನಕ್ಕೆ, ಬಸ್ ಗಳಿಲ್ಲದೆ ಪ್ರಯಾಣಿಕರ ಪರದಾಟ
ಬೆಂಗಳೂರು, ಏ.8- ಸರ್ಕಾರದ ಕಠಿಣ ಕ್ರಮದ ಎಚ್ಚರಿಕೆ ನಡುವೆಯೂ ಸಾರಿಗೆ ನೌಕರರ ಮುಷ್ಕರ ಎರಡನೆ ದಿನಕ್ಕೆ ಕಾಲಿಟ್ಟಿದೆ. ಪಟ್ಟು ಸಡಿಲಿಸದ ನೌಕರರು, ಬೇಡಿಕೆಗಳಿಗೆ ಮಣಿಯದ ಸರ್ಕಾರದ ನಡುವೆ ಪ್ರಯಾಣಿಕರ ಗೋಳು ಹೇಳತೀರದಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಖಾಸಗಿ ಬಸ್ಗಳ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸರ್ಕಾರ ಹೇಳುತ್ತಲೇ ಇದ್ದರೂ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಎಲ್ಲೋ ನಗರದ ಹೊರಭಾಗದಲ್ಲಿ ಬಸ್ಗಳು ಸಂಚರಿಸುತ್ತಿದ್ದು, ಬಸ್ ಇಲ್ಲದೆ ನಗರದೊಳಗಿನ ಜನ ಹೈರಾಣಾಗಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಸಾರಿಗೆ ನೌಕರರು ತಮ್ಮ ಪ್ರತಿಭಟನೆ ಮುಂದುವರಿಸಿದ ಪರಿಣಾಮ ತರಬೇತಿ ಸಿಬ್ಬಂದಿಗಳಿಂದ ಬಸ್ ಓಡಿಸಲು ನಿರ್ಧರಿಸಿರುವ ಇಲಾಖೆ ತರಬೇತಿ ಸಿಬ್ಬಂದಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಮುಷ್ಕರದ ನಡುವೆಯೂ ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ 134 ಬಸ್ಗಳು ಹೊಯ್ಸಳ ರಕ್ಷಣೆಯಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸಿದವು. ಆದರೂ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬೆಂಗಳೂರು ನಗರದಲ್ಲಿ ಖಾಸಗಿ ಬಸ್ಗಳು, ಮಿನಿ ಬಸ್ಗಳು, ಟೆಂಫೋ ಟ್ರಾವೆಲ್ಸ್ ಹಲವೆಡೆ ಸಂಚರಿಸಿ ಸಾರ್ವಜನಿಕರಿಗೆ ಸೇವೆ ಒದಗಿಸಿದವಾದರೂ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದ ಆರೋಪ ಕೇಳಿಬಂತು.
ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೋಲಾರ ಮತ್ತು ಶಿವಮೊಗ್ಗ ಸೇರಿದಂತೆ ವಿವಿಧೆಡೆ ಸಂಚರಿಸಿದ ಖಾಸಗಿ ಬಸ್ಗಳು ಕೂಡ ಸಾರ್ವಜನಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದುದು ಕಂಡುಬಂತು. ಬಿಎಂಟಿಸಿ ಬಸ್ ಸಂಚರಿಸದ ಹಿನ್ನೆಲೆಯಲ್ಲಿ ಆಟೋ, ಟ್ಯಾಕ್ಸಿಗಳಿಗೆ ಹಬ್ಬದ ವಾತಾವರಣ ನಿರ್ಮಾಣವಾದಂತಿತ್ತು.
ಇವರು ಕೂಡ ಸಾರ್ವಜನಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದರು. ಖಾಸಗಿ ಬಸ್ ಮಾಲೀಕರು ನಮಗೆ ಶಾಶ್ವತವಾಗಿ ಬಸ್ ಓಡಿಸಲು ಅನುಮತಿ ನೀಡಿ. ನಗರದಲ್ಲೂ ಕೂಡ ಶಾಶ್ವತವಾಗಿ ಬಸ್ ಓಡಿಸಲು ಪರವಾನಗಿ ನೀಡಿ ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಸದ್ಯ ಸರ್ಕಾರ ಮುಷ್ಕರ ನಿರತರ ಬೇಡಿಕೆಗಳನ್ನು ಈಡೇರಿಸಲು ಮೇ ತಿಂಗಳ ವರೆಗೆ ಕಾಲಾವಕಾಶ ಕೇಳಿದೆಯಾದರೂ ಮುಷ್ಕರ ನಿರತರು ಸರ್ಕಾರದ ಮನವಿಗೆ ಸ್ಪಂದಿಸುತ್ತಿಲ್ಲ. ತಮ್ಮ ಮುಷ್ಕರವನ್ನು ಮುಂದುವರಿಸಿರುವ ಪರಿಣಾಮ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.
ಖಾಸಗಿ ಬಸ್, ಮಿನಿ ಬಸ್, ಟೆಂಫೋಗಳಿಗೆ ತಾತ್ಕಾಲಿಕ ಪರ್ಮಿಟ್ ನೀಡಿದೆ. ಇಂದು ಕೂಡ ಮೆಜಸ್ಟಿಕ್, ಕೆಂಪೇಗೌಡ ಸ್ಯಾಟಲೈಟ್, ಯಶವಂತಪುರ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಖಾಸಗಿ ಬಸ್ಗಳ ಕಾರುಬಾರು ಕಂಡುಬಂತು.
ಸರ್ಕಾರ ನೌಕರರಿಗೆ ಹಲವಾರು ಬಾರಿ ಮನವಿ ಮಾಡಿದರೂ ನೌಕರರು ತಮ್ಮ ಮುಷ್ಕರ ಮುಂದುವರಿಸಿದ್ದಾರೆ. ಅತ್ತ ವಿಜಯಪುರದ ಸಾರಿಗೆ ನೌಕರರ ಕ್ವಾಟ್ರರ್ಸ್ಗಳ ಮೇಲೆ ನೋಟಿಸ್ ಅಂಟಿಸಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚನೆ ನೀಡಿ, ಹಾಜರಾಗದಿದ್ದರೆ ಕ್ವಾಟ್ರರ್ಸ್ ಖಾಲಿ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. ರಾಯಚೂರು, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಮೈಸೂರು, ಯಾದಗಿರಿ, ಕೊಪ್ಪಳ, ಬೀದರ್ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲೂ ಮುಷ್ಕರ ಮುಂದುವರಿದ ಪರಿಣಾಮ ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲವಾಗಿತ್ತು. ಬಹುತೇಕ ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋದರು.