ಯಡಿಯೂರಪ್ಪನವರೇ ನನ್ನ ರಾಜಕೀಯ ಗುರುಗಳು : ಎನ್.ಆರ್.ಸಂತೋಷ್

ಈ ಸುದ್ದಿಯನ್ನು ಶೇರ್ ಮಾಡಿ

ಒಂದು ಸಿದ್ಧಾಂತ, ಒಂದು ಗುರಿ, ಒಂದು ಕನಸು ಇವುಗಳು ಮನುಷ್ಯನ ದಿಕ್ಕನ್ನೇ ಬದಲಾಯಿಸಿ ಬಿಡುತ್ತವೆ. ನಿಸ್ವಾರ್ಥ ಸೇವೆಯ ದುಡಿಮೆ, ಅವಿರತ ಹೋರಾಟ, ತಾನು ನಂಬಿರುವ ತತ್ವ-ಸಿದ್ಧಾಂತಗಳಿಗಾಗಿ ಯಾವುದೇ ರಾಜಿ ಇಲ್ಲದೆ ತಮ್ಮ ಇಡೀ ಬದುಕನ್ನೇ ಒಂದು ಆದರ್ಶ ಜೀವನಕ್ಕಾಗಿ ಸಮರ್ಪಣೆ ಮಾಡುವ ವ್ಯಕ್ತಿ ಮುಂದೆ ದೊಡ್ಡ ನಾಯಕನಾಗುತ್ತಾನೆ.ಅಂತಹ ನಾಯಕನೇ ಹುಟ್ಟು ಹೋರಾಟಗಾರ ಬಿ.ಎಸ್.ಯಡಿಯೂರಪ್ಪ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸರ್ವರಿಗೂ ಸಮಪಾಲು, ಸಮಬಾಳು, ಸಾಮಾಜಿಕ ನ್ಯಾಯ ಎಂಬ ಮಾದರಿಯಲ್ಲಿ ಕಲ್ಯಾಣ ಕರ್ನಾಟಕದ ಕನಸಿನೊಂದಿಗೆ ಈ ಇಳಿ ವಯಸ್ಸಿನಲ್ಲೂ ಶಕ್ತಿ ಮೀರಿ ಕೆಲಸ ಮಾಡುತ್ತಿರುವ ಬಿಎಸ್ ವೈ ಬೆನ್ನ ಹಿಂದೆ ನಿಂತು ಕಳೆದ ಎಂಟು ವರ್ಷಗಳಿಂದ ಅವರು ಸೂಚನೆ ಕೊಟ್ಟ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಯಡಿಯೂರಪ್ಪನವರ ಮೆಚ್ಚುಗೆ ಪಡೆದುಕೊಂಡು ಭಾಜಪ ಪಕ್ಷದಲ್ಲಿ, ಸಂಘ ಪರಿವಾರದಲ್ಲಿ ಗಮನ ಸೆಳೆದ ಭಾಜಪದ ಶಿಸ್ತಿನ ಕಾರ್ಯಕರ್ತ, ಮೂಲತಃ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಿನ್ನೆಲೆಯಿಂದ ಬಂದ ಇವರು ತಮ್ಮ ಕಾಲೇಜು ದಿನಗಳಲ್ಲಿ ಅನೇಕ ಹೋರಾಟ ಮಾಡಿ ವಿದ್ಯಾರ್ಥಿ ಪರಿಷತ್ ನಲ್ಲಿ ತಮ್ಮದೆ ಆದ ಛಾಪು ಮೂಡಿಸಿದರು.

ರಾಷ್ಟ್ರ ಪ್ರೇಮ, ರಾಷ್ಟ್ರ ವಾದ,ದೇಶ ಭಕ್ತಿ ಹುಟ್ಟಿನಿಂದಲೇ ರಕ್ತಗತವಾಗಿ ಬಂದಿದ್ದ ಇವರಿಗೆ ಬಾಲ್ಯದಿಂದಲೂ ಬದುಕಿನಲ್ಲಿ ಒಂದು ನಿರ್ದಿಷ್ಟವಾದ ಸಂಕಲ್ಪವಿತ್ತು, ಗುರಿ ಇತ್ತು, ಕನಸಿತ್ತು. ಅದೇನೆಂದರೆ ತಾಯಿ ಭಾರತ ಮಾತೆಯ ಸೇವಕನಾಗಿ ದುಡಿಯಬೇಕು, ಹೊಸ ರಾಷ್ಟ್ರ ನಿರ್ಮಾಣ ಮಾಡುವುದರಲ್ಲಿ ನನ್ನದು ಸಹ ಈ ದೇಶಕ್ಕೆ ಅಳಿಲು ಸೇವೆ ಇರಬೇಕು ಎಂಬ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಪರಿಷತ್ ಸೇರಿಕೊಂಡು ಅನೇಕ ಜ್ವಲಂತ ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿ ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದವರು ಎನ್.ಆರ್. ಸಂತೋಷ್.

ತುಮಕೂರು ಜಿಲ್ಲಾಯ ತಿಪಟೂರು ತಾಲೂಕಿನ ನೊಣವಿನಕೆರೆ ಗ್ರಾಮದವರಾದ ಸಂತೋಷ್‍ರವರದ್ದು ರೈತ ಕುಟುಂಬ. ಬಾಲ್ಯದಿಂದಲೂ ತೋಟ, ಗದ್ದಾ, ಹಸು ಇವುಗಳ ಒಡನಾಟದಲ್ಲೇ ಬೆಳೆದ ಇವರು ಅತ್ಯಂತ ಭಾವನಾತ್ಮಕ ವ್ಯಕ್ತಿ. ವಿದ್ಯಾರ್ಥಿ ದೆಸೆಯಿಂದಲು ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ವೀರ ಸಾವರ್ಕರ್ ಹೀಗೆ ಅನೇಕ ಕ್ರಾಂತಿಕಾರಿ ಪುರುಷರ ಪುಸ್ತಕಗಳನ್ನು ಓದಿ ಪ್ರಭಾವಿತರಾದ ಇವರು ಪ್ರತಿ ಚುನಾವಣೆಯಲ್ಲಿ ರಾಷ್ಟ್ರ ವಾದದ ಸಿದ್ಧಾಂತದಲ್ಲಿ ಮತ ಕೇಳುವ, ದೀನ ದಯಾಳ್ ಉಪಾಧ್ಯಾಯ, ಶ್ಯಾಮ್ ಪ್ರಸಾದ್ ಮುಖರ್ಜಿ ಕಟ್ಟಿ ಬೆಳೆಸಿದ ಭಾಜಪದ ಕಡೆ ಆಕರ್ಷಿತರಾದರು.

ಪದವೀಧರರಾಗಿರುವ ಸಂತೋಷ್ ವಿದ್ಯಾರ್ಥಿ ದಿಸೆಯಿಂದಲೂ ಅತಿ ಹೆಚ್ಚು ಪುಸ್ತಕಗಳನ್ನು ಓದುವ, ಮನಸ್ಸಿಗೆ ತೋಚಿದ್ದು ಗೀಚುವ ಹವ್ಯಾಸ ಉಳ್ಳವರು. ಕಳೆದ ಎಂಟು ವರ್ಷಗಳ ಕಾಲ ಯಡಿಯೂರಪ್ಪನವರಿಗೆ ಬಲಗೈ ಬಂಟನಾಗಿ ಕೆಲಸ ಮಾಡಿ ಕರ್ನಾಟಕದ ಜನತೆಗೆ ಪರಿಚಯವಾಗಿ ಈ ಚಿಕ್ಕ ವಯಸ್ಸಿನಲ್ಲೇ ರಾಜಕೀಯದ ಅನೇಕ ಮಜಲುಗಳನ್ನು ತಿಳಿದಿರುವ ಎನ್.ಆರ್.ಸಂತೋಷ್ ಅವರು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿz್ದÁರೆ. ಅವರ ಜತೆ ಈ ಸಂಜೆ ಪತ್ರಿಕೆ ದೀಪಾವಳಿ ಹಬ್ಬದ ಪ್ರಯುಕ್ತ ಮುಕ್ತವಾಗಿ ವಿಶೇಷ ಸಂದರ್ಶನ ನಡೆಸಿದೆ…

#ನಿಮ್ಮ ರಾಜಕೀಯ ಪ್ರಾರಂಭದ ದಿನಗಳನ್ನು ಓದುಗರಿಗೆ ತಿಳಿಸುವಿರಾ..?
ಖಂಡಿತ ತಿಳಿಸುವೆ, ರಾಜಕಾರಣಿ ಆಗಬೇಕೆಂದು ನಾನು ಎಂದಿಗೂ ಬಯಸಿದವನಲ್ಲ, ಎಲ್ಲವೂ ಆಕಸ್ಮಿಕ. ನಾನು ಮೂಲತಃ ವಿದ್ಯಾರ್ಥಿ ಪರಿಷತ್‍ನಲ್ಲಿ ಕಾರ್ಯಕರ್ತನಾಗಿ ವಿದ್ಯಾರ್ಥಿ ದಿಸೆಯಿಂದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘ ಪರಿವಾರದವರ ಗಮನ ಸೆಳೆದಿದ್ದು ನನ್ನ ಅದೃಷ್ಟ..

ಮುಖ್ಯಮಂತ್ರಿ ಯಡಿಯೂರಪ್ಪನವರು ಸುಮಾರು ಎಂಟು ವರ್ಷಗಳ ಹಿಂದೆ ನನ್ನನ್ನು ಅವರ ಆಪ್ತ ಸಹಾಯಕನನ್ನಾಗಿ ನೇಮಕ ಮಾಡಿಕೊಂಡರು. ಅಲ್ಲಿಂದ ಶುರುವಾದ ನನ್ನ ರಾಜಕೀಯ ಪ್ರಯಾಣ ನನಗೆ ಗೊತ್ತಿದ್ದಾÉೂ… ಗೊತ್ತಿಲ್ಲದೆಯೋ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ. ಮುಂದೆ ಎಲ್ಲ ದೇವರ ಇಚ್ಛೆ. ಆದರೆ ಒಂದು ಮಾತಂತೂ ಸತ್ಯ. ನಾನೆಂದಿಗೂ ಭಾಜಪದ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತ.

ವಿದ್ಯಾರ್ಥಿ ಪರಿಷತ್‍ನಲ್ಲಿದ್ದಾಗ ನಿಮಗೆ ಈಗಲು ಖುಷಿ ಕೊಡುವ ಒಂದೆರಡು ಹೋರಾಟಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುವಿರಾ..?
ಸಮಸ್ಯೆಗಳ ವಿರುದ್ಧ ಅನೇಕ ಹೋರಾಟಗಳನ್ನು ನಮ್ಮ ಎಬಿವಿಪಿ ಮಾಡುತ್ತಲೇ ಬಂದಿದೆ. ನಾನು ವಿದ್ಯಾರ್ಥಿ ದೆಸೆಯಲ್ಲಿದ್ದಾಗ ತಿಪಟೂರಿನ ಐ.ಟಿ.ಐ ಕಾಲೇಜಿನ ವಿದ್ಯಾರ್ಥಿಗಳ ಬಳಿ ಹೆಚ್ಚಿನ ಅಂಕ ಕೊಡಿಸಿ ಪರೀಕ್ಷೆಯಲ್ಲಿ ಪಾಸ್ ಮಾಡಿಸುತ್ತೇವೆಂದು ಪ್ರತಿಯೊಬ್ಬರ ಬಳಿ ಹಣ ವಸೂಲಿ ಮಾಡಿಕೊಂಡು ನಾಪತ್ತೆಯಾಗಿದ್ದರು. ಅಕ್ರಮ ಎಸಗಿದವರ ವಿರುದ್ಧ ತಹಸೀಲ್ದಾರರ ಕಚೇರಿ ಮುಂದೆ ಮೋಸ ಹೋದ ಅಷ್ಟೂ ವಿದ್ಯಾರ್ಥಿಗಳನ್ನು ಸೇರಿಸಿ ಬೃಹತ್ ಪ್ರತಿಭಟನೆ ಮಾಡಿ ಕೊನೆಗೆ ಜಿಲ್ಲಾಧಿಕಾರಿಯವರ ಗಮನ ಸೆಳೆದು ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾದೆವು.

ತಿಪಟೂರಿನಲ್ಲಿದ್ದ ಸರ್ಕಾರಿ ಶಾಲೆಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು. ಪ್ರಾಂಶುಪಾಲರಾಗಿದ್ದ ಜಯದೇವಪ್ಪನವರ ಮಾರ್ಗದರ್ಶನದಲ್ಲಿ ಹೋರಾಟ ಮಾಡಿ ಕಬಳಿಕೆ ತಪ್ಪಿಸಿದೆವು. ಈಗ ಆ ಜಾಗದಲ್ಲಿ ಎದ್ದು ನಿಂತಿರುವ ಸರ್ಕಾರಿ ಕಾಲೇಜಿನ ಕಟ್ಟಡ ನೋಡಿದಾಗ ಮನಸ್ಸಿಗೆ ತುಂಬಾ ಖುಷಿ ಕೊಡುತ್ತದೆ.
ಅರಸೀಕೆರೆ ಕ್ಷೇತ್ರದಲ್ಲಿ ಬಹಳ ಕ್ರಿಯಾಶೀಲರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೀರಿ. ಈಗಾಗಲೇ ಮುಂದಿನ ಭಾಜಪ ಅಭ್ಯರ್ಥಿ ನೀವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದರ ಬಗ್ಗೆ ತಮ್ಮ ಅಭಿಪ್ರಾಯ..?
ನನ್ನದು ಮೂಲತಃ ತಿಪಟೂರು ಕ್ಷೇತ್ರ. ನನ್ನ ಧರ್ಮಪತ್ನಿ ಅರಸೀಕೆರೆ ಕ್ಷೇತ್ರಕ್ಕೆ ಸೇರಿದವರು. ನನಗೆ ತಿಪಟೂರು ಅರಸೀಕೆರೆ ಪರಿಚಯ ಹೊಸದಲ್ಲ. ಇವೆರಡೂ ನನಗೆ ಎರಡು ಕಣ್ಣುಗಳಿದ್ದಂತೆ. ಬಾಲ್ಯದಿಂದಲೂ ನಾನು ಬೆಳೆದಿದ್ದು ಇಲ್ಲೇ. ಇನ್ನು ರಾಜಕೀಯವಾಗಿ ಹೇಳಬೇಕೆಂದರೆ ಅರಸೀಕೆರೆ ಕ್ಷೇತ್ರದಲ್ಲಿ ನಮ್ಮ ಬಿಜೆಪಿ ಪಕ್ಷ ತಳಮಟ್ಟದಿಂದ ಸಂಘಟನೆ ಆಗಬೇಕಿದೆ. ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿ ಭಾಜಪ ಪಕ್ಷ ಮೂರನೆ ಸ್ಥಾನಕ್ಕೆ ಸೀಮಿತವಾಗಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ಆದ್ದರಿಂದ ಇಲ್ಲಿ ಪಕ್ಷ ಕಟ್ಟುವಲ್ಲಿ ಶ್ರಮಿಸುತ್ತಿದ್ದೇನೆ.ಇವೆಲ್ಲವನ್ನೂ ಪಕ್ಷದ ಹಿರಿಯರು ಗಮನಿಸುತ್ತಿದ್ದಾರೆ. ಮುಂದೆ ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ.

ಅರಸೀಕೆರೆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಾದ ಶಿವಲಿಂಗೆ ಗೌಡರ ವಿರುದ್ಧ ನಿಮ್ಮ ಧ್ವನಿ ಏನು..?
ನಾನು ಇದರ ಬಗ್ಗೆ ಹೇಳುತ್ತಾ ಹೋದರೆ ಸಮಯ ಸಾಕಾಗುವುದಿಲ್ಲ. ನಾನು ಕೇವಲ ಒಂದೇ ವಿಚಾರ ಹೇಳಿ ಮುಗಿಸುವೆ. ನಾನೊಬ್ಬ ಭಾಜಪದ ಕಾರ್ಯಕರ್ತನಾಗಿ ಎಲ್ಲ ಸಮಾಜವನ್ನು ಜೊತೆಗೆ ತೆಗೆದುಕೊಂಡು ಹೋಗಲು ಪ್ರಯತ್ನ ಮಾಡುತ್ತಿದ್ದೇನೆ. ಆದರೆ, ಅವರೊಬ್ಬ ಶಾಸಕರಾಗಿ ಅರಸೀಕೆರೆ ನಗರಸಭೆ ಅಧ್ಯಕ್ಷ ಸ್ಥಾನ ದಲಿತರಿಗೆ ಮೀಸಲಾತಿ ಹೊರಡಿಸಿದ ಸರ್ಕಾರದ ಆದೇಶದ ವಿರುದ್ದ ಸುಪ್ರೀಂಕೋರ್ಟ್‍ಗೆ ಹೋದರೂ ಸರಿ, ದಲಿತ ಮೀಸಲಾತಿಯನ್ನು ತೆರವು ಮಾಡಿಸುವೆ ಎಂಬ ಮಾತುಗಳನ್ನಾಡಿದ್ದು ಇಡೀ ದಲಿತರಿಗೆ ಮಾಡಿದ ಅಪಮಾನ. ಅರಸೀಕೆರೆ ಕ್ಷೇತ್ರದಲ್ಲಿ ದಲಿತ ಕೇರಿಗಳಿಗೆ ಸಿಮೆಂಟ್ ರಸ್ತೆ ಬಿಟ್ಟರೆ ಇನ್ನೂ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿರುವ ಪ್ರಬುದ್ಧ ಮತದಾರರು ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ.

ಉತ್ತರ ಕರ್ನಾಟಕ ನೆರೆ ಹಾವಳಿಗೆ ಸಿಲುಕಿ ಜನ ತೀವ್ರ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬುದು ಅಲ್ಲಿನ ಜನರ ವಾದ..?
ನಾನು ನಿಮಗೆ ಒಂದು ಮಾತು ಹೇಳಲು ಇಷ್ಟ ಪಡುತ್ತೇನೆ. ರೊಟ್ಟಿ ಊಟ ಮಾಡಿ ಮಾಡಿ ನನಗೆ ಮುದ್ದಾ ಊಟ ಮರೆತೆ ಹೋಗಿದೆ. ಏಕೆಂದರೆ ನಮ್ಮ ನಾಯಕ ಬಿ.ಎಸ್.ವೈ.ಯವರ ಜೊತೆ ಕೊಪ್ಪಳ, ರಾಯಚೂರು, ಬಳ್ಳಾರಿ, ಕಲಬುರಗಿ, ಬೆಳಗಾವಿ ಹೀಗೆ ಉತ್ತರ ಕರ್ನಾಟಕ ಪ್ರವಾಸದಲ್ಲಿ ನಾನು ನೋಡಿದ ಹಾಗೇ ಯಡಿಯೂರಪ್ಪನವರಿಗೆ ಉತ್ತರ ಕರ್ನಾಟಕ ಅಭಿವೃದ್ಧಿಯ ಬಗ್ಗೆ ವಿಶೇಷ ಒಲವಿದೆ. ಈಗಾಗಲೇ ಮುಖ್ಯಮಂತ್ರಿಗಳು ಅನೇಕ ಪರಿಹಾರ ಕಾರ್ಯಗಳನ್ನು ಕೈಗೊಂಡಿದ್ದಾರೆ. ಜನರ ದಾರಿ ತಪ್ಪಿಸಲು ರಾಜಕೀಯ ಪ್ರೇರಿತ ಹೇಳಿಕೆಗಳು ಕೊಡುತ್ತಿರುವುದು ವಿರೋಧ ಪಕ್ಷಗಳ ಹತಾಶೆ ತೋರಿಸುತ್ತದೆ.

ರಾಜ ರಾಜೇಶ್ವರಿ ನಗರ ಮತ್ತು ಶಿರಾ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಿಮ್ಮ ಭಾಜಪ ಅಭ್ಯರ್ಥಿಗಳು ಗೆದ್ದಿದ್ದಾರೆ.ನಿಮಗೆ ಮೊದಲೇ ಗೆಲುವಿನ ನಿರೀಕ್ಷೆ ಇತ್ತಾ..?
ಜೆಡಿಎಸ್ ಮತ್ತು ಕಾಂಗ್ರೆಸ್ ಅನೈತಿಕ ಒಪ್ಪಂದದಿಂದ ಮೈತ್ರಿ ಸರ್ಕಾರ ಮಾಡಿಕೊಂಡಾಗ, ಮನನೊಂದ ಪ್ರತಿಯೊಬ್ಬ ತಾಯಂದಿರು ದೇವರಿಗೆ ಒಂದು ಹೂ ಇಟ್ಟು ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದರು. ಅದರ ಪ್ರತಿಫಲವೇ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಸರ್ವರಿಗೂ ಸಮಪಾಲು ಸಮಬಾಳು ಎಂಬ ಸಿದ್ಧಾಂತದಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಕಾರ್ಯಗಳನ್ನು ಮೆಚ್ಚಿ ಜನರು ಮತ ನೀಡಿ ಕಳೆದ ಬಾರಿ ಉಪಚುನಾವಣೆಯಲ್ಲಿ 12 ಭಾಜಪ ಅಭ್ಯರ್ಥಿಗಳನ್ನು ಮತ್ತು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಮತ ನೀಡಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮುಖಾಂತರ ಯಡಿಯೂರಪ್ಪನವರ ನೇತೃತ್ವದ ಭಾಜಪ ಸರ್ಕಾರಕ್ಕೆ ಆಶೀರ್ವಾದ ಮಾಡಿರುವುದು ಸಂತಸದ ವಿಚಾರ. ಈ ಗೆಲುವಿಗೆ ಕಾರಣಕರ್ತರಾದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ.

ಆಗಾಗ ನಿಮ್ಮ ಸ್ವಪಕ್ಷೀಯರೇ ಮುಖ್ಯಮಂತ್ರಿಯ ಬದಲಾವಣೆಯ ಬಗ್ಗೆ ಕೂಗು ಎಬ್ಬಿಸುತ್ತಾರೆ. ಹಾಗಾದರೆ ಮುಂದಿನ ಮುಖ್ಯಮಂತ್ರಿ ಯಾರು..?
ಈಗಾಗಲೇ ಪಕ್ಷದ ಹೈ ಕಮಾಂಡ್ ತೀರ್ಮಾನಿಸಿದಂತೆ ಖಂಡಿತವಾಗಿ ರೈತ ನಾಯಕ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯ ಮಂತ್ರಿಯಾಗಿ ಪೂರ್ಣ ಅವಧಿ ಮುಗಿಸುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಪಕ್ಷದ ಒಳಗೆ ಸಣ್ಣಪುಟ್ಟ ಭಿನ್ನಭಿಪ್ರಾಯಗಳಿದ್ದರೆ ಅದನ್ನು ಯಡಿಯೂರಪ್ಪನವರು ಹಿರಿಯರ ಜತೆ ಕುಳಿತು ಚರ್ಚೆ ಮಾಡಿ ಬಗೆಹರಿಸಿಕೊಂಡು ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುತ್ತಾರೆ.

ನೀವು ಅತ್ಯಂತ ಕಿರಿಯ ವಯಸ್ಸಿನಲ್ಲೇ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾದವರು. ನಿಮ್ಮ ರಾಜಕೀಯ ಕಾರ್ಯದರ್ಶಿಯ ಹುದ್ದಾಯ ಅನುಭವ ಹೇಗಿದೆ..?
ನನಗೆ ಇದು ಹೊಸದಲ್ಲ. ಏಕೆಂದರೆ ನಮ್ಮ ನಾಯಕ ಬಿ.ಎಸ್.ವೈ ಅವರ ಜತೆ ನಾನು ಕಳೆದ ಎಂಟು ವರ್ಷಗಳಿಂದ ಇದೇ ಕೆಲಸವನ್ನು ಮಾಡಿಕೊಂಡು ಬಂದಿರುವೆ. ಈಗ ಅಧಿಕೃತವಾಗಿ ಸರ್ಕಾರಿ ಕಚೇರಿ ಮತ್ತು ವಾಹನ ನೀಡಲಾಗಿದೆ ಜೊತೆಗೆ ವಿಸಿಟಿಂಗ್ ಕಾರ್ಡ್ ಸಿಕ್ಕಿದೆ ಅಷ್ಟೇ ವ್ಯತ್ಯಾಸ.

ನಿಮ್ಮ ಬಿಡುವಿನ ಸಮಯದಲ್ಲಿ ನಿಮ್ಮ ಹವ್ಯಾಸಗಳೇನು..ರಾಜಕೀಯ ಜೀವನದಲ್ಲಿ ನಿಮ್ಮ ಧರ್ಮಪತ್ನಿಯವರ ಸಹಕಾರ ಹೇಗಿದೆ..?
ನಾನೊಬ್ಬ ಪುಸ್ತಕ ಪ್ರೇಮಿ. ಓದುವ, ಬರೆಯುವ ಹವ್ಯಾಸ ಇದೆ. ಕಾರಿನಲ್ಲಿ ನಾನೊಬ್ಬನೇ ದೂರ ಪ್ರಯಾಣ ಮಾಡಿ ಜನರೇ ಇಲ್ಲದ ಪ್ರದೇಶದಲ್ಲಿ ಒಂಟಿಯಾಗಿ ಪ್ರಸ್ತುತ ವಿಚಾರಗಳ ಬಗ್ಗೆ ಆಲೋಚಿಸುವ ಅಭ್ಯಾಸವಿದೆ. ಇನ್ನೂ ಹೆಚ್ಚಿನ ಸಮಯ ಸಿಕ್ಕರೆ ನನ್ನ ನೆಚ್ಚಿನ ಕೇದಾರನಾಥ ದೇವಾಲಯಕ್ಕೆ ತೆರಳಿ ಮನಸ್ಸಿಗೆ ನೆಮ್ಮದಿಯನ್ನು ಪಡೆದುಕೊಳ್ಳುವೆ.

ಇನ್ನು ನನ್ನ ಧರ್ಮ ಪತ್ನಿಯಿಂದ ನನಗೆ ಬಹಳ ಸಕಾರಾತ್ಮಕ ಸ್ಪಂದನೆ ಸಿಗುತ್ತಿರುವುದು ಬಹಳ ಸಂತಸದ ವಿಚಾರ. ಪ್ರತಿಯೊಂದು ವಿಚಾರದ ಬಗ್ಗೆ ಪತ್ನಿಯ ಜೊತೆ ಚರ್ಚಿಸುವೆ. ದಿನದಲ್ಲಿ ಒಂದು ಗಂಟೆಯಾದರೂ ನಾವಿಬ್ಬರೂ ಸಮಾಜದ ಆಗು-ಹೋಗುಗಳ ಬಗ್ಗೆ ಮಾತನಾಡುತ್ತೇವೆ.

ಕೊನೆಯ ಪ್ರಶ್ನೆ.. ನಮ್ಮ ಈ ಸಂಜೆ ಪತ್ರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು..?
ತುಂಬಾ ಒಳ್ಳೆಯ ಪ್ರಶ್ನೆ.. ನಾನು ಗಮನಿಸಿದ ಹಾಗೇ ಮುಖ್ಯಮಂತ್ರಿ ಯಡಿಯೂರಪ್ಪನವರು ಮಧ್ಯಾಹ್ನ 2 ಗಂಟೆಯಾದರೆ ಸಾಕು ಅವರೇ ಖುದ್ದಾಗಿ ಈ ಸಂಜೆ ಪತ್ರಿಕೆಯನ್ನು ತರಿಸಿಕೊಂಡು ಓದುತ್ತಾರೆ. ಅದರಲ್ಲಿ ಬಂದ ವರದಿಗಳನ್ನು ಗಮನಿಸಿ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿರುವುದನ್ನು ನಾನು ನೋಡಿದ್ದೇನೆ. ನಾಳೆಯ ಸುದ್ದಿಯನ್ನು ಇಂದೇ ನಮ್ಮೆಲ್ಲರಿಗೂ ತಿಳಿಸುವ ಈ ಸಂಜೆ ಪತ್ರಿಕೆ ಮತ್ತಷ್ಟು ಓದುಗರಿಗೆ ತಲುಪಲಿ ಎಂಬುದು ನನ್ನ ಶುಭ ಹಾರೈಕೆ.. ಧನ್ಯವಾದ.

ಮಹಾಂತೇಶ್ ಬ್ರಹ್ಮ
E-mail:-MahantheshBrahma@gmail.com

Facebook Comments