ಬ್ರೇಕಿಂಗ್ : ಕೊರೋನಾ ಎಫೆಕ್ಟ್, ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ರದ್ದು..!

ಈ ಸುದ್ದಿಯನ್ನು ಶೇರ್ ಮಾಡಿ

– ರವೀಂದ್ರ.ವೈ.ಎಸ್
ಬೆಂಗಳೂರು,ಅ.16-ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಹಾಗೂ ಬಹುತೇಕ ಕಡೆ ಮತ್ತೆ ಪ್ರವಾಹ ಉಂಟಾಗಿರುವ ಕಾರಣ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಿರುವಾಗ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಸಕ್ತ ವರ್ಷ ರದ್ದುಪಡಿಸಿ 2021ರ ನವೆಂಬರ್ 1ಕ್ಕೆ ಎರಡು ವರ್ಷದ ಪ್ರಶಸ್ತಿಗಳನ್ನು ಏಕಕಾಲಕ್ಕೆ ವಿತರಿಸಬೇಕೆಂಬ ತೀರ್ಮಾನಕ್ಕೆ ಬರಲಾಗಿದೆ.

ಈ ಸಂಬಂಧ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಸದ್ಯದಲ್ಲೇ ಅಕೃತವಾಗಿ ಪ್ರಕಟಿಸಲಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಪ್ರತಿ ವರ್ಷ ನವೆಂಬರ್ 1ರಂದು ಸಾಹಿತ್ಯ, ಸಂಸ್ಕøತಿ, ವೈದ್ಯಕೀಯ, ವಿಜ್ಞಾನ, ಕ್ರೀಡೆ, ಚಲನಚಿತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವುದು ಸಂಪ್ರದಾಯವಾಗಿತ್ತು.

ಆದರೆ ಈ ಬಾರಿ ರಾಜ್ಯದಲ್ಲಿ ಕೋವಿಡ್ 19 ಹೆಚ್ಚುತ್ತಿರುವುದು ಒಂದೆಡೆಯಾದರೆ ಇದರ ಜೊತೆಗೆ ಕಲ್ಯಾಣಕರ್ನಾಟಕ, ಮುಂಬೈ ಕರ್ನಾಟಕ, ಕರಾವಳಿ, ಮಧ್ಯಕರ್ನಾಟಕ, ಮಲೆನಾಡು ಮತ್ತಿತರ ಭಾಗಗಳಲ್ಲಿ ಭಾರೀ ಪ್ರವಾಹ ಉಂಟಾಗಿ ಜನಜೀವನ ಏರುಪೇರಾಗಿದೆ.

ಮಾರ್ಚ್ ತಿಂಗಳ ನಂತರ ರಾಜ್ಯದಲ್ಲಿ ಕೊರೊನಾ ಅಕೃತವಾಗಿ ಬಂದ ನಂತರ ಬಹುತೇಕ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು, ಧಾರ್ಮಿಕ ಆಚರಣೆಗಳು, ಹಬ್ಬಹರಿದಿನಗಳು ಎಲ್ಲವನ್ನೂ ರದ್ದುಪಡಿಸಲಾಗಿದೆ. ಹೀಗಾಗಿ ರಾಜ್ಯೋತ್ಸವ ಸಮಾರಂಭವನ್ನು ಸರ್ಕಾರದ ವತಿಯಿಂದ ಸರಳವಾಗಿ ಆಚರಿಸಿ ಪ್ರಶಸ್ತಿಗಳನ್ನು ವಿತರಿಸದಿರಲು ಇಲಾಖೆ ತೀರ್ಮಾನಿಸಿದೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.

ಅಲ್ಲದೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಸಾರ್ವಜನಿಕ ವಲಯದಿಂದ ಆಹ್ವಾನಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಏಕೆಂದರೆ ಕೊರೊನಾದಿಂದ ರಾಜ್ಯ ತತ್ತರಿಸಿದೆ.

ಇಂತಹ ಸಂದರ್ಭದಲ್ಲಿ ಯಾವ ಪುರುಷಾರ್ಥಕ್ಕಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಸಾಧಕರಿಗೆ ನೀಡಬೇಕೆಂಬ ಮೂಲಭೂತ ಪ್ರಶ್ನೆ ಎದುರಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

# ಭರಾಪೂರ ಅರ್ಜಿ:
ಇನ್ನು ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುಮಾರು ಎರಡೂ ಸಾವಿರಕ್ಕೂ ಹೆಚ್ಚು ಅರ್ಜಿಗಳು ಇಲಾಖೆಗೆ ಸಲ್ಲಿಕೆಯಾಗಿದ್ದವು ಎಂದು ತಿಳಿದುಬಂದಿದೆ.  ಈ ಹಿಂದೆ ಬೇಕಾಬಿಟ್ಟಿಯಾಗಿ 200, 250, 275ರವರೆಗೂ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಿಸಿ ಸರ್ಕಾರ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿತ್ತು.

ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ನೀತಿಯೊಂದನ್ನು ಜಾರಿ ಮಾಡಿದ್ದರು.  ರಾಜ್ಯೋತ್ಸವದ ಆಚರಣೆಗೆ ಪೂರಕವಾಗಿ ಎಷ್ಟನೇ ವರ್ಷದ ರಾಜ್ಯೋತ್ಸವದ ಆಚರಣೆಯಾಗಿರುತ್ತದೆಯೋ ಅಷ್ಟೇ ಸಂಖ್ಯೆಯ ಪ್ರಶಸ್ತಿಯನ್ನು ನೀಡಬೇಕೆಂಬ ನಿಯಮವನ್ನು ಜಾರಿಗೆ ತಂದಿದ್ದರು.

ಅಲ್ಲದೆ ಪ್ರಶಸ್ತಿಗಳನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡುವುದು ಹಾಗೂ ಸರ್ಕಾರದ ಹಸ್ತಕ್ಷೇಪವಿಲ್ಲದಂತೆ ಸಮಿತಿ ರಚನೆ ಮಾಡಿದ್ದರು. ಈಗ ಸರ್ಕಾರ ಈ ನಿಯಮವನ್ನು ಪಾಲನೆ ಮಾಡಿಯೇ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸುತ್ತದೆ.

Facebook Comments

Sri Raghav

Admin