ದ್ವೀಪದಂತಿರುವ ಈ ಶಾಲೆಯಲ್ಲಿ ಹಾವು-ಚೇಳು, ಕಪ್ಪೆ-ಕ್ರಿಮಿಕೀಟಗಳ ಮಕ್ಕಳ ಪಾಠ-ಆಟ..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ನ.6- ಈ ಶಾಲೆ ದ್ವೀಪವಿದ್ದಂತೆ. ಪ್ರತಿ ಬಾರಿ ಮಳೆ ಬಂದಾಗಲೂ ಇಡೀ ಶಾಲೆ ಮುಳುಗಡೆಯಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಹಾವು-ಚೇಳು , ಕಪ್ಪೆ ಮತ್ತಿತರ ಕ್ರಿಮಿ ಕೀಟಗಳೊಂದಿಗೆ ಪಾಠ ಕೇಳಬೇಕಾದ ಅನಿವಾರ್ಯತೆ ಎದುರಾಗಿದೆ.  ಎಲ್ಲಪ್ಪಾ ಇರೋದು…. ಇಂತಹ ಶಾಲೆ ಅನ್ಕೊಂಡ್ರಾ. ಕಲ್ಪತರು ನಾಡು ತುಮಕೂರಿನ ಸಿದ್ದಗಂಗಾ ಮಠದ ಕೂಗಳತೆ ದೂರದ ಬಡ್ಡಿಹಳ್ಳಿಯಲ್ಲಿ ಇರುವುದೇ ಈ ನತದೃಷ್ಟ ಶಾಲೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಾಗ ಶಾಲಾ-ಕಾಲೇಜುಗಳು ಮುಳುಗಡೆಯಾಗುತ್ತವೆ. ಆದರೆ ನಮ್ಮ ಮಕ್ಕಳು ಓದುತ್ತಿರುವ ಈ ಶಾಲೆ ಪ್ರತಿ ಮಳೆಯಲ್ಲೂ ಮುಳುಗಡೆಯಾಗುತ್ತದೆ. ಇಂತಹ ಹೀನಾಯ ಸ್ಥಿತಿಯಲ್ಲಿ ನಮ್ಮ ಮಕ್ಕಳು ಪಾಠ ಕೇಳುವುದನ್ನು ತಪ್ಪಿಸಿ ಎಂದು ಸತ್ಯಾಗ್ರಹದ ಹಾದಿ ಹಿಡಿದಿದ್ದಾರೆ ಪೋಷಕರು.

ಅಕ್ಷರ ದಾಸೋಹಿಗಳಾದ ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರ ಸಿದ್ದಗಂಗಾ ಮಠದ ಕೂಗಳತೆ ದೂರದಲ್ಲಿ ಇರುವ ಶಾಲೆಯ ಈ ಸ್ಥಿತಿಯನ್ನು ಹೋಗಲಾಡಿಸಿ ನೂತನ ಕಟ್ಟಡ ನಿರ್ಮಿಸಿ ಎಂದು ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ಒಳಪಡುವ ಬಡ್ಡಿ ಹಳ್ಳಿಯ ಶಾಲೆ ಕೆರೆ ದಡದಲ್ಲಿರುವುದರಿಂದ ವರ್ಷದಲ್ಲಿ 4-5 ತಿಂಗಳು ದ್ವೀಪದಂತಾಗುತ್ತದೆ.

ಈ ಕಟ್ಟಡ 25 ವರ್ಷಗಳಷ್ಟು ಪುರಾತನವಾಗಿದ್ದರೂ ಕಳೆದ 10 ವರ್ಷಗಳಿಂದೀಚೆಗೆ ನೀರಿನಲ್ಲಿ ಮುಳುಗುತ್ತಿದೆ. ಕೆರೆಯ ನೀರು ಶಾಲೆಗೆ ನುಗ್ಗಿರುವುದರಿಂದ ಮಕ್ಕಳ ಪಾಠ ಪ್ರವಚನಕ್ಕೆ ಬಹಳ ತೊಂದರೆಯಾಗಿದೆ. 1 ರಿಂದ 7 ನೇ ತರಗತಿವರೆಗೂ 150ಕ್ಕೂ ಹೆಚ್ಚು ಮಕ್ಕಳು ನತದೃಷ್ಟ ಶಾಲೆಯಲ್ಲಿ ಪಾಠ ಕೇಳುತ್ತಿದ್ದಾರೆ. ಇದರ ಜತೆಗೆ ಕೊಳಚೆ ನೀರು ಸೇರಿಕೊಳ್ಳುತ್ತಿದೆ. ಅಲ್ಲದೆ ನೀರು ನಿಂತಲ್ಲೇ ನಿಂತ ಪರಿಣಾಮ ಶಾಲೆ ಆವರಣದಲ್ಲಿ ದುರ್ವಾಸನೆ ಬೀರುತ್ತಿದೆ. ಸೊಳೆಗಳ ಕಾಟ ಒಂದೆಡೆಯಾದ್ರೆ, ಹಾವು ಚೇಳು ಕಾಟವಂತೂ ಹೇಳ ತೀರದಾಗಿದೆ.

ಇತ್ತೀಚೆಗೆ ಕೆರೆ ಮಲಿನಗೊಂಡು ದುರ್ವಾಸನೆ ಬೀರುತ್ತಿರುವುದರಿಂದ ಸುತ್ತಮುತ್ತಲಿನ ಕೆಲ ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ. ಆದರೆ ಬಡ್ಡಿ ಹಳ್ಳಿಯ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಮಾತ್ರ ಇಂತಹ ಹೀನಾಯ ಸ್ಥಿತಿಯಲ್ಲೇ ಪಾಠ ಕಲಿಯಬೇಕಾಗಿದೆ. ನಮ್ಮ ಶಾಲೆಯ ಶೋಚನೀಯ ಸ್ಥಿತಿ ಬಗ್ಗೆ ಸಂಬ0ಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನಮ್ಮನ್ನು ಇಂತಹ ಸ್ಥಿತಿಯಿಂದ ಪಾರು ಮಾಡಿ ಎಂದು ವಿದ್ಯಾರ್ಥಿ ಶಿವರಾಜ್ ಅಳಲು ತೋಡಿಕೊಂಡಿದ್ದಾನೆ.

ಶಾಲೆಯ ಇಂತಹ ಸ್ಥಿತಿಯಿಂದಾಗಿ ಶಿಕ್ಷಕರು ಕಳೆದ 10 ವರ್ಷಗಳಿಂದ ಎದುರಿನಲ್ಲೇ ಇರುವ ಅಂಗನವಾಡಿ ಕಟ್ಟಡದಲ್ಲಿ ಪಾಠ ಮಾಡುತ್ತಿದ್ದಾರೆ. ಎರಡು ಕೊಠಡಿಗಳಿರುವ ಅಂಗನವಾಡಿ ಕೇಂದ್ರದಲ್ಲಿ ಬೆಳಗ್ಗೆ 8ರಿಂದ 11 ಗಂಟೆಯವರೆಗೂ ಒಂದರಿAದ ನಾಲ್ಕನೆ ತರಗತಿ ಮಕ್ಕಳಿಗೆ 11 ರಿಂದ ಸಂಜೆ 5 ಗಂಟೆಯವರೆಗೆ , 5ರಿಂದ 7ನೆ ತರಗತಿಯ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಅವನತಿಯ ಅಂಚಿನಲ್ಲಿರುವ ಬಡ್ಡಿ ಹಳ್ಳಿಯ ಶಾಲೆಯನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲು 59 ಲಕ್ಷ ಹಣ ಬಿಡುಗಡೆಯಾಗಿದ್ದರೂ ಇನ್ನು ಕೆಲಸ ಆರಂಭವಾಗಿಲ್ಲ. ಕೂಡಲೇ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾನವ ಹಕ್ಕುಗಳ ಹೋರಾಟ ಸಮಿತಿ ಮುಖಂಡ ಸಿದ್ದಲಿಂಗೇಗೌಡ ಎಚ್ಚರಿಸಿದ್ದಾರೆ.

ಶಿಕ್ಷಣ ಕ್ಷೇತ್ರದ ತವರೂರು ಎಂದೇ ಖ್ಯಾತಿಯಾಗಿರುವ ತುಮಕೂರಿನಲ್ಲಿರುವ ಈ ಶಾಲೆಯ ಪರಿಸ್ಥಿತಿ ಹೋಗಲಾಡಿಸಿ ಇಲ್ಲಿನ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂಬುದೇ ಈ ವರದಿಯ ಉದ್ದೇಶ.

Facebook Comments