ಬೆಂಗಳೂರಲ್ಲಿ ರೌಡಿಯೊಬ್ಬನ ಬರ್ಬರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.27- ರೌಡಿಯೊಬ್ಬನನ್ನು ಕೊಲೆ ಮಾಡಿ ಆತನ ಸ್ನೇಹಿತನ ಕೊಲೆಗೆ ಯತ್ನಿಸಿರುವ ಘಟನೆ ರಾತ್ರಿ ಚಂದ್ರಾ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆಜೆ ನಗರದ ನಿವಾಸಿ ಸೈಯದ್ ವಸೀಂ ಅಲಿಯಾಸ್ ಬೋಡ್ಕಾ ವಸೀಂ (32) ಕೊಲೆಯಾದ ರೌಡಿ. ಬ್ಯಾಟರಾಯನಪುರ, ಜೆಜೆ ನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಈತನ ಹೆಸರಿದೆ. ಸ್ನೇಹಿತ ಅಬ್ದುಲ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಬ್ದುಲ್ ಬಟ್ಟೆ ವ್ಯಾಪಾರಿ. ಇವರ ಸ್ನೇಹಿತ ಅರ್ಬಾಜ್‍ಖಾನ್ ಹಾಗೂ ಸೈಫುಲ್ಲಾ ನಡುವೆ ಸಿಗರೇಟ್ ಸೇದುವ ವಿಚಾರವಾಗಿ ಮೊನ್ನೆ ಜಗಳವಾಗಿತ್ತು. ಈ ವಿಷಯ ಅಬ್ದುಲ್‍ಗೆ ತಿಳಿದು ತನ್ನ ಸ್ನೇಹಿತ ಜುಬೇರ್‍ನೊಂದಿಗೆ ಬೋಡ್ಕಾ ವಸೀಂ ಮನೆ ಬಳಿ ಬಂದು ಗಲಾಟೆಯ ವಿಚಾರ ತಿಳಿಸಿದ್ದಾರೆ. ಸೈಫುಲ್ಲಾ ಜತೆ ಮಾತನಾಡುವಂತೆ ವಾಸಿಂನನ್ನು ಗಂಗೊಂಡನಹಳ್ಳಿಯ ಮಸೀದಿ ಬಳಿ ರಾತ್ರಿ ಕರೆದುಕೊಂಡು ಅಬ್ದುಲ್ ಹೋಗಿದ್ದಾರೆ.

ಸೈಫುಲ್ಲಾ ಅಣ್ಣ ಶೇಖ್ ಬರ್ಕತ್‍ಗೆ ಫೋನ್ ಮಾಡಿ ಗಲಾಟೆ ವಿಷಯ ತಿಳಿಸಿ, ಈ ಬಗ್ಗೆ ಮಾತನಾಡಬೇಕು, ಮಸೀದಿ ಬಳಿ ಬರುವಂತೆ ತಿಳಿಸಿದ್ದಾರೆ. ರಾತ್ರಿ 11.15ರ ಸುಮಾರಿಗೆ ಶೇಕ್ ಬರ್ಕತ್ ತನ್ನ ಸಹೋದರ ಸೈಫುಲ್ಲಾ ಮತ್ತು ಸ್ನೇಹಿತರಾದ ನ್ಯಾಮತ್, ಜಿಯಾವುಲ್ಲಾ , ಜಿಯಾವುಲ್ಲಾ ಮೊಹಮ್ಮದ್ ಅಹಮದ್‍ನನ್ನು ಕರೆದುಕೊಂಡು ಮಸೀದಿ ಬಳಿ ಬಂದು ಇವರೊಂದಿಗೆ ಜಗಳವಾಡಿದ್ದಾರೆ.

ಈ ವೇಳೆ ಮಾತಿಗೆ ಮಾತು ಬೆಳೆದು ಜಗಳದ ಒಂದು ಹಂತದಲ್ಲಿ ಅವರು ಮಾರಕಾಸ್ತ್ರಗಳಿಂದ ವಸೀಂ ಹಾಗೂ ಅಬ್ದುಲ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ವಸೀಂನನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಅಬ್ದುಲ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Facebook Comments